Udupi: ಮರುವಾಯಿ ಹೆಕ್ಕಲು ದೋಣಿಯಲ್ಲಿ ಹೋದ 7 ಹುಡುಗರು: ಮೂವರ ಸಾವು, ಇನ್ನೊಬ್ಬ ನಾಪತ್ತೆ !
Udupi: ಉಡುಪಿಯ (Udupi) ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೂವರು ಯುವಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ. ಅಲ್ಲದೆ, ಓರ್ವ ನಾಪತ್ತೆಯಾಗಿದ್ದಾನೆ.
ಈ ದುರ್ಘಟನೆಯು ನಿನ್ನೆ ಸಂಜೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಸಮೀಪ ನಡೆದಿದೆ. ಅಲ್ಲಿನ ಹೂಡೆ ಎಂಬಲ್ಲಿನ ನಿವಾಸಿಗಳಾದ ಫೈಝಾನ್, ಇಬಾದ್, ಸುಫಾನ್ ಮತ್ತು ಫರ್ಹಾನ್ ನೀರುಪಾಲಾದ ಹುಡುಗರು. ಈ ಪೈಕಿ ಓರ್ವ ನಾಪತ್ತೆಯಾಗಿದ್ದರೆ, ಉಳಿದ ಮೂವರು ಮೃತಪಟ್ಟಿದ್ದು, ಮೃತದೇಹಗಳನ್ನು ನದಿಯಿಂದ ಮೇಲೆತ್ತಲಾಗಿದೆ.
ಈದ್ ಹಬ್ಬದ ಪ್ರಯುಕ್ತ ಶೃಂಗೇರಿಯ ಈ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಒಟ್ಟು ಏಳು ಮಂದಿ ನದಿಯಿಂದ ಮರುವಾಯಿ ಸಂಗ್ರಹಿಸುವ ಉದ್ದೇಶದಿಂದ ಹೂಡೆಯ ಗುಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳಿದ್ದರು. ಆಗ ಉತ್ಸಾಹದಿಂದ ಇದ್ದ ಹುಡುಗರ ತಂಡದ ದೋಣಿ ಮಗುಚಿ ಕೊಂಡಿದೆ. ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆನ್ನಲಾಗಿದೆ. ಉಳಿದವರ ಪೈಕಿ ಮೂವರು ಈಜಿ ಕುದ್ರು ಸೇರಿಕೊಂಡಿದ್ದಾರೆ. ಇನ್ನೊಬ್ಬನ ಪತ್ತೆ ಇನ್ನೂ ಆಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಹಾಗೂ ಅಧಿಕಾರಿಗಳು ಆಗಮಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರ ಮೃತದೇಹಗಳನ್ನು ಪತ್ತೆಮಾಡಲಾಗಿದೆ. ನಾಪತ್ತೆಯಾಗಿರುವ ಓರ್ವ ಯುವಕನಿಗಾಗಿ ನದಿಯಲ್ಲಿ ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿ: Chitti Babu: ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ತಿಳಿಸಿದ ಸಮಂತಾ!