Nikhil Kumaraswamy: ನಿಖಿಲ್, ಅಪ್ಪ ಕುಮಾರಸ್ವಾಮಿಗೇ ಸಾಲ ಕೊಟ್ಟ ಸಿರಿವಂತ : ಆತನ ಅಸ್ತಿ ಮೌಲ್ಯ ಎಷ್ಟು ಗೊತ್ತಾ ?
ರಾಮನಗರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumara Swamy) ಅವರ ಮಗ, ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ನಿಖಿಲ್ ಇಂದು ರಾಮನಗರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ತನ್ನ 33 ವಯಸ್ಸಿಗೆ ನಿಖಿಲ್ ಕುಮಾರಸ್ವಾಮಿ 77 ಕೋಟಿಗಳ ಅಧಿಪತಿ. ಮಾಡಿದ್ದು ಕೇವಲ 3 ಸಿನೆಮಾ. ಜಾಗ್ವಾರ್, ಸೀತಾರಾಮ ಕಲ್ಯಾಣ ಮತ್ತು 2021 ರಲ್ಲಿ ಬಿಡುಗಡೆಯಾದ ರೈಡರ್. ಈಗ 77 ಕೋಟಿಯ ಅಧಿಪತಿ. ತಮಾಷೆಯ ಸಂಗತಿ ಏನೆಂದರೆ (Nikhil Kumaraswamy)ಮಗ ಅಪ್ಪ ಕುಮಾರ ಸ್ವಾಮಿಗೆ ಸಾಲ ಕೊಟ್ಟಿದ್ದಾರೆ !
ಹೀಗೆ ಕೋಟ್ಯಧಿಪತಿಯಾಗಿರುವ ನಿಖಿಲ್ ತಮ್ಮ ಚರಾಸ್ತಿ-ಸ್ಥಿರಾಸ್ತಿಗಳ ವಿವರವನ್ನು ಚುನಾವಣಾ ಸಂದರ್ಭ ನೀಡಿದ್ದಾರೆ. ತಮಾಷೆಯ ಸಂಗತಿ ಏನೆಂದರೆ ತಮ್ಮ ತಂದೆ ಕುಮಾರಸ್ವಾಮಿಗೆ ನಿಖಿಲ್ ಸಾಲ ನೀಡಿದ್ದಾರಂತೆ. ಹಾಗೆ ಸಾಲ ನೀಡಿರುವುದಲ್ಲದೆ, ಆತ ಐಷಾರಾಮಿ ಕಾರುಗಳ ಒಡೆಯ ಕೂಡ ಹೌದು. ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ ಒಟ್ಟು 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬ ಘೋಷಣೆ ಆಗಿದೆ. ಆ ಪೈಕಿ ಚರಾಸ್ತಿಯ ಮೌಲ್ಯ 46.81 ಕೋಟಿ ರೂಪಾಯಿ ಹಾಗೂ ಸ್ಥಿರಾಸ್ತಿ ಮೌಲ್ಯ 28 ಕೋಟಿ ರೂಪಾಯಿಗಳು.
ಒಂದು ರೇಂಜ್ ರೋವರ್, 2.9 ಕೋಟಿ ಮೊತ್ತದ ಲ್ಯಾಂಬೊರ್ಗಿನಿ ಸೇರಿ ಐದು ಕಾರ್‌ಗಳನ್ನು ತಮ್ಮ ಹೆಸರಿನಲ್ಲಿ ನಿಖಿಲ್ ಹೊಂದಿದ್ದು, ಒಟ್ಟು 1 ಕೆಜಿ 151 ಗ್ರಾಂ ತೂಕದ ಚಿನ್ನ ಹಾಗೂ 16 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ಜತೆಗೆ 38.94 ಕೋಟಿ ರೂ. ಸಾಲ ಕೂಡ ಇದೆ. ಆದರೆ ತಮ್ಮ ತಂದೆ ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಸಾಲವನ್ನೂ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹೆಸರಿನಲ್ಲಿ 1.79 ಕೋಟಿ ಮೌಲ್ಯದ ಚರಾಸ್ತಿ ಹಾಗೂ 28 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅಲ್ಲದೆ 641 ಗ್ರಾಂ ಚಿನ್ನ, 12.59 ಕ್ಯಾರೆಟ್ ವಜ್ರ ಹಾಗೂ 33.5 ಕೆ.ಜಿ.ಬೆಳ್ಳಿ ಮುಂತಾದ ಆಸ್ತಿ ಇದೆ.
ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿ 76 ಲಕ್ಷ ರೂ., ಹಾರಿಜನ್ ರಿಯಾಲ್ಟಿ ಕಂಪನಿಯಲ್ಲಿ 6 ಕೋಟಿ ರೂ. ಸೇರಿದಂತೆ ವಿವಿಧೆಡೆ ಹಣ ಹೂಡಿಕೆ ಮಾಡಿದ್ದಾರೆ ನಿಖಿಲ್. ಅವರು ತಮ್ಮ ವಾರ್ಷಿಕ ಆದಾಯವನ್ನೂ ಬಹಿರಂಗಪಡಿಸಿದ್ದಾರೆ. 2021–22ನೇ ಸಾಲಿನಲ್ಲಿ ನಿಖಿಲ್ ಕುಮಾರಸ್ವಾಮಿ ವಾರ್ಷಿಕ ಆದಾಯ 4.27 ಕೋಟಿ ರೂಪಾಯಿ ಇತ್ತೆಂದು ಆತ ಘೋಷಿಸಿಕೊಂಡಿದ್ದಾರೆ.