Post Office MIS: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಬಂಪರ್ ಮಾಸಿಕ ಆದಾಯ ಪಡೆಯಿರಿ!
Post Office MIS : ನೀವು ವಿಶ್ವಾಶಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಯೋಜನೆಗಳನ್ನು ಆಯ್ಕೆ ಮಾಡಬಹುದು. ಪೋಸ್ಟ್ ಆಫೀಸ್ ಯೋಜನೆಗಳಲ್ಲಿ (Post Office MIS) ಹೂಡಿಕೆ ಮಾಡುವುದರಿಂದ, ನಿಮ್ಮ ಹಣ ದ್ವಿಗುಣಗೊಳ್ಳುವುದರ ಜೊತೆಗೆ ನಿಶ್ಚಿತ ಆದಾಯವನ್ನೂ ಪಡೆಯಬಹುದು. ಅದರಲ್ಲೂ ಪ್ರತಿ ತಿಂಗಳು ನಿರ್ದಿಷ್ಟ ಆದಾಯವನ್ನು ಪಡೆಯಲು ಬಯಸಿದರೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS)ಅಥವಾ ಖಾತೆ ಹೂಡಿಕೆದಾರರಿಗೆ (Investors) ನಿಗದಿತ ರಿಟರ್ನ್ ನೀಡುತ್ತದೆ. ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ (Monthly Income) ಸಿಗುತ್ತದೆ. ಹೀಗಾಗಿ ಉಳಿತಾಯ ಮಾಡಲು ಯೋಚಿಸುತ್ತಿರುವವರು ಈ ಯೋಜನೆಯ ಖಾತೆ ತೆರೆಯಬಹುದು. ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ ಕೂಡ ಸಿಗುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಐದು ವರ್ಷಗಳು ಪೂರ್ಣಗೊಂಡ ಬಳಿಕ ನೀವು ನಿಮ್ಮ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು. ಇದರೊಂದಿಗೆ ನೀವು ಎಷ್ಟು ಹೂಡಿಕೆ ಮಾಡಿರುತ್ತೀರೋ ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ನಿಗದಿತ ಮೊತ್ತವನ್ನು ಪಡೆಯುತ್ತೀರಿ.
ಈಗಾಗಲೇ ಕೇಂದ್ರ ಸರ್ಕಾರವು 01 ಏಪ್ರಿಲ್ 2023ರಿಂದ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಠೇವಣಿ ಮಿತಿಯನ್ನು ಹೆಚ್ಚಿಸಿದೆ. ಮಾಸಿಕ ಆದಾಯ ಖಾತೆ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆಗೆ ₹ 4.5 ಲಕ್ಷದಿಂದ ₹ 9 ಲಕ್ಷಕ್ಕೆ ಏರಿಸಿದೆ. ಇನ್ನು ಜಂಟಿ ಖಾತೆಗೆ ₹ 9 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಗರಿಷ್ಠ ಠೇವಣಿ ಮಿತಿಯನ್ನು ₹ 4.5 ಲಕ್ಷದಿಂದ ₹ 9 ಲಕ್ಷಕ್ಕೆ ಹೆಚ್ಚಿಸಿದ ನಂತರ , ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಅಥವಾ POMIS ಖಾತೆಯನ್ನು ತೆರೆಯಲು ಅಗತ್ಯವಿರುವ ಕನಿಷ್ಠ ಮೊತ್ತವು ₹ 1000 ಆಗಿರುತ್ತದೆ. ಅದೇ ರೀತಿ, ಜಂಟಿ ಖಾತೆಯಲ್ಲಿ, ಒಟ್ಟು ಠೇವಣಿ ಮೊತ್ತದಲ್ಲಿ ಎಲ್ಲಾ ಜಂಟಿ ಖಾತೆದಾರರು ಸಮಾನ ಪಾಲನ್ನು ಹೊಂದಿರುತ್ತಾರೆ. ಪ್ರಸ್ತುತ ಈ ಯೋಜನೆಯಲ್ಲಿ ಶೇ.7.4ರಷ್ಟು ಬಡ್ಡಿ ಪಡೆಯಲಾಗುತ್ತಿದೆ.
ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಖಾತೆಯನ್ನು ತೆರೆಯುವ ದಿನಾಂಕದಿಂದ ಒಂದು ತಿಂಗಳು ಪೂರ್ಣಗೊಂಡ ನಂತರ ಮತ್ತು ಮುಕ್ತಾಯದವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಆದಾಗ್ಯೂ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಅಥವಾ POMIS ನಲ್ಲಿ ಪ್ರತಿ ತಿಂಗಳು ಖಾತೆದಾರರು ಬಡ್ಡಿಯನ್ನು ಪಡೆಯದಿದ್ದಲ್ಲಿ ಆ ಬಡ್ಡಿ ಹಣಕ್ಕೆ ಯಾವುದೇ ರೀತಿಯ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದಿಲ್ಲ.
ಅಂಚೆ ಕಚೇರಿಯ ಎಮ್‌ಐಎಸ್ ಲೆಕ್ಕಾಚಾರದ ಪ್ರಕಾರ, ಈ ಯೋಜನೆಯಲ್ಲಿ ನೀವು 3 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ 5 ವರ್ಷಗಳವರೆಗೆ ಒಟ್ಟು 111,000 ರೂಪಾಯಿಗಳ ಆದಾಯವನ್ನು ಗಳಿಸುತ್ತೀರಿ. ಅರ್ಥಾತ್ ಪ್ರತಿ ತಿಂಗಳು 1,850 ರೂ.ಗಳ ನಿಗದಿತ ಆದಾಯವನ್ನು ಗಳಿಸಬಹುದಾಗಿದೆ.
ಅದೇ ರೀತಿ, ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 2 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ಇದಕ್ಕಾಗಿ 5 ವರ್ಷಗಳಲ್ಲಿ ನೀವು ಒಟ್ಟು 73,980 ಬಡ್ಡಿಯನ್ನು ಪಡೆಯುತ್ತೀರಿ. ಇವುಗಳನ್ನು 60 ತಿಂಗಳಿಗೆ ವಿಂಗಡಿಸಿದರೆ, ಪ್ರತಿ ತಿಂಗಳು 1,233 ರೂ. ಬಡ್ಡಿಯನ್ನು ಆದಾಯವಾಗಿ ಪಡೆಯುತ್ತೀರಿ.
ಠೇವಣಿಯನ್ನು ಹಿಂಪಡೆಯುವ ನಿಯಮಗಳು:
ಖಾತೆ ತೆರೆದ ದಿನಾಂಕದಿಂದ 1 ವರ್ಷದ ನಂತರ ಮತ್ತು 3 ವರ್ಷದ ಮೊದಲು ಖಾತೆಯನ್ನು ಮುಚ್ಚಿದರೆ, ಅಸಲು 2% ಗೆ ಸಮಾನವಾದ ಕಡಿತವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ಪಾವತಿಸಲಾಗುತ್ತದೆ.
ಈ ಯೋಜನೆಯಲ್ಲಿ ಮೂರು ವರ್ಷಗಳ ನಂತರ 5 ವರ್ಷಗಳ ಮೊದಲು ಖಾತೆಯನ್ನು ಮುಚ್ಚಿದರೆ ಅಸಲಿನ ಹಣಕ್ಕೆ 1% ಗೆ ಸಮಾನವಾದ ಹಣವನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸಲಾಗುತ್ತದೆ.
ನೀವು ನಿಮ್ಮ ಠೇವಣಿ ಮೇಚ್ಯೂರಿಟಿ ಬಳಿಕ ಹಣವನ್ನು ಹಿಂಪಡೆದರೆ ಯಾವುದೇ ರೀತಿಯ ಶುಲ್ಕವನ್ನು ಕಡಿತಗೊಳಿಸುವುದಿಲ್ಲ.
ನಿಯಮನುಸಾರ MIS( Monthly Income Scheme) ಖಾತೆಯನ್ನು ತೆರೆದ ಐದು ವರ್ಷಗಳ ಬಳಿಕ ಕ್ಲೋಸ್ ಮಾಡಬಹುದದಾಗಿದೆ. ಸಂಬಂಧಪಟ್ಟ ಅಂಚೆ ಕಚೇರಿಗೆ ಅಗತ್ಯ ಅರ್ಜಿ ಹಾಗೂ ಪಾಸ್ ಪುಸ್ತಕ ಸಲ್ಲಿಕೆ ಮಾಡುವ ಮೂಲಕ ಖಾತೆಯನ್ನು ಕ್ಲೋಸ್ ಮಾಡಬಹುದು.
ಒಂದು ವೇಳೆ ಖಾತೆ ಮೆಚ್ಯುರ್ ಆಗುವ ಮುನ್ನ ಖಾತೆದಾರ ಸಾವನ್ನಪ್ಪಿದರೆ ಆತ ಅಥವಾ ಆಕೆಯ ನಾಮಿನಿ ಅಥವಾ ಕಾನೂನುಬದ್ದ ಉತ್ತರಾಧಿಕಾರಿಗೆ ಹಣವನ್ನು ರೀಫಂಡ್ ಮಾಡಲಾಗುವುದು. ರೀಫಂಡ್ ಮಾಡುವುದಕ್ಕೆ ಒಂದು ತಿಂಗಳು ಬಾಕಿಯಿರುವ ತನಕ ಬಡ್ಡಿ ನೀಡಲಾಗುತ್ತದೆ.