Chetan Ahimsa: ರಾಮ ಜನ್ಮಭೂಮಿ ಅನ್ನೋದು ಅವೈಜ್ಞಾನಿಕ, ರಾಮ – ಕೃಷ್ಣ ಎಲ್ಲಾ ಬರೀ ಕಾಲ್ಪನಿಕ – ನಟ ಚೇತನ್ ಅಹಿಂಸಾ ಪೋಸ್ಟ್ !
Chetan Ahimsa: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ (Chetan Ahimsa) ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ಜನ್ಮಭೂಮಿ (Rama Janma bhoomi) ಅನ್ನೋದು ಅವೈಜ್ಞಾನಿಕ. ರಾಮ (Raama), ಕೃಷ್ಣ (Krishna) ಎಲ್ಲಾ ಬರೀ ಕಾಲ್ಪನಿಕ ಅಷ್ಟೇ ಎಂದು ಚೇತನ್ ಹೇಳಿದ್ದು, ಇದೀಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಯುಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಚೇತನ್, ರಾಮಾಯಣ ಸುಳ್ಳು, ಅದೊಂದು ಕಟ್ಟು ಕಥೆ. ಹಿಂದಿನ ಕಾಲದಲ್ಲಿ ರಾಮ, ಕೃಷ್ಣ ಇದ್ದರಂತೆ ಅದನ್ನು ಇಂದು ಜನರು ನಂಬುತ್ತಿದ್ದಾರೆ. ಆದರೆ, ಇದು ಕಾಲ್ಪನಿಕವಷ್ಟೇ ಸತ್ಯವಲ್ಲ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಅಲ್ಲಾ ಕೂಡ ಜನರ ನಂಬಿಕೆಯಷ್ಟೇ. ಮಾರಮ್ಮ, ಯಲ್ಲಮ್ಮ ಎಲ್ಲವೂ ಅವೈಜ್ಞಾನಿಕ. ವೈಜ್ಞಾನಿಕ ಅಂತ ಹೇಳೋದಾದ್ರೆ ಇತಿಹಾಸದಲ್ಲಿ ದಾಖಲೆ ಇರಬೇಕು ಎಂದಿದ್ದಾರೆ. ರಾಮಾಯಣ, ಮಹಾಭಾರತ ಹಿಂದೆ ನಡೆದ ಘಟನೆಗಳು, ಸತ್ಯ ಅನ್ನೋದಕ್ಕೆ ಸಾಕಷ್ಟು ಪುರಾವೆಗಳಿವೆ. ಹಲವಾರು ದೇವಸ್ಥಾನಗಳಿವೆ. ಕೆದಕುತ್ತಾ ಹೋದರೆ, ಬಹುದೊಡ್ಡ ಪುರಾವೆಗಳೇ ಲಭಿಸುತ್ತವೆ. ಆದರೆ, ನಟ ಚೇತನ್ ಮಾತುಗಳು ಇದಕ್ಕೆ ವಿರುದ್ಧವಾಗಿದ್ದು, ವಿವಾದ ಸೃಷ್ಟಿಸಿದೆ.
ಅಂಬೇಡ್ಕರ್, ಜ್ಯೋತಿಬಾ ಫುಲೆ ಹಾಗೇ ಜೀಸಸ್, ಮೊಹಮ್ಮದ್, ಬುದ್ಧ, ಅಶೋಕ, ಅಕ್ಬರ್, ಟಿಪ್ಪು ಇವೆರೆಲ್ಲಾ ವೈಜ್ಞಾನಿಕವಾಗಿ ಇತಿಹಾಸದಲ್ಲಿ ಬದುಕಿದ್ದವರು. ಇನ್ನುಳಿದ ರಾಮ, ಕೃಷ್ಣ, ಅಲ್ಲಾ, ಗಣೇಶ ಇವರೆಲ್ಲಾ ನಂಬಿಕೆ ಮೇಲೆ ಕಟ್ಟಿರುವ ಕಾಲ್ಪನಿಕ ಪಾತ್ರಗಳಷ್ಟೇ ಎಂದು ಚೇತನ್ ಹೇಳಿದರು.
ಚೇತನ್ ವಿವಾದಾತ್ಮಕ ಹೇಳಿಕೆಗೆ ನಿರೂಪಕಿ, ಸಾಕ್ಷಾಧಾರಗಳು ಹಾಗೂ ಪುರಾವೆಗಳು ಇವೆಯಲ್ಲಾ ಎಂದು ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರಿಸಿದ ಚೇತನ್ “ನೀವು ಹೇಳುವ ಸಾಕ್ಷಾಧಾರಗಳು ವೈಜ್ಞಾನಿಕವಾಗಿ ಒಪ್ಪಿಗೆಯಾಗಿಲ್ಲ. ಯಾವುದಾದರೂ ಚಿಂತನೆಯ ಕೇಂದ್ರ ಪುರಾವೆಯನ್ನು ಸತ್ಯ ಎಂದು ಹೇಳಿದೆಯಾ? ಯಾರಾದರು ರಾಮನನ್ನು ಈ ಹಿಂದೆ ಇದ್ದ ಎಂದು ಹೇಳಿದ್ದಾರಾ? ದ್ವಾಪರಯುಗ, ತ್ರೇತಾಯುಗ, ಕಲಿಯುಗ ಯಾವಾಗ ಅದು? ಅದೆಲ್ಲಾ ಬರೀ ಕಾಲ್ಪನಿಕ ಅಷ್ಟೇ. ರಾಮ, ಕೃಷ್ಣ, ಲಕ್ಷ್ಮಣ, ಸೀತಾ, ಹನುಮಂತ ಇವೆಲ್ಲಾ ಕಾಲ್ಪನಿಕ, ನಮ್ಮ ನಂಬಿಕೆಗಳು. ಜನರಿಗೆ ನಂಬಿಕೆಯ ಹಕ್ಕಿದೆ” ಎಂದು ಚೇತನ್ ಹೇಳಿದರು. ಸದ್ಯ ಈ ಹೇಳಿಕೆ ವಿವಾದಕ್ಕೀಡಾಗಿದೆ.