Dharmasthala Sowjanya Death: ಧರ್ಮಸ್ಥಳ ಸೌಜನ್ಯ ಪ್ರಕರಣ: ದೂರದ ಮೈಸೂರಲ್ಲಿ ಹೋರಾಟ – ದಕ್ಷಿಣ ಕನ್ನಡದ ಶಾಸಕ, ಸಂಸದ, ಮಂತ್ರಿ, ಮಠಾಧೀಶರ ಅಸಹನೀಯ ರಣ ಮೌನ !
Latest Dakshina Kannada news Dharmasthala Sowjanya murder case protest in Mysore Dakshina Kannada MLA Minister Abbot's Unbearable Silence
Dharmasthala Sowjanya Death: ಅಕ್ಟೋಬರ್ 9, 2012 ರಂದು ಧರ್ಮಸ್ಥಳದ ಸ್ನಾನಘಟ್ಟ ಬಳಿ 17 ವರ್ಷದ ಬಾಲಕಿಯನ್ನು ನಿಚ್ಚಳ ಮಧ್ಯಾಹ್ನ ರಾಜಾ ರಸ್ತೆಯಿಂದ ಎಳೆದು ಒಯ್ದರಲ್ಲ ? ಆ ಮೇಲೆ ಅದೆಲ್ಲಿಗೋ ಒಯ್ದು, ಅತ್ಯಾಚಾರ (Dharmasthala Sowjanya Death) ಎಸಗಿ ಕೊಲೆಗೈದು, ಮರುದಿನ ಆಕೆಯ ಶವವನ್ನು ಕಾಡಿನ ಪಕ್ಕದ ಹಳ್ಳವೊಂದರ ಬಳಿ ಬಿಸಾಡಿ ಹೋದರ ಈ ಪ್ರಕರಣವನ್ನು ಪ್ರತಿಭಟಿಸಿ ಮೈಸೂರಿನಲ್ಲಿ ಮೊನ್ನೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿದೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಈ ಪ್ರತಿಭಟನೆ, ಮೆರವಣಿಗೆಯನ್ನು ಹಮ್ಮಿಕೊಂಡಿದೆ.
ಈ ಪ್ರತಿಭಟನೆಯಲ್ಲಿ ಸೌಜನ್ಯಳಿಗೆ ನ್ಯಾಯ ಕೊಡಿಸಲು ದಶಕಗಳಿಂದ ಪ್ರಯತ್ನಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಅಮ್ಮ ಕುಸುಮಾವತಿ ಮತ್ತು ಆರೋಪಿಯಾಗಿದ್ದ ಸಂತೋಷ್ ರಾವ್ ಅಣ್ಣ ಕೂಡಾ ಭಾಗವಹಿಸಿದ್ದರು.
ಅದು ಒಂದೆಡೆಯಾದರೆ, ಇನ್ನೊಂದೆಡೆ ಮೊನ್ನೆ ಪ್ರತಿಭಟನೆ ನಡೆಸಿದ ಊರಿನಲ್ಲಿನ ಪ್ರಜ್ಞಾವಂತ ಜನರು ಒಂದು ಪ್ರಮುಖ ಪ್ರಶ್ನೆಯನ್ನು ಎತ್ತಿದ್ದಾರೆ. ಸೌಜನ್ಯಾ ಹೋರಾಟಕ್ಕೆ ಯಾಕೆ ನಿಮ್ಮ ಊರಿನ, ಸ್ಥಳೀಯ ನಾಯಕರು, ಸಂಘಟನೆಗಳು ಇಳಿಯುತ್ತಿಲ್ಲ? ನಾವು ಇಷ್ಟು ದೂರದ ಮೈಸೂರಿನಲ್ಲಿ ಮಹಿಳೆಯರನ್ನು, ಕಾರ್ಮಿಕರನ್ನು ಮತ್ತು ಮಕ್ಕಳನ್ನು ಕರೆದುಕೊಂಡು ಪ್ರತಿಭಟನೆ ಮಾಡುತ್ತೇವೆ. ಯಾಕೆ ನಿಮ್ಮ ಏನೂ ನಡೆಯುತ್ತಿಲ್ಲ ? ನಿಮ್ಮ ಊರಿನಲ್ಲಿ ಹೋರಾಟ ಮನೋಭಾವದ ಜನರೇ ಇಲ್ಲವೇ? ‘ ಎನ್ನುವ ಪ್ರಶ್ನೆಯನ್ನು ಮೈಸೂರಿನ ಉದಯಗಿರಿಯಿಂದ ಹಿಡಿದು ಇಲವಾಲಾದ ತನಕ, ಸಿದ್ದಾರ್ಥನಗರದಿಂದ ಶ್ರೀರಾಂಪುರದ ತನಕ, ನಂಜನಗೂಡು, ಕೊಳ್ಳೇಗಾಲ, ಚಾಮರಾಜನಗರ ಇತ್ಯಾದಿ ಊರುಗಳ ಉದ್ದಗಲಕ್ಕೆ ಇವತ್ತು ಅಲ್ಲಿ ಸೇರಿದ್ದ ನಾಗರಿಕರು ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರ ನೀಡಲಾಗದೆ ನಾವು ತಬ್ಬಿಬ್ಬು ಆಗಿದ್ದೆವು. ಇದರ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡದ ಪ್ರಜ್ಞೆಯನ್ನು ಮತ್ತೊಮ್ಮೆ ಬಡಿದೆಬ್ಬಿಸುವ ನಿಟ್ಟಿನಲ್ಲಿ ನಮ್ಮ ಈ ಸೌಜನ್ಯ ರಿಪೋರ್ಟ್. ಅದಕ್ಕಿಂತ ಮೊದಲು, ಮೈಸೂರಿನಲ್ಲಿ ಮೊನ್ನೆ ಏನೆಲ್ಲ ಪ್ರತಿಭಟನೆಗಳು ನಡೆದವು ಎನ್ನುವುದನ್ನು ಅವುಗಳ ಎಲ್ಲಾ ವಿವರಗಳಲ್ಲಿ ನೋಡೋಣ.
ಮೈಸೂರಿನಲ್ಲಿ ನಡೆದ ಪ್ರತಿಭಟನೆ:
ಹೌದು, ನಿನ್ನೆ ನೂರಾರು ಪ್ರತಿಭಟನಾಕಾರರು ಮೈಸೂರಿನಲ್ಲಿ ಬೀದಿಗಿಳಿದು ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದರು. ಸೌಜನ್ಯಳ ಸಾವಿಗೆ ನ್ಯಾಯಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ನಂಜರಾಜ್ ಬಹದ್ದೂರ್ ಚೌಲ್ಟ್ರಿಯಿಂದ ಗಾಂಧಿ ಚೌಕದವರೆಗೆ ಮೆರವಣಿಗೆ ನಡೆಸಿ ಘೋಷನಣೆ ಕೂಗಿದರು. ಮೈಸೂರು ಮೂಲದ NGO ಒಡನಾಡಿ ಸೇವಾ ಸಂಸ್ಥೆಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ (ಪ್ರಗತಿಪರ ಸಂಘಟನೆಗಳ ಒಕ್ಕೂಟ) ಬ್ಯಾನರ್ ಅಡಿಯಲ್ಲಿ ವಿವಿಧ ಗುಂಪುಗಳು ಭಾಗವಹಿಸಿದ್ದವು.
ಒಡನಾಡಿ ಸೇವಾ ಸಂಸ್ಥೆ ಸಂಚಾಲಕ ಸ್ಟ್ಯಾನ್ಲಿ ಪ್ರತಿಭಟನೆಯಲ್ಲಿ ನ್ಯಾಯದ ಅಗತ್ಯವನ್ನು ಒತ್ತಿ ಹೇಳಿದರು. ಈ ದೇಶದ ನಾಗರಿಕರಾಗಿ ಈ ಘಟನೆಯನ್ನು ಖಂಡಿಸುವುದು ನಮ್ಮ ಕರ್ತವ್ಯವಾಗಿದೆ. ನ್ಯಾಯ ಸಿಗುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ, ಸತ್ಯವನ್ನು ಬಯಲಿಗೆಳೆಯಲು ಮತ್ತು ನಿಜವಾದ ಅಪರಾಧಿಗಳನ್ನು ತನಿಖೆ ಮಾಡಿ ನ್ಯಾಯಾಂಗಕ್ಕೆ ತರಲು ನಾವು ಸಂಕಲ್ಪ ಮಾಡಿದ್ದೇವೆ’ ಎಂದು ಅಬ್ಬರಿಸಿದರು.
ಪ್ರತಿಭಟನೆಯಲ್ಲಿ ಸೌಜನ್ಯ ಅವರ ತಾಯಿ ಕುಸುಮಾವತಿ ಕೂಡಾ ಭಾಗವಹಿಸಿದ್ದು, ಅವರು ನ್ಯಾಯಕ್ಕಾಗಿ ನಡೆಸಿದ ಸುದೀರ್ಘ ಹೋರಾಟ ಮತ್ತು ಅನ್ಯಾಯ ಅನ್ವೇಷಣೆಯ ಸಂದರ್ಭಗಳಲ್ಲಿ ತಾವು ಅನುಭವಿಸಿದ ದುಃಖ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದರು. ಕಳೆದ ಹನ್ನೊಂದು ವರ್ಷಗಳಿಂದ ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡುವಂತೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದೇನೆ. ಧರ್ಮಸ್ಥಳಕ್ಕೆ ಭೇಟಿ ನೀಡುವ ಯುವತಿಯರು ಜಾಗೃತರಾಗಿರಬೇಕು, ನನ್ನ ಮಗಳಿಗೆ ಆಗುವ ಗತಿ ಬೇರೆ ಯಾರಿಗೂ ಆಗದಂತೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು. ಪ್ರಕರಣವನ್ನು ಪುನಃ ತೆರೆಯಲು ಮತ್ತು ಕೂಲಂಕಷವಾಗಿ ಮರು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಒತ್ತಾಯಿಸಲಾಯಿತು.
ಇದು ಕೇವಲ ಎಲ್ಲ ಸುದ್ದಿಗಳ ಥರ ಮತ್ತೊಂದು ಸುದ್ದಿಯಲ್ಲ:
ನಾವು ಇಷ್ಟು ಮಾತ್ರ ಹೇಳಿ ಬಿಟ್ಟರೆ, ಇದು ಎಲ್ಲಾ ಸುದ್ದಿಗಳ ಹಾಗೇ ಮತ್ತೊಂದು ಸುದ್ದಿ. ಆದರೆ ಇಷ್ಟಕ್ಕೆ ಮಾತ್ರ ಸುಮ್ಮನಿರಲು, ನಮ್ಮ ಪೆನ್ನನ್ನು ಮತ್ತು ಮನಸ್ಸನ್ನು ಮೊಂಡು ಮಾಡಿ ಕೂರಲು ನಮಗೆ ಮನಸ್ಸಿಲ್ಲ. ಅದಕ್ಕಾಗಿ ಈ ವಿಚಾರವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೇವೆ.
ಈ ಪ್ರಕರಣದಲ್ಲಿ ಸಿಐಡಿಯಿಂದ ಹಿಡಿದು ಸಿಬಿಐ ತನಕ ಎಲ್ಲವನ್ನೂ ಬಾಯಿ ಮುಚ್ಚಿಸಲಾಗಿದೆ ಎನ್ನುವುದು ಸ್ಥಳೀಯರ ನಂಬಿಕೆ. ಅದು ಸಣ್ಣ ಪುಟ್ಟ ಜನರಿಂದ ಸಧ್ಯ ಆಗಿರಲಾರದು. ಅದರ ಹಿಂದೆ ಬಲಾಢ್ಯ ಭೂ ಮಾಫಿಯಾ ಉಳ್ಳ ಧಣಿಗಳೇ ಇದ್ದಾರೆ ಎನ್ನುವುದು ದಕ್ಷಿಣ ಕನ್ನಡದ ಪ್ರತಿಯೊಬ್ಬರಿಗೂ ಗೊತ್ತು. ಆದ್ರೆ ಒಂದು ತೆರನಾದ ಭಯ ಇಡೀ ಜಿಲ್ಲೆಯಲ್ಲಿ ಇವತ್ತಿಗೂ ವ್ಯಾಪಿಸಿದೆ. ಇಂಥವರ ಎದುರು ಮಹೇಶ್ ಶೆಟ್ಟಿ ತಿಮರೋಡಿ ಒಬ್ರು ನಿಂತರೆ ಸಾಕಾಗಲ್ಲ. ಇಡೀ ಸಮುದಾಯಗಳೇ ನಿಲ್ಲಬೇಕು ಎನ್ನುವುದು ಹೋರಾಟಗಾರರ ಆಶಯ.
ಸೌಜನ್ಯ (Dharmasthala Sowjanya Death) ಹುಟ್ಟಿ ಬೆಳೆದು ಸತ್ತು ಹೋದ ಧರ್ಮಸ್ಥಳದಿಂದ ಮೈಸೂರು 220 ಕಿಲೋ ಮೀಟರ್ ಗಳ ದೂರದ ಊರು. ಅಲ್ಲಿಯ ಕೆಲವು ಸಂಘಟನೆಗಳು, ಚಿಂತಕರು, ಮಹಿಳೆಯರು ಕಾರ್ಮಿಕರು, ಕಡೆಗೆ ಚಿಕ್ಕ ಮಕ್ಕಳು ಕೂಡ ಇವತ್ತು ಬೀದಿಗೆ ಬಂದು ಆ ಅಮಾಯಕ ಅಪ್ರಾಪ್ತ ಸೌಜನ್ಯ ಗೌಡ ಪರ ದನಿ ಎತ್ತಿದ್ದಾರೆ. ದೂರದ ಊರಿನಿಂದ ಆಕೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಆಕೆ ಹುಟ್ಟಿದ ಬುದ್ದಿವಂತರ ಜಿಲ್ಲೆ ಏನು ಮಾಡುತ್ತಿದೆ ಗೊತ್ತೇ ?
ಈ ಅಪರಿಮಿತ ಬುದ್ದಿವಂತರೆಂದು ಕರೆಸಿಕೊಳ್ಳುವ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಿದ್ದಾರೆ. ಜಿಲ್ಲೆಯಿಂದ ದೇಶಮಟ್ಟಕ್ಕೆ ಕಾಲು ಚಾಚಿ ಬೆಳೆದವರಿದ್ದಾರೆ. ‘ಬೇಟಿ ಬಚಾವೋ ಬೇಟಿ ಪಡಾವೋ ‘ ಎಂದು ಉದ್ಘೋಷ ಕೂಗುವ ಬಿಜೆಪಿಯ 6 ಮಂದಿ ಶಾಸಕರಿದ್ದಾರೆ. ಕಳೆದ ಎರಡು ಟರ್ಮ್ 7 ಮಂದಿ ಬಿಜೆಪಿಯ ಶಾಸಕರಿದ್ದರು. ಇಲ್ಲಿಯ ಮಣ್ಣು ನೀರು ಹೀರಿ ಬೆಳೆದ ಇಬ್ಬರು ನಾಯಕರು ವಿಶ್ವದ ನಂಬರ್ 1 ನಾಯಕ, 52 ಇಂಚಿನ ಎದೆಯ ಗಟ್ಟಿಗ ಪ್ರಧಾನಿ ಒಬ್ಬರ ಕೆಳಗೆ ಕೇಂದ್ರ ಮಂತ್ರಿಗಳಾಗಿದ್ದಾರೆ. ಅಷ್ಟೇ ಅಲ್ಲದೆ, ಓರ್ವ ಇದೇ ನೆಲದ ವ್ಯಾಪ್ತಿಯಲ್ಲಿ ಲೋಕಸಭಾ ಸದಸ್ಯರೂ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓರ್ವ ರಾಜ್ಯ ಸಭಾ ಸದಸ್ಯರಿದ್ದಾರೆ. ಧರ್ಮಸ್ಥಳ ವ್ಯಾಪ್ತಿಗೆ ಬರುವ ಬೆಳ್ತಂಗಡಿ ತಾಲೂಕಿನಲ್ಲಿ ಡೈನಮಿಕ್ ಶಾಸಕ ಅನ್ನಿಸಿಕೊಂಡು ಬೀಗುತ್ತಿರುವ ಸಿಟ್ಟಿಂಗ್ ಎಂಎಲ್ಎ ಹರೀಶ್ ಪೂಂಜಾ ಇದ್ದಾರೆ. ಆದ್ರೆ ಈ ಭಾಗದಲ್ಲಿ ನಿಜಕ್ಕೂ ಜನಪರ ಕಾಳಜಿ ಉಳ್ಳ ಮಾಜಿ ಶಾಸಕ ವಸಂತ ಬಂಗೇರ ಬಿಟ್ರೆ ಬೇರೆ ಯಾರೂ ಕಾಣಿಸ್ತಾನೆ ಇಲ್ಲ. ಎಲ್ಲರೂ ತಮ್ಮ ಸ್ವಾರ್ಥಗಳ, ‘ ನಮಗ್ಯಾಕೆ ಬೇಕು ಈ ರಿಸ್ಕ್ ‘ ಅನ್ನುವ ಮನೋಭಾವದಿಂದಲೋ ಏನೋ, ತೆಪ್ಪಗೆ ಕುಳಿತಿದ್ದಾರೆ. ಇವತ್ತು ಮುಖ್ಯವಾಗಿ, ಜನರ ಪರವಾಗಿ ಈ ಭಾಗದ ಎಲ್ಲಾ ಶಾಸಕರ, ಉಳಿದ ನಾಯಕರ ಗಮನವನ್ನು ಮತ್ತೊಮ್ಮೆ ಸೆಳೆಯಲು ಮತ್ತು ಅವರನ್ನು ಕೆಣಕಿ ಕೇಳಲು ಇಚ್ಚಿಸುತ್ತಿದ್ದೇವೆ.
ದಕ್ಷಿಣ ಕನ್ನಡದ ಈ ಮಹಾನ್ ನಾಯಕರು ಯಾರೆಲ್ಲ ?
ಬೆಳ್ತಂಗಡಿಯ ಶಾಸಕ, ಸ್ಥಳೀಯ ಧರ್ಮಸ್ಥಳ ವ್ಯಾಪ್ತಿಯಲ್ಲಿ ಬರುವ ಶಾಸಕರಾಗಿರುವ ಹರೀಶ್ ಪೂಂಜಾ, ದಕ್ಷಿಣ ಕನ್ನಡದ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯದ ಮಾಜಿ ಶಾಸಕ ಮತ್ತು ಮಂತ್ರಿ ಎಸ್. ಅಂಗಾರ, ಮಂಗಳೂರು ಶಾಸಕರಾದ ಯು. ಟಿ. ಖಾದರ್ (ಗೌರವಾನ್ವಿತ ಸ್ಪೀಕರ್), ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದ ವ್ಯಾಸ್ ಕಾಮತ್, ಮೂಡ ಬಿದರೆ ಶಾಸಕ ಉಮಾನಾಥ ಕೋಟ್ಯಾನ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ರಾಜ್ಯ ಸಭಾ ಸದಸ್ಯರಾದ ವೀರೇಂದ್ರ ಹೆಗ್ಗಡೆ, ದಕ್ಷಿಣ ಕನ್ನಡ ಮೂಲದ ಕೇಂದ್ರ ಮಂತ್ರಿ, ಸೌಜನ್ಯ ಹತ್ಯೆ ಆದಾಗ ಮುಖ್ಯಮಂತ್ರಿ ಆಗಿದ್ದ, ಸೌಜನ್ಯ ಹುಟ್ಟಿರುವ ಗೌಡರದ್ದೇ ಜಾತಿಯ ನಾಯಕ ಡಿ. ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಮೂಲದ ಕೇಂದ್ರ ಮಂತ್ರಿ, ಸೌಜನ್ಯ ಗೌಡರದ್ದೇ ಜಾತಿಯ ನಾಯಕಿ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್ ಮುಂತಾದ ಘಟಾನುಘಟಿ ನಾಯಕರಗಳು ಗತ್ತಿನಿಂದ ಆಡಳಿತ ನಡೆಸುತ್ತಿದ್ದಾರೆ. ಇವರ ಜೊತೆಗೆ ಇದೀಗ ಹೊಸ ನಾಯಕರುಗಳ ಉದಯ ಆಗುತ್ತಿದೆ. ಮಹಾ ಹಿಂದೂ ಹೃದಯ ಸಾಮ್ರಾಟ್, ಮುಂದಿನ ದಕ ಎಂಪಿ, ಎಲ್ಲರ ಅಣ್ಣ ಎಂದು ಕರೆಸಿಕೊಂಡು ಇದೀಗ ವ್ಯಾಪಕ ಜನ ಬೆಂಬಲ ಗಳಿಸಿಕೊಂಡು ಸ್ಟಾರ್ ಆಗಿ ಮೆರೆಯುತ್ತಿರುವ ಅರುಣ್ ಕುಮಾರ್ ಪುತ್ತಿಲರವರು ಇದ್ದಾರೆ.
ಅಬ್ಬೋ, ಒಂದಾ ಎರಡಾ – ಸಾಲು ಸಾಲು ಘಟಾನುಘಟಿ ನಾಯಕರುಗಳು ತಾವೇ ಗ್ರೇಟ್, ಐ ಆಮ್ ಸ್ಟ್ರಾಂಗ್, ನಾನೇ ಜನಾನುರಾಗಿ, ನಾನು ಡೈನಮಿಕ್, ನಾನೊಬ್ಬಆದರ್ಶ ಶಾಸಕ, ಎಲ್ಲರಿಗಿಂತ ನಾನೇ ಸೀನಿಯರ್, ನಾನು ಹಾಲಿ ಮಂತ್ರಿ, ನಾನು ಭಾವಿ ಮಂತ್ರಿ, ನಾನು ಮುಂದಿನ ಮುಖ್ಯಮಂತ್ರಿ ಪ್ರಾಡಕ್ಟು, ನಾನು ಹಿಂದುತ್ವದ ನಾಯಕ, ನಾನು ಆದರ್ಶದ ಪ್ರತಿಪಾದಕ – ಎನ್ರಯ್ಯ ನಿಮ್ಮೆಲ್ಲರ ಕೆಪ್ಯಾಸಿಟಿ ?! ಆದ್ರೆ ಮಾಸ್ಟ್ರೆ (ಸರ್), ಇಷ್ಟೆಲ್ಲಾ ಅಭಿವೃದ್ಧಿ, ಬಾವಲಿ, ಪದಕ, ಗೂಟ, ಹಿಂದುತ್ವ ಇತ್ಯಾದಿಗಳನ್ನು ಕಟ್ಟಿಕೊಂಡು ನಿಮ್ಮ ಅಭಿಮಾನಿಗಳ ಕೈಲಿ ಪುಕ್ಕಟೆಯಾಗಿ ಹೊಗಳಿಕೊಳ್ಳುವ ನಿಮಗೆ ನಿಮ್ಮನ್ನು ಆರಿಸಿ ಕಳಿಸಿದ, ಮುಂದಕ್ಕೂ ಕಳಿಸಲಿರುವ ಜನರ ಮನಸ್ಸಿಗೆ ಸ್ಪಂದಿಸಬೇಕು ಅಂತ ಯಾಕನ್ನಿಸಿಲ್ಲ? ಯಾಕೆ ನಿಮಗೆಲ್ಲಾಸೌಜನ್ಯ ಎಂಬ ಅಮಾಯಕ ಅಪ್ರಾಪ್ತ ಹುಡುಗಿಯ ಸಾವಿಗೆ ಕಿಂಚಿತ್ತು ಸ್ಪಂದಿಸಬೇಕು ಎಂದು ನಿಮಗ್ಯಾಕೆ ಅನ್ನಿಸೋದಿಲ್ಲ ?
ದಕ್ಷಿಣ ಕನ್ನಡದ ತುಂಬಾ ಪವರ್ಫುಲ್ ಅನ್ನಿಸುವ ಮಠಾಧಿಪತಿಗಳಿದ್ದಾರೆ. ನಮ್ಮದು ಸಂಘ ಪರಿವಾರದ ಗಟ್ಟಿ ನೆಲ, ಇದು ಸಂಘ ಪರಿವಾರದ ಪ್ರಯೋಗ ಶಾಲೆ – ಹಾಗೆ ಹೀಗೆ ಎಂದು ಹೇಳಿ ಹೊಗಳಿಕೊಳ್ಳುವ ನಾಯಕರಿದ್ದಾರೆ. ಆದ್ರೆ ಯಾರೂ ಯಾಕೆ ಸೌಜನ್ಯ ಗೌಡ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿಲ್ಲ. ಎಲ್ಲಾ ಮಠಗಳಲ್ಲೂ ಕೂಡಾ ನಿಗೂಢ ಮೌನ. ನಿಮ್ಮನ್ನು ಕಟ್ಟಿ ಹಾಕುತ್ತಿರುವುದು ಯಾವ ಕಾಣದ ಕೈ ? ನಿಮ್ಮನ್ನು ಸುಮ್ಮನೆ ಇರಿಸುತ್ತಿರುವುದು ನಿಮ್ಮ ಸ್ವಾರ್ಥವಾ ಅಥವಾ ಜೀವ ಭಯವೇ ? ನಿಮ್ಮ ಊರಿನ ಹುಡುಗಿಗೆ ಒಂದು ಸಣ್ಣ ಕೂಗು ಹಾಕಲು ನಿಮಗೆ ಅಗ್ಲಿಲ್ವಲ್ಲಾ, ನಾಚಿಕೆ ಆಗಲ್ವಾ ನಿಮ್ಮ ನಾಯಕತ್ವಕ್ಕೆ ?
ಈಗ ನಿಮ್ಮಿಂದ ಜನ ಕೇಳೊದೇನು ?
ಇವತ್ತಿಗೂ ಕಾಲ ಮಿಂಚಿಲ್ಲ. ನೀವೆಲ್ಲಾ ಲೀಡರ್ಸ್. ನಿಮ್ಮಲ್ಲಿ ಒಂದಷ್ಟು ಕರುಣೆ ಮತ್ತು ಇವತ್ತು ಇಡೀ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಇಡೀ ಭಾರತ ಧರ್ಮಸ್ಥಳದ ‘ನಿರ್ಭಯಾ ‘ ಬಗ್ಗೆ ಯಾವುದನ್ನು ಬಯಸುತ್ತಿದೆಯೋ ಎಂಬುದರ ಬಗ್ಗೆ ಅವಗಾಹನೆ ನಿಮ್ಮಲ್ಲಿ ಇದ್ರೆ, ತಕ್ಷಣ ಪತ್ರಿಕಾ ಗೋಷ್ಠಿ ಕರೆದು ಹೋರಾಟಕ್ಕೆ ನಿಮ್ಮ ಬೆಂಬಲ ಘೋಷಿಸಿ. ಸಂವಿಧಾನಿಕ ಹುದ್ದೆಯಲ್ಲಿರುವ ಗೌರವಾನ್ವಿತ ಸ್ಪೀಕರ್ ಸಾಹೇಬರನ್ನು ನಾವು ಇಲ್ಲಿ ಒತ್ತಾಯಿಸುತ್ತಿಲ್ಲ. ಒಂದು ವೇಳೆ ಸೌಜನ್ಯ ಹೋರಾಟಕ್ಕೆ ನಿಮಗೆಲ್ಲ ಬೆಂಬಲ ಘೋಷಿಸಲು ಆಗದೆ ಹೋದರೆ, ನೀವೊಬ್ಬರು ಓಟಿನ ಲಾಭ ಪಡೆಯುವ ಕೇವಲ ರಾಜಕಾರಣಿ ಅಷ್ಟೇ !!! ನಿಮ್ಮಿಂದ ಆಗದೆ ಹೋದರೆ, ನೀವು ನಾಯಕ ಎನ್ನುವ ಫೋಸ್ ಕೊಟ್ಟು ನಗೆ ಪಾಟಲಿಗೆ ಗುರಿಯಾಗಬೇಡಿ.
ರಾಜ್ಯದ ಒಕ್ಕಲಿಗರ ಸಂಘ ಸೌಜನ್ಯ ಗೌಡ ಹೋರಾಟಕ್ಕೆ ಬರೋದು ಯಾವಾಗ ?
ಈ ಪ್ರಕರಣದ ಹೋರಾಟಕ್ಕೆ ಕರ್ನಾಟಕ ರಾಜ್ಯದ ಒಕ್ಕಲಿಗರ ಸಂಘ ಎಂಟ್ರಿ ಆಗಬೇಕು. ಎಲ್ಲಾ ರೀತಿಯಿಂದಲೂ ರಾಜ್ಯದಲ್ಲಿ ಬಲಿಷ್ಠ ಆಗಿರುವ ರಾಜ್ಯದ ಒಕ್ಕಲಿಗರ ಸಂಘ ಸ್ಥಳೀಯ ಹೋರಾಟಗಾರರ ಜತೆ ಕೈ ಜೋಡಿಸಬೇಕಾಗಿದೆ. ಯಾಕೆಂದರೆ, ಸಾವಾದದ್ದು ನಿಮ್ಮ ಮನೆಯಲ್ಲಿ. ತನ್ನ ಪಾಡಿಗೆ ಹುಲ್ಲು ಮೇಯುತ್ತಾ ಇರುವ ಹುಲ್ಲೆಯ ಮೇಲೆ ಹಠಾತ್ತಾನೆ ಎಗರಿದ ಹುಲಿ ಎತ್ತೊಯ್ದು ಮಾಂಸ ಭಕ್ಷಿಸಿದ ಥರ ರಸ್ತೆಯಿಂದ ಕರೆದೊಯ್ದದ್ದು ನಿಮ್ಮ ಒಕ್ಕಲಿಗ ಗೌಡರ ಮನೆಯ ಹುಡುಗಿಯನ್ನು. ಇನ್ನೂ ನೀವು ಸುಮ್ಮನೆ ಕೂತರೆ ಸಂಘಗಳ ಅಸ್ತಿತ್ವದ ಅಗತ್ಯವಾದರೂ ಯಾಕೆ ಎಂಬ ಪ್ರಶ್ನೆ ಎದುರಾದೀತು.
ಇದನ್ನೂ ಓದಿ :ಸೌಜನ್ಯಗೌಡ ಪ್ರಕರಣ ಮರು ತನಿಖೆಗೆ ಆದೇಶ ಬರ್ಬೋದು ಎಂಬ ಕಾರಣಕ್ಕೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಆಹ್ವಾನ ?!
ಸ್ಥಳೀಯ ಪ್ರಜ್ಞಾವಂತ ಓದುಗ ಮಿತ್ರರೇ, ನಿಮ್ಮ ಕ್ಷೇತ್ರದ ಪ್ರತಿನಿಧಿಗಳನ್ನು ಮುಂದಿನ ಸಲ ನೀವು ಭೇಟಿಯಾದಾಗ ಒಂದು ಖಚಿತ ಪ್ರಶ್ನೆಯನ್ನು ಅವರ ಮುಂದೆ ಇಡಲೇಬೇಕು ! ‘ ಸೌಜನ್ಯ ಹೋರಾಟಕ್ಕೆ ನಿಮ್ಮ ಬೆಂಬಲ ಇದೆಯೇ ? ಹೋರಾಟಕ್ಕೆ ನಿಮ್ಮ ಕೊಡುಗೆ ಏನು ? ಎಂದು ಪ್ರತಿಯೊಬ್ಬರೂ ತಮ್ಮ ತಮ್ಮ ಶಾಸಕರನ್ನು, ಲೋಕಸಭಾ ಸದಸ್ಯರನ್ನು, ಇತರ ಮೇಲೆ ಪಟ್ಟಿ ಮಾಡಿದ ಜನಪ್ರತಿನಿಧಿಗಳನ್ನು ನೇರವಾಗಿ ಕೇಳಿ. ಇದೀಗ ಈ ಪ್ರಶ್ನೆಯನ್ನು ಕರ್ನಾಟಕದ ದೂರದ ಊರಿನ ಜನರು ಕೇಳುತ್ತಿದ್ದಾರೆ. ಅವರಿಗೆ ನಾವೆಲ್ಲ ತುರ್ತಾಗಿ ಉತ್ತರಿಸಬೇಕಿದೆ.
ಅವತ್ತು ಮೈಸೂರಿನ ಪ್ರತಿಭಟನೆಯಲ್ಲಿ ಏನೆಲ್ಲ ನಡೆದಿತ್ತು ?
ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ:
ಪ್ರತಿಭಟನಾ ಸಭೆಯಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಮಾತನಾಡಿ ಧರ್ಮದ ನೆಲೆ ಎಂದು ನಂಬಿಕೆ ಇರುವ ಸ್ಥಳದಲ್ಲಿ ಅಪ್ರಾಪ್ತ ಬಾಲಕಿ ಸೌಜನ್ಯಾ ಕೊಲೆ ನಡೆದಿದೆ. ಒಟ್ಟಾರೆ ಅಲ್ಲಿ ಅಧರ್ಮ ನಡೆಯುತ್ತಿದೆ. ಸೌಜನ್ಯಳ ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯನ್ನು ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯವು ಹೇಳಿದೆ. ಹಾಗಿದ್ದರೆ ನೈಜ ಅಪರಾಧಿಗಳು ಯಾರೆಂಬುದು ಗೊತ್ತಾಗಬೇಕು. ಮೂಲ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಿ ಆರೋಪಿಯನ್ನು ಬಂಧಿಸಬೇಕು. ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ಹೋರಾಟ ಮುಂದುವರಿಯಬೇಕು. ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕಾನೂನು ಹೋರಾಟ ಮುಂದುವರಿಸುವುದರೊಂದಿಗೆ ಸಾಮಾಜಿಕ ಹೋರಾಟ ಮಾಡುತ್ತೇವೆ. ಮೈಸೂರಿನಿಂದ ಧರ್ಮಸ್ಥಳ ತನಕ ಜಾಥಾ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ. ಸೌಜನ್ಯ ಕುಟುಂಬದವರಿಗೆ ಬಂದ ಸ್ಥಿತಿ ಮತ್ತೆ ಯಾರಿಗೂ ಬರಬಾರದು. ಬಲಾಡ್ಯರು ಕಾನೂನನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವುದರಿಂದ ಅಮಾಯಕರಿಗೆ ನ್ಯಾಯ ಸಿಕ್ಕಿಲ್ಲ ಎಂದು ಸಿ ಬಸವಲಿಂಗಯ್ಯನವರು ಕಿಡಿ ಕಾರಿದ್ದರು.ವಿಶ್ರಾಂತ ಕುಲಪತಿ ಡಾಕ್ಟರ್ ಸಬಿಹಾ ಭೂಮಿಗೌಡ:
ಆನಂತರ ಮಾತನಾಡಿದ ವಿಶ್ರಾಂತ ಕುಲಪತಿ ಡಾಕ್ಟರ್ ಸಬಿಹಾ ಭೂಮಿ ಮಾತನಾಡಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಕಳೆದ 11 ವರ್ಷದಿಂದ ಒಂದು ಹೆಣ್ಣು ಮಗಳ ಕುಟುಂಬ ನ್ಯಾಯಕ್ಕಾಗಿ ಪರದಾಡುತ್ತಿದೆ. ಆಕೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಆ ಪೈಶಾಜಿಕ ಕೃತ್ಯ ಎಸಗಿದವರು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಕಾನೂನಿನ ಭಯ ಯಾರಿಗೂ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಎಲ್ಲಾ ಸಂಘಟನೆಗಳು ಒತ್ತಾಸೆಯಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ವಿಶೇಷ ತನಿಖಾ ತಂಡ ರಚಿಸಿ – ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್:
ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಸೌಜನ್ಯ ಪ್ರಕರಣದ ನಿಜವಾದ ಆರೋಪಿಗಳ ಪತ್ತೆಯ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಅಗತ್ಯವಿದೆ. ಈಗಾಗಲೇ ಪ್ರಕರಣದ ಸಾಕ್ಷಿ ನಾಶಕ್ಕೆ ಸಂಚು ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆ ಮಾಡಿ ಸೌಜನ್ಯಳ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಆರೋಪಿಯಾಗಿ ಬಿಡುಗಡೆ ಆಗಿದ್ದ ಸಂಜಯ್ ರಾವ್ ಮಾತನಾಡಿ, ದೇವಸ್ಥಾನಕ್ಕೆ ಹೋದ ನನ್ನ ತಮ್ಮ ಸಂತೋಷ ರಾವನ್ನು ಆರೋಪಿಯನ್ನಾಗಿ ಮಾಡಿದರು. ಯಾವ ತಪ್ಪು ಮಾಡದ ಆತ 6 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ. ಈಗ ನಿರಪರಾಧಿಯಾಗಿ ಹೊರಗೆ ಬಂದಿದ್ದಾನೆ, ನಮಗಾದ ಅನ್ಯಾಯಕ್ಕೆ ಪರಿಹಾರ ಸಿಗಬೇಕು ಎಂದು ಅವರು ಆಗ್ರಹಿಸಿದರು.
ಒಡನಾಡಿ ಸೇವಾ ಸಂಸ್ಥೆಯ ಸ್ಟಾಲಿನ್ ಮಾತನಾಡಿ ಕಾನೂನಿಗೆ ಗೋರಿ ಕಟ್ಟಿದ್ದರಿಂದ ಸೌಜನ್ಯ ಮತ್ತು ಸಂತೋಷ ರಾವ್ ನ ಮನೆ ಇವತ್ತು ಸ್ಮಶಾನದಂತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳು ಸೌಜನ್ಯ ಮನೆಗೆ ಭೇಟಿ ಕೊಡಬೇಕು ಎಂದು ಒತ್ತಾಯಿಸಿದರು. ಹೋರಾಟಗಾರ್ತಿ ಸೀಮಾ ಮಾತನಾಡಿ ತ್ವರಿತಗತಿಯಲ್ಲಿ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು. ಇವತ್ತಿಗೂ ಹೆಣ್ಣು ಮಕ್ಕಳು ಅಭದ್ರತೆಯಲ್ಲಿ ಬದುಕುವಂತಾಗಿದೆ. ಎಲ್ಲರಿಗೂ ಸೂಕ್ತ ಬದ್ಧತೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಪ್ರೊಫೆಸರ್ ಕಾಳ ಚಿನ್ಹೆಗೌಡ ಒಡನಾಡಿ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್ ವಿವಿಧ ಸಂಘಟನೆಗಳ ಮುಖಂಡರಾದ ಕೆ ವೆಂಕಟರಾಜು, ನಾ ದಿವಾಕರ್, ಅಹಿಂದ ಜವರಪ್ಪ, ಹಲಗೂರು ಶಿವಕುಮಾರ್, ಶಂಭುಲಿಂಗ ಸ್ವಾಮಿ, ರಂಗ ಕರ್ಮಿಗಳಾದ ಮೈಮ್ ರಮೇಶ್, ಸಾರಾ ಸುದರ್ಶನ್, ಸಿ. ಬಸವಲಿಂಗಯ್ಯ, ರತಿರಾವ್, ಪ್ರೊಫೆಸರ್ ಪಂಡಿತರಾಧ್ಯ, ಲ ಜಗನ್ನಾಥ್, ಚ. ಸರ್ವ ಮಂಗಳ, ಕೆಆರ್. ಸುಮತಿ, ಕೆ ಆರ್ ಗೋಪಾಲಕೃಷ್ಣ, ಉಗ್ರನರಸಿಂಹೇಗೌಡ, ಆರ್ ಎಲ್ ಎಚ್ ಪಿ ಸರಸ್ವತಿ ಎಲ್, ಶಿವಲಿಂಗಯ್ಯ, ಹರಿಹರ ಆನಂದ ಸ್ವಾಮಿ, ಮಾಜಿ ಮಹಾಪೌರ ಪುರುಷೋತ್ತಮ್, ಲಕ್ಷ್ಮಣ್ ಹೊಸಕೋಟೆ, ಮಹೇಶ್ ಶೆಟ್ಟಿ ತಿಮರೋಡಿ, ಟಿ ಗುರುರಾಜ್, ಕಲ್ಲಹಳ್ಳಿ ಕುಮಾರ್, ಸಮಾಜ ಚಿಂತಕಿ ಸವಿತಾ ಪಿ ಮ, ಕಲಿಮ್ ಷಾಶಾ ಇನ್ನಿತರರು ಪಾಲ್ಗೊಂಡಿದ್ದರು.
ಧರ್ಮದ ಕೇಂದ್ರವಾಗಲು ಮರು ತನಿಖೆಗೆ ಒಪ್ಪಬೇಕು:
ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳದಲ್ಲಿ 467 ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ನಾಡಿನ ಜನ ನಂಬಿರುವಂತೆ ಧರ್ಮಸ್ಥಳ ಧರ್ಮದ ಕೇಂದ್ರವಾಗಿಯೇ ಮುಂದುವರಿಯಬೇಕಾದರೆ ಈ ಅಸಹಜ ಸಾವಿನ ಪ್ರಕರಣಗಳ ಬಗ್ಗೆ ಆಗಬೇಕು ನಿಜವಾದ ಆರೋಪಿಗಳನ್ನು ರಕ್ಷಿಸಿದ್ದಾರೆ. ಬೆಟ್ಟಯ್ಯ ಕೋಟೆ, ದಲಿತ ಸಂಘರ್ಷ ಸಮಿತಿ ಮುಖಂಡ.