Mangaluru: ದಕ್ಷಿಣ ಕನ್ನಡ; ಕೋಮುದ್ವೇಷದಿಂದ ನಡೆದ ಎರಡು ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಆರೋಪ ಸಾಬೀತು
Mangaluru: ಉಳ್ಳಾಲ ಮತ್ತು ಮೆಲ್ಕಾರ್ ಸಮೀಪ ಕೋಮುದ್ವೇಷದ ಕಾರಣದಿಂದ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿರುವ ಕುರಿತು ವರದಿಯಾಗಿದೆ.
1. ಮಹಮ್ಮದ್ ನಾಸಿರ್ ಕೊಲೆ ಪ್ರಕರಣ
ಆ.6, 2015 ರಂದು ಮೊಹಮ್ಮದ್ ನಾಸೀರ್ ಮತ್ತು ಮೊಹಮ್ಮದ್ ಮುಸ್ತಾಫ ಅವರು ಮೆಲ್ಕಾರ್‌ನಿಂದ ಮುಡಿಪು ಕಡೆಗೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಆರೋಪಿಗಳಾದ ಕಿರಣ್(24), ವಿಜೇತ್ ಕುಮಾರ್ (22) ಅನೀಶ್ ಅಲಿಯಾಸ್ ಧನು (23), ಅಭಿ ಅಲಿಯಾಸ್ ಅಭಿಜಿತ್ (24) ಇವರುಗಳು ರಾತ್ರಿ 10.45 ಕ್ಕೆ ಬೈಕ್‌ನಲ್ಲಿ ಬಂದಿದ್ದು, ಸಜೀಪ ಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾವನ್ನು ತಡೆದಿದ್ದು, ನಂತರ ತಲವಾರಿನಿಂದ ಹಲ್ಲೆ ನಡೆಸಿದ್ದರು. ಇದರಿಂದ ಮೊಹಮ್ಮದ್ ಮುಸ್ತಾಫ ಮತ್ತು ನಾಸಿರ್ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಸೀರ್ ಮೃತ ಹೊಂದಿದ್ದರು.
ಆ.5, 2015 ರಂದು ರಾತ್ರಿ 4-5 ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಇವರು ಬಂಟ್ವಾಳ ತಾಲೂಕಿನ ಕೊಳ್ನಾಡ್ ಗ್ರಾಮದ ಆಲಬೆಯಲ್ಲಿ ವಿಜೇತ್ ಕುಮಾರ್ ಮತ್ತು ಅಭಿ ಆಲಿಯಾಸ್ ಅಭಿಜಿತ್ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಆರೋಪಿಗಳು ಸಿಟ್ಟುಗೊಂಡು, ಮುಸ್ಲಿಂ ಸಮುದಾಯದ ಯುವಕರನ್ನು ಹತ್ಯೆ ಮಾಡಲು ಸಂಚು ನಡೆಸಿದ್ದರು. ಶಿಕ್ಷೆಯ ಪ್ರಮಾಣದ ವಿಚಾರಣೆ ಎ.16 ಕ್ಕೆ ನಿಗದಿಪಡಿಸಲಾಗಿದೆ. ಇದೊಂದು ಕೋಮುದ್ವೇಷದ ಕೊಲೆ ಪ್ರಕರಣ ಎಂದು ಆರೋಪ ಸಾಬೀತಾಗಿದೆ.
2. ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣ
2016 ರಲ್ಲಿ ಎಪ್ರಿಲ್ ತಿಂಗಳಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಣದ ಹಿಂದೂಗಳು ಮತ್ತು ಮುಸ್ಲಿಂ ಯುವಕರ ನಡುವೆ ಕೋಮು ಸಂಘರ್ಷ ನಡೆಯುತ್ತಿದ್ದ ಸಮಯ. ಹಾಗಾಗಿ ಎ.12 ರ ಮುಂಜಾನೆ ಮೀನುಗಾರಿಕೆಗೆಂದು ಕೋಟೆಪುರ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ್ ಕೋಟ್ಯಾನ್ ಆಲಿಯಾಸ್ ರಾಜ (44) ಎಂಬುವವರ ಮೇಲೆ ಆರೋಪಿಗಳು ಮರದ ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ನಂತರ ಅವರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದರು.
ಮೊಹಮ್ಮದ್ ಆಸಿಫ್ ಆಲಿಯಾಚಿ ಆಚಿ, ಮೊಹಮ್ಮದ ಸುಹೈಲ್ ಆಲಿಯಾಸ್ ಸುಹೈಲ್, ಅಬ್ದುಲ್ ಮುತಾಲಿಪ್ ಆಲಿಯಾಸ್ ಮುತ್ತು, ಅಬ್ದುಲ್ ಅಸ್ವೀರ್ ಆಲಿಯಾಸ್ ಅಚ್ಚು ಮತ್ತು ಇಬ್ಬರು ಬಾಲಕರು ಪ್ರಕರಣದ ಆರೋಪಿಗಳು. ಆರೋಪಿಗಳು ಹಿಂದೂವೊಬ್ಬನನ್ನು ಕೊಲೆ ಮಾಡಬೇಕೆಂಬ ಸಂಚು ಮಾಡಿ ಕೊಲೆ ಮಾಡಿದ್ದರು. ಬಾಲಕರ ಹೊರತು ಇತರ ಆರೋಪಿಗಳ ವಿಚಾರಣೆ ನಡೆದಿದ್ದು, ಇವರ ಮೇಲಿನ ಆರೋಪ ಸಾಬೀತಾಗಿದೆ. ಎ.16 ಕ್ಕೆ ಶಿಕ್ಷೆಯ ಮೇಲಿನ ಪ್ರಮಾಣವನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಕಾದ ಇಳೆಗೆ ತಂಪೆರೆಯಲು ಬರ್ತಿದ್ದಾನೆ ವರುಣ; ಇಂದು 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ