Belthangady: ಅಕ್ರಮ ಕಲ್ಲುಗಾಣಿಗಾರಿಕೆ ಆರೋಪ; ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ
ಠಾಣೆಯಲ್ಲಿಯೇ ಕುಳಿತ ಶಾಸಕ, ಕ್ಯಾರೇ ಎನ್ನದ ಪೊಲೀಸರು
Belthangady: ಅಕ್ರಮ ಕಲ್ಲು ಕೋರೆಗೆ ಸಂಬಂಧಿಸಿದಂತೆ ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದಲ್ಲಿ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ (Harish Poonja) ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿದ್ದು, ಕಲ್ಲಿನ ಕೋರೆ ಬಳಿ ಸ್ಪೋಟಕಗಳು ಹಾಗೂ ವಿವಿಧ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಅಕ್ರಮ ಕಲ್ಲು ಕೋರೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಥಳದಲ್ಲಿದ್ದ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಕೆಲ ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕೋರೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.
ಈ ಅಕ್ರಮ ಕಲ್ಲು ಕೋರೆಯನ್ನು ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿ ರಾಜ್ ಶೆಟ್ಟಿ ಅವರು ನಡೆಸುತ್ತಿರುವ ಆರೋಪದ ಮೇಲೆ ಪೊಲೀಸರು ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ.
ಪೊಲೀಸರು ದಾಳಿಯ ವೇಳೆ ಒಂದು ಕಂಪ್ರೆಸರ್ ಮಿಷಿನ್, ಸ್ಪೋಟಕಗಳು, ಹಿಟಾಚಿ, ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅನೇಕ ದಿನಗಳಿಂದ ಈ ಭಾಗದಲ್ಲಿ ಅಕ್ರಮ ಕಲ್ಲು ಕೊಲೆ ನಡೆಯುತ್ತಿರುವ ಕುರಿತು ನಿರಂತರ ದೂರುಗಳು ಬಂದ ಕಾರಣ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮ ಕಲ್ಲಿನ ಕೋರೆಯನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಹರೀಶ್ ಪೂಂಜಾರು ಆಪ್ತ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಪೊಲೀಸರು ರಾತ್ರಿ ವೇಳೆ ಬಂಧಿಸಿದ್ದು, ಶಾಸಕ ಹರೀಶ್ ಪೂಂಜಾರು ರಾತ್ರಿಯೇ ಠಾಣೆಗೆ ಬಂದು ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: Air India: ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ ನಲ್ಲಿ ಬೆಂಕಿ ;ತುರ್ತು ಭೂ ಸ್ಪರ್ಶ
ಆದರೆ ಇದಕ್ಕೆ ಪೊಲೀಸರು ಒಪ್ಪದೇ ಇದ್ದಾಗ ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಮ್ಮದು ಸರ್ಕಾರ ಬರುತ್ತದೆ ಆಗ ನಿಮ್ಮನ್ನು ನೋಡ್ಕೋತೀನಿ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದಾದ ಮೇಲೆ ಪೊಲೀಸ್ ಠಾಣೆಯಲ್ಲಿ ದೊಡ್ಡ ನಾಟಕ ನಡೆದಿದ್ದು, ಬಂದಿತರನ್ನು ಬಿಡುವವರೆಗೂ ನಾನು ಈ ಜಾಗದಿಂದ ಕದಲುವುದಿಲ್ಲ ಎಂದು ಠಾಣೆಯ ನೆಲದ ಮೇಲೆ ಕುಳಿತು ಹರೀಶ್ ಪೂಂಜಾರು ಪ್ರತಿಭಟಿಸಿದ್ದಾರೆ.
ಇದೇ ವೇಳೆ ಹರೀಶ್ ಪೂಂಜಾ ಮಾಧ್ಯಮಗಳೊಂದಿಗೆ ಮಾತನಾಡಿ ಪೊಲೀಸರು ತಡರಾತ್ರಿ ಶಶಿರಾಜ್ ಶೆಟ್ಟಿ ಅವರ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿದ ಶಾಸಕರು, ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
[…] […]