Dakshina Kannada ಜಿಲ್ಲೆಯಲ್ಲಿ ಮಂಗನಬಾವು (ಕೆಪ್ಪಟ್ರಾಯ) ಬಾಧೆ!!!
Mangaluru: ದ.ಕ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗನಬಾವು (ಮಂಪ್ಸ್) ರೋಗ ಕಾಣಿಸಿಕೊಳ್ಳುತ್ತಿದೆ. ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಮಂಗಳೂರು, ಮುಡಿಪು ಸಹಿತ ಜಿಲ್ಲೆ ಅಲ್ಲಲ್ಲಿ ಕೆಪ್ಪಟ್ರಾಯ ಕಂಡು ಬಂದಿದೆ. ಈ ಕಾಯಿಲೆ ರೋಗ ನಿರೋಧಕ ಶಕ್ತಿ ಇಲ್ಲದವರಲ್ಲಿ ತೀವ್ರವಾಗಿ ಕಂಡು ಬರುತ್ತಿದೆ. ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. 10 ರಿಂದ 15 ದಿನದೊಳಗೆ ವೈರಸ್ ಹರಡಲು ಸಮಯ ತೆಗೆದುಕೊಳ್ಳುತ್ತದೆ.
ಜ್ವರ, ತಲೆನೋವು, ಗಂಟಲು ನೋವು ಇವು ಈ ರೋಗದ ಆರಂಭಿಕ ಲಕ್ಷಣ. ನಂತರ ಕಿವಿಯ ಗ್ರಂಥಿಯ ಬಳಿ ನೋವು ಉಂಟಾಗಿ, ಕಿವಿಯ ಬಳಿ ಊತ ಕಂಡು ಬರುತ್ತದೆ. ಸುಮಾರು ಐದು ದಿನ ದವಡೆ ದಪ್ಪವಾಗಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.
ವೈರಸ್ ಹರಡುವಿಕೆಯಿಂದ ಗದ್ದಕಟ್ಟು ರೋಗ ಕಾಣಿಸಿಕೊಳ್ಳುತ್ತದೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ವಿಶ್ರಾಂತಿ ಮುಖ್ಯ. ರೋಗ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ಎಂದು ಮಾಧ್ಯಮವೊಂದಕ್ಕೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಹೇಳಿದ್ದಾರೆ.