Yogi Adityanath: ಕರಾವಳಿಯಲ್ಲಿ ಅಲೆ ಎಬ್ಬಿಸಲು ಬರ್ತಿದ್ದಾರೆ ಹಿಂದೂ ಫೈರ್ ಬ್ರಾಂಡ್, ಬುಲ್ಡೋಜರ್ ಬಾಬಾ, ದಿನಾಂಕ ಗಮನಿಸಿ
Yogi Adityanath: ಚುನಾವಣೆಗೆ (Election 2023)ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಜನರ ಮನವೊಲಿಸಿ ಮತಬೇಟೆಗೆ ರಣತಂತ್ರ ರೂಪಿಸಿದ್ದು, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಮತ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾನುವಾರ ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ (Rahul Gandhi) ಕರ್ನಾಟಕದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ನಡುವೆ ಕರಾವಳಿಯಲ್ಲಿ ಕಮಲ ಪಾಳಯದ ಅಸ್ತಿತ್ವ ಗಟ್ಟಿ ಮಾಡುವ ದೆಸೆಯಲ್ಲಿ ಮಾಸ್ಟರ್ ಪ್ಲಾನ್ ಮಾಡುವ ಜೊತೆಗೆ ಮತ ಬೇಟೆಗೆ ಬುಲ್ಡೋಜರ್ ಬಾಬಾ ಖ್ಯಾತಿಯ ಯೋಗಿ ಆದಿತ್ಯನಾಥ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಬಿಜೆಪಿಯ ಕೆಂದ್ರ ಬಿಂದು ಮತ್ತು ಪಕ್ಷ ಚಟುವಟಿಕೆಯ ಚಲನಶೀಲ ಮಾಸ್ಟರ್ ಮೈಂಡ್ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಮೈಸೂರಿನಲ್ಲಿ ಭರ್ಜರಿ ಪ್ರಚಾರ ಮಾಡಲಿದ್ದು, ಮೈಸೂರಿನ ಬಿಜೆಪಿ ( BJP) ಅಭ್ಯರ್ಥಿಗಳ ಗೆಲುವಿಗಾಗಿ ಜನರ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ.ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದಾರೆ.
ಈಗಾಗಲೇ ಹಾಲಿ ಶಾಸಕರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಿರುವ ಹಿನ್ನೆಲೆ ಪಕ್ಷದ ಒಳಗೆ ಭುಗಿಲೆದ್ದಿರುವ ಆಂತರಿಕ ಜಗಳಗಳನ್ನು ಬಗೆಹರಿಸಿ, ಜನರ ಮನದಲ್ಲಿ ಪಕ್ಷದ ಕಡೆಗೆ ಒಲವು ತೋರುವ ಭರವಸೆ ಭದ್ರವಾಗಿ ನೆಲೆಯೂರುವ ರೀತಿ ಪಕ್ಷ ಸಂಘಟನೆ ಜೊತೆಗೆ ಜನರ ಮನವೊಲಿಕೆಗೆ ಬಿಜೆಪಿ ಕೇಂದ್ರ ಮುಖಂಡರು ಮುಂದಾಗಿದ್ದಾರೆ. ಈ ನಡುವೆ ಸೋಮವಾರ ಮಧ್ಯಾಹ್ನ ಚಿಕ್ಕಬಳ್ಳಾಪುರಕ್ಕೆ ತೆರಳಲಿರುವ ಜೆ.ಪಿ.ನಡ್ಡಾ ಅವರು ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಲಿದ್ದು, ಮತ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಹೊಸಕೋಟೆಯಲ್ಲಿ ಮತಯಾಚಿಸಲಿದ್ದಾರೆ. ಏಪ್ರಿಲ್ 26ರಂದು ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು (Yogi Adityanath) ಆಗಮಿಸಲಿದ್ದು, ಹೀಗಾಗಿ, ಕಮಲ ಪಾಳಯದಲ್ಲಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಭರ್ಜರಿ ಮತಯಾಚನೆ ಮಾಡಲಿದ್ದು ಇದರ ಜೊತೆಗೆ ಕರಾವಳಿ ಭಾಗದಲ್ಲಿ ಕೂಡ ಪ್ರಚಾರ ಕಾರ್ಯ ದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ, ಬಿಜೆಪಿಯ ಫೈರ್ ಬ್ರ್ಯಾಂಡ್ ಕರಾವಳಿಯಲ್ಲಿ ಸಂಚಲನ ಮೂಡಿಸಲಿದ್ದು, ಯೋಗಿ ಆದಿತ್ಯನಾಥ್ ಜತೆ ಡಿಸಿಎಂಗಳಾದ ಕೇಶವ ಪ್ರಸಾದ್ ಮೌರ್ಯ, ಬೃಜೇಶ್ ಪಾಠಕ್ ಮತ್ತು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಚೌಧರಿ ಭೂಪೇಂದ್ರ ಸಿಂಗ್ ಕೂಡ ಪ್ರಚಾರದಲ್ಲಿ ಸಾಥ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28ರ ನಂತರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮೋದಿ ಅವರ ಆಗಮನಕ್ಕೂ ಮೊದಲೇ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಚುನಾವಣೆ ಹಣಾಹಣಿಗೆ ಭರ್ಜರಿ ಮತಬೇಟೆಗೆ ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: Belthangady: ಮಾಜಿ ಸಚಿವ ಗಂಗಾಧರ ಗೌಡ ಮತ್ತು ರಂಜನ್ ಗೌಡ ಆಸ್ತಿ ಪಾಸ್ತಿಯ ಮೇಲೆ ಬೆಳಂಬೆಳಿಗ್ಗೆ IT ದಾಳಿ !