Bhavani Revanna: ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ – ಕೋರ್ಟ್ ನಲ್ಲಿ ನಡೆದ ವಾದ, ಪ್ರತಿವಾದಗಳು ಏನು?
Bhavani Revanna: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯು ನಿನ್ನೆ (ಮೇ 29) ನಡೆದಿದೆ. ಈ ವೇಳೆ ವಾದ-ಪ್ರತಿವಾದ ಹೇಗಿತ್ತು, ನ್ಯಾಯಾಲಯ ಏನು ಹೇಳಿತು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಭವಾನಿ ರೇವಣ್ಣ(Bhavani Revanna) ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮೇ 31ರವರೆಗೆ ತೀರ್ಪು ಕಾಯ್ದಿರಿಸಿದೆ. ಮೇ 31ರಂದು ನ್ಯಾಯಾಲಯವು ಆದೇಶ ಹೊರಡಿಸಲಿದ್ದು, ಅಲ್ಲಿಯವರೆಗೆ ಭವಾನಿ ರೇವಣ್ಣ ಕಾಯಬೇಕಿದೆ. ಇನ್ನು, ಮೇ 31ರಂದು ಆಗಮಿಸಲಿರುವ ಪ್ರಜ್ವಲ್ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನೂ ಮೇ 31ಕ್ಕೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ. ಹಾಗಾಗಿ, ಮೇ 31 ತಾಯಿ-ಮಗನಿಗೆ ಪ್ರಮುಖ ದಿನವಾಗಿದೆ.
ಭವಾನಿ ಪರ ವಕೀಲರ ವಾದ ಏನು?
ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, “ಎಫ್ಐಆರ್(FIR) ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ.
ಕೆಆರ್ ನಗರ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರಿಲ್ಲ ಮತ್ತು ಭವಾನಿ ವಿರುದ್ಧ ಯಾರೊಬ್ಬರೂ ಹೇಳಿಕೆ ನೀಡಿಲ್ಲ. ಫೋನ್ ಸಂಭಾಷಣೆಯನ್ನೇ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಭವಾನಿ ವಿರುದ್ಧ ನೇರವಾಗಿ ಆರೋಪ ಮಾಡುವ ಸಾಕ್ಷ್ಯಗಳಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎಂಬ ನಂಬಿಕೆ ಇಲ್ಲ. ಅಗತ್ಯ ಇದ್ದಲ್ಲಿ ತನಿಖೆಗೆ ಭವಾನಿ ಸಹಕಾರ ನೀಡುತ್ತಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು” ಎಂದರು.
ಎಸ್‌ಪಿಪಿ ವಾದವೇನಿತ್ತು?
ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ರೂಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣದ ಹಿಂದೆ ಇವರ ಕೈವಾಡವಿದೆ. ಸಂತ್ರಸ್ತ ಮಹಿಳೆಗೆ ಊಟ ನೀರು, ಸರಿಯಾಗಿ ಕೊಟ್ಟಿಲ್ಲ. ಆಕೆಗೆ ಬಟ್ಟೆ ಸೀರೆಯನ್ನು ಕೊಟ್ಟಿಲ್ಲ. ಆರೋಪಿ ಸತೀಶ್ ಬಾಬಣ್ಣ ಜತೆ ಭವಾನಿ ಮಾತನಾಡಿದ್ದಾರೆ. ಆರೋಪಿ ಸತೀಶ್ ಬಾಬಣ್ಣ ಕೇಳಿದಾಗ ಭವಾನಿಯವರು ಆಯ್ತು 150 ರೂಪಾಯಿ ಅಥವಾ 200 ರೂಪಾಯಿ ಸೀರೆ ಕೊಡ್ಸು ಎಂಬುದಾಗಿ ಸೂಚಿಸಿದ್ದಾರೆ. ಬಾಬಣ್ಣ ಮೇ3 ರಂದು ಸಂತ್ರಸ್ತೆಯಿಂದ ವೀಡಿಯೋ ಮಾಡಿಸಿದ್ದಾರೆ. ಸಂತ್ರಸ್ತೆಯ ಮೊಬೈಲ್ ಕಿತ್ಕೊಂಡು, ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.
ಸಂತ್ರಸ್ತೆ ಮಗಳ ಹೇಳಿಕೆ, ಡಾಕ್ಟರ್ ಹೇಳಿಕೆ ಎಲ್ಲಾ ಸಾಕ್ಷಿಗಳು ಇವೆ. ರಾಜಕೀಯ ಪ್ರಭಾವ ಇರುವ ಮಹಿಳೆಯ ವಿಚಾರಣೆ ಬಹಳ ಅಗತ್ಯವಿದೆ. ಯಾವುದೇ ಬೆದರಿಕೆ ಇಲ್ಲದೇ ಇದ್ದರೂ ಓಡಿ ಹೋಗಿದ್ದು ಯಾಕೆ? ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು.
ಹೀಗಾಗಿ ಈ ಎಲ್ಲಾ ವಾದ, ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಮೇ 31ರಂದು ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.
4 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಜೂ.3ಕ್ಕೆ ವಿಚಾರಣೆ ಮುಂದೂಡಿಕೆ
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನವೀನ್ ಗೌಡ, ಎಚ್.ಪಿ. ಪುಟ್ಟರಾಜು, ಕಾರ್ತಿಕ್ ಹಾಗೂ ಚೇತನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೂನ್ 3 ಕ್ಕೆ ಮುಂದೂಡಲಾಗಿದೆ.