Military Hotel: ಮಿಲಿಟರಿ ಹೋಟೆಲ್’ನಿಂದ ಮೋದಿ ಚುನಾವಣಾ ಪ್ರಚಾರ, ಡಿಕೆಶಿಗೆ ಟಾಂಗ್ ಟಾಂಗ್ !
Military Hotel : ಬೆಂಗಳೂರು: ರಾಜ್ಯದಲ್ಲಿ ಬಹು ಪಾಲು ಎಲ್ಲಾ ಮುಖ್ಯ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆಯ ಬಹುಪಾಲು ಕೆಲಸವನ್ನು ಮುಗಿಸಿ ಬಿ ಫಾರ್ಮ್ ನೀಡಿವೆ. ನಾಮಪತ್ರ ಪ್ರಕ್ರಿಯೆ ಏಪ್ರಿಲ್ 24 ಕ್ಕೆ ಮುಕ್ತಾಯವಾಗಲಿದ್ದು ಕದನ ಕಣ ಅಂತಿಮವಾಗಲಿದೆ. ಅದಾದ ಬಳಿಕವೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಧುಮುಕಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಾರಿ ಬಿಜೆಪಿಯ ಪ್ರಚಾರ ಕಾರ್ಯ ಈ ಮಿಲಿಟರಿ ಹೋಟೆಲ್ (Military Hotel) ನಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.
ಇಂದು ಬೆಂಗಳೂರಿನ ನಿವಾಸದ ಮುಂದೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಬಾರಿ ಮಿಲಿಟರಿ ಹೋಟೆಲ್‌ನಿಂದಲೇ ಪ್ರಚಾರ ಆರಂಭಿಸಲಾಗುವುದು ಎಂದರು. ಈ ಹಿಂದೆ ಮೋದಿಯವರು ಚಹಾ ಅಂಗಡಿ ಯ ಮೂಲಕ ಚುನಾವಣಾ ಪ್ರಚಾರ ಶುರು ಮಾಡಿದ್ದರು. ನಂತರ ‘ ಚಾಪೆ ಚರ್ಚಾ ‘ ನಡೆಸಿ ತಾನು ಒಬ್ಬ ಸಾಮಾನ್ಯ ವ್ಯಕ್ತಿ ಎನ್ನುವಂತೆ ಬಿಂಬಿಸಿ ಜನರ ಮನ ಗೆದ್ದಿದ್ದರು ಮೋದಿ. ಈಗ ಮಿಲಿಟರಿ ಹೋಟೆಲ್ ನಿಂದ ಚುನಾವಣಾ ಪ್ರಚಾರ ಶುರುಮಾಡಲು ಬಿಜೆಪಿ ಸಜ್ಜಾಗಿದೆ. ಅದಕ್ಕೆ ಕಾರಣ ಆದದ್ದು ಡಿಕೆ ಶಿವಕುಮಾರ್ ಅವರ ಹೇಳಿಕೆ.
ಡಿಕೆ ಶಿವಕುಮಾರ್ ಏನಂದಿದ್ದು ?
“ಅಶೋಕ್ ಅವರು ಕನಕಪುರದಿಂದ ಕಣಕ್ಕೆ ಇಳಿಯಲಿದ್ದಾರೆ. ನಮ್ಮೂರಲ್ಲಿ ಒಳ್ಳೊಳ್ಳೆ ಮಿಲಿಟರಿ ಹೋಟೆಲ್‌ಗಳಿವೆ. ಬಂದು ಅಲ್ಲಿ ಊಟ ಮಾಡ್ಕೊಂಡು ಹೋಗ್ಲಿ ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರದಲ್ಲಿ ಆರ್. ಅಶೋಕ್ ಅವರ ಸ್ಪರ್ಧೆಯನ್ನು ಗೇಲಿ ಮಾಡಿದ್ದರು. ಕನಕಪುರದಲ್ಲಿ ನಿಮ್ಮ ಕಾರ್ಯ ನಡೆಯಲ್ಲ ಇಲ್ಲಿ ನಾನೇ ಕಿಂಗ್ ಎಂಬಂತೆ ಶಿವಕುಮಾರ್ ಅವರು ವರ್ತಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, “ನಮ್ಮ ಪ್ರಚಾರ ಮಿಲಿಟರಿ ಹೊಟೇಲಿಂದಲೇ ಆರಂಭವಾಗಲಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನರಿರುತ್ತಾರೆ. ಅಂಥ ಸಾಮಾನ್ಯ ಜನರನ್ನು ಡಿಕೆಶಿ ಭೇಟಿ ಮಾಡುವುದಿಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡಲು ಅಶೋಕ್ ತೆರಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಮಿಲಿಟರಿ ಹೊಟೇಲ್‌ಗೆ ಯಾಕೆ ಹೋಗಬಾರದು” ಎಂದು ಪ್ರಶ್ನಿಸಿದ್ದಾರೆ. ಡಿಕೆ ಮಾತನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ ಪ್ರತಿ ತಂತ್ರ ರೂಪಿಸಿದೆ.