Bengaluru: ಚೆನ್ನಾಗಿ ಅಡುಗೆ ಮಾಡುತ್ತಾನೆಂದು ಅಡುಗೆ ಭಟ್ಟನನ್ನೇ ಕೊಲೆ ಮಾಡಿದ ಸ್ನೇಹಿತರು !

Latest Karnataka crime news friend murder by his friends in Bengaluru

Bengaluru: ವೃತ್ತಿ ವೈಷಮ್ಯ ಓರ್ವನ ಕೊಲೆಗೆ ಕಾರಣವಾಗಿದೆ. ಚೆನ್ನಾಗಿ ಅಡುಗೆ ಮಾಡುತ್ತಾನೆ ಎಂಬ ಕಾರಣಕ್ಕೆ ಅಡುಗೆ ಪಟ್ಟಣವನ್ನು ಆತನ ಸ್ನೇಹಿತರೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಅಡುಗೆ ಬಾಣಸಿಗನನ್ನು ಹತ್ಯೆ ಮಾಡಿದ್ದ ಮೃತನ ಮೂವರು ಸ್ನೇಹಿತರನ್ನು ಇದೀಗ ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಟೆಕ್ನಿಕಲ್ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಆನಂದ್‌ ತನ್ನ ಪತ್ನಿಯೊಂದಿಗೆ ನೆಲೆಸಿದ್ದು, ನಗರದಲ್ಲಿ ಅಡುಗೆ ಮಾಡುತ್ತ, ಅಡುಗೆ ಕಾಂಟ್ರಾಕ್ಟರ್‌ ಕೂಡಾ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಇದಕ್ಕೂ ಮೊದಲು ಆತ ಬೇರೊಬ್ಬರ ಕೈಕೆಳಗೆ ಕೆಲಸ ಮಾಡುತ್ತಿದ್ದು ಅಲ್ಲಿ ಅಡುಗೆ ಕಲಿತಿದ್ದ. ಆಗ ಅಡುಗೆ ಬಾಣಸಿಗ ಸತೀಶ್‌ ಬಳಿ ಆನಂದ್‌ ಸಹಾಯಕನಾಗಿದ್ದ. ಆದರೆ ಇತ್ತೀಚೆಗೆ ಸತೀಶ್‌ ಬಳಿ ಕೆಲಸ ತೊರೆದು ಆತ, ಸ್ವಂತ ತಂಡ ಕಟ್ಟಿಕೊಂಡು ಅಡುಗೆ ಕೆಲಸ ಮಾಡುತ್ತಿದ್ದ. ಮೃತ ಆನಂದ್‌ ಅದ್ಭುತವಾಗಿ ಅಡುಗೆ ಮಾಡುತ್ತಿದ್ದ. ಆತ ಕೈ ಹಾಕಿದರೆ ಅಡುಗೆಗೆ ತನ್ನಿಂದ ತಾನೇ ವಿಶೇಷ ರುಚಿ ಪ್ರಾಪ್ತವಾಗುತ್ತಿತ್ತು. ರುಚಿಯಾದ ಅಡುಗೆ ತಯಾರಿಸುತ್ತಿದ್ದ ಆತನ ಕೈ ರುಚಿಗೆ ಜನರು ಮರುಳಾಗಿ ಹೋಗಿದ್ದರು. ಇದರ ಪರಿಣಾಮ ಊರಲ್ಲಿ ಎಲ್ಲೇ ಏನೇ ಕಾರ್ಯಕ್ರಮ ಇರಲಿ, ಆಗ ಆನಂದ್ ಗೆ ಕರೆ ಹೋಗುತ್ತಿತ್ತು. ನಿಶ್ಚಿತಾರ್ಥ, ಮದುವೆ, ಮುಂಜಿ,ನಾಮಕರಣ, ಗೃಹ ಪ್ರವೇಶ ಸೇರಿದಂತೆ ಇತರೆ ಹಲವು ಕಾರ್ಯಕ್ರಮಗಳಲ್ಲಿ ಅಡುಗೆ ತಯಾರಿಸಲು ಆತನಿಗೇ ಹೆಚ್ಚು ಅವಕಾಶಗಳು ಸಿಗುತ್ತಿದ್ದವು. ಆನಂದ್ ಸಿಕ್ಕಾಗುವ ಪಟ್ಟೆ ವ್ಯಾಪಾರ ಕುದುರಿಸಿಕೊಂಡು ಬಿಜಿ ಆಗಿದ್ದ.

ಇತ್ತ ಆನಂದ್‌ ಹಿಂದೆ ಕೆಲಸ ಮಾಡುತ್ತಿದ್ದ ಸತೀಶ್ ನ ತಂಡ ದ ವ್ಯಾಪಾರ ಹಠಾತ್ತನೆ ಕುಸಿದಿತ್ತು. ಆನಂದ್ ತಂಡ ತೊರೆದ ಬಳಿಕ ಸತೀಶ್‌ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗಿತ್ತು ಎನ್ನಲಾಗಿದೆ. ಕ್ಯಾಂಟರಿಂಗ್‌ ಸೇವೆಯ ಗುತ್ತಿಗೆಗಳು ವಿರಳವಾಗಿದ್ದು, ವ್ಯಾಪಾರವನ್ನು ನಡೆಸದ ಹಂತಕ್ಕೆ ನಷ್ಟ ಉಂಟಾಗಿತ್ತು. ಆಗ ಸತೀಶನಲ್ಲಿ ಹಗೆತನ ಶುರುವಾಗಿತ್ತು. ತನ್ನ ಅಡುಗೆ ವ್ಯವಹಾರದ ನಷ್ಟಕ್ಕೆ ಆನಂದ್‌ನೇ ಕಾರಣ ಎಂದು ಭಾವಿಸಿ ಗೆಳೆಯನ ಮೇಲೆ ಸತೀಶ್‌ ಕಿಡಿ ಕಾರಲು ಶುರು ಮಾಡಿದ್ದ. ಕೊನೆಗೆ ತನ್ನ ವ್ಯಾಪಾರಕ್ಕೆ ಅಡ್ಡಿ ಬಂದ ಎನ್ನುವ ಕಾರಣ ಹೇಳಿಕೊಂಡು ಆನಂದ್‌ ಹತ್ಯೆಗೆ ಆತ ನಿರ್ಧರಿಸಿದ್ದ.

ಸತೀಶನ ಈ ಯೋಜನೆಗೆ ಮತ್ತಿಬ್ಬರು ಬಾಣಸಿಗರಾದ ಶಿವಕುಮಾರ್‌ ಹಾಗೂ ದೇವರಾಜ್‌ ಸಾಥ್‌ ಕೊಟ್ಟಿದ್ದರು. ಅಂತೆಯೇ ಮದ್ಯ ಸೇವನೆ ನೆಪದಲ್ಲಿ ಪೀಣ್ಯ ಸಮೀಪದ ಚನ್ನನಾಯಕನ ಹಳ್ಳಿಗೆ ಜುಲೈ 1 ರಂದು ರಾತ್ರಿ ಆನಂದ್‌ನನ್ನು ಸತೀಶ್‌ ಹಾಗೂ ಆತನ ಸಹಚರರು ಕರೆಸಿಕೊಂಡಿದ್ದರು. ಆಗ ಕಂಠಮಟ್ಟ ಮದ್ಯ ಸೇವಿಸಿದ್ದ ಸ್ನೇಹಿತರಲ್ಲಿ ಅಡುಗೆ ಕಂಟ್ರಾಕ್ಟರ್‌ ವಿಚಾರ ಪ್ರಸ್ತಾಪವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆನಂದ್‌ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿಗಳು ಹತ್ಯೆಗೈದಿದ್ದರು.

ಕೊಲೆ ನಡೆದ ನಂತರ ಮೃತದೇಹದ ಗುರುತು ಕೂಡಾ ಸಿಗಬಾರದು ಎಂದು ನಿರ್ಧರಿಸಿದ ತಂಡ, ಹತ್ಯೆ ಆಗಿದ್ದ ಆನಂದ್ ನ ಮೃತ ದೇಹಕ್ಕೆ ಡೀಸೆಲ್‌ ಸುರಿದು ಸುಟ್ಟು ಹಾಕಿ ನಂತರ ಪರಾರಿಯಾಗಿದ್ದರು. ಆದರೆ ಶವ ಪೂರ್ತಿ ಸುಟ್ಟಿರಲಿಲ್ಲ. ಮರುದಿನ ಅರೆಬೆಂದ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಆನಂದ್‌ ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭ. ಆಕೆ ಪತಿ ಮೊಬೈಲ್‌ ಕರೆ ಮಾಡಿದರೂ ಸ್ವೀಕರಿಸದೆ ಹೋದಾಗ ಅನುಮಾನಗೊಂಡು ರಾಜಗೋಪಾಲ ನಗರ ಠಾಣೆ ಪೊಲೀಸರಿಗೆ ಆಕೆ ದೂರು ನೀಡಿದ್ದಳು. ಇದೇ ಸಂದರ್ಭ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಮೃತದೇಹವು ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿ ಆನಂದ ಪತ್ನಿ ಮೃತದೇಹದ ಗುರುತು ಪತ್ತೆ ಮಾಡಿದ್ದಳು.

ಮೃತನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಹತ್ಯೆ ಹಿಂದಿನ ದಿನ ಆತನಿಗೆ ಗೆಳೆಯ ಸತೀಶ್‌ ಕರೆ ಮಾಡಿದ್ದ ಸಂಗತಿ ಗೊತ್ತಾಗಿತ್ತು. ಈ ಟೆಕ್ನಿಕಲ್ ಸುಳಿವು ಆಧರಿಸಿ ಸತೀಶನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಕ್ಕೆ ಬಂದಿತ್ತು. ಆಗ ಉಳಿದ ಆರೋಪಿಗಳಾದ ಚಿಕ್ಕ ಬಿದರಕಲ್ಲು ನಿವಾಸಿಗಳಾದ ಸತೀಶ, ದೇವರಾಜ ಹಾಗೂ ಶಿವಕುಮಾರ ಅಲಿಯಾಸ್‌ ಪುಟ್ಟ ಬಂಧಿತರಾಗಿದ್ದಾರೆ.

ಇದನ್ನೂ ಓದಿ: ರಾತ್ರೋರಾತ್ರಿ 6000 ಕೆಜಿ ತೂಕದ ಸೇತುವೆಯೇ ಕಳವು!

Leave A Reply

Your email address will not be published.