BJP ಸದಸ್ಯತ್ವಕ್ಕೆ ಸಂಸದ ಕರಡಿ ಸಂಗಣ್ಣ ರಾಜೀನಾಮೆ!!
BJP: 2024ರ ಲೋಕಸಭಾ ಚುನಾವಣೆಲ್ಲಿ ಬಿಜೆಪಿ ಟಿಕೆಟ್ ಕೊಡದ ಕಾರಣಕ್ಕಾಗಿ ನಿರಾಸೆಗೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ(Sanganna Karadi) ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಬಿಜೆಪಿ(BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹೌದು, ಈ ಸಲ ಇತರ ಕ್ಷೇತ್ರಗಳ ಹಾಲಿ ಸಂಸದರಿಗೆ ಕೋಕ್ ಕೊಟ್ಟಂತೆ ಬಿಜೆಪಿಯು ಕೊಪ್ಪಳದ(Koppala) ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೂ ಶಾಕ್ ನೀಡಿ ಬಸವರಾಜ ಕ್ಯಾವಟೋರ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಬಂಡಾಯದ ಕಹಳೆ ಊದಿದ್ದ ಸಂಗಣ್ಣ ಕರಡಿ ಕೊನೆಗೂ ಕಾಂಗ್ರೆಸ್ ಕದ ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಂಸತ್ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷ ಬಸವರಾಜ ಅವರಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡ ಸಂಗಣ್ಣ ಪಕ್ಷದ ಚಟುವಟಿಕೆಗಳಿಂದ, ಪ್ರಚಾರದಿಂದ ದೂರ ಉಳಿದಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರೆಬೆಲ್ ಸಂಸದ ಕರಡಿ ಸಂಗಣ್ಣ ನಿವಾಸಕ್ಕೆ ಲಕ್ಷ್ಮಣ ಸವದಿ (Laxman Savadi) ಭೇಟಿ ನೀಡಿದ್ದು ಭಾರೀ ಕುತೂಹಲ ಕೆರಳಿಸಿತ್ತು. ಆದರೀಗ ಅದೆಲ್ಲದಕ್ಕೂ ಉತ್ತರ ಕೊಡುವಂತೆ ಸಂಗಣ್ಣ ಕರಡಿ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.
ಅಂದಹಾಗೆ ಅವರು ಲೋಕಸಭಾಧ್ಯಕ್ಷರಿಗೆ ಇ- ಮೇಲ್ ಮೂಲಕ ರಾಜಿನಾಮೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಇ-ಮೇಲ್ ಮೂಲಕ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದಾರೆ. ಬುಧವಾರ (ಏಪ್ರಿಲ್ 17) ಸಿಎಂ ಸಿದ್ದರಾಮಯ್ಯ (CM Siddaramaiah) ಸಮ್ಮುಖದಲ್ಲಿ ಕಾಂಗ್ರೆಸ್ (Congress Karnataka) ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.