Gas Cylinder: ಅಡುಗೆ ಗ್ಯಾಸ್ ಸಿಲಿಂಡರ್ ಎಷ್ಟು ಖಾಲಿ ಆಗಿದೆ ಎಂಬುದನ್ನು ನಿಮಿಷಗಳಲ್ಲಿ ತಿಳಿದುಕೊಳ್ಳೋ ಟ್ರಿಕ್ ಇಲ್ಲಿದೆ !
Gas Cylinder : ಇಂದಿನ ಕಾಲದಲ್ಲಿ ಗ್ಯಾಸ್ ಸ್ಟವ್ ಇಲ್ಲದ ಮನೆಯಾದರೂ ಎಲ್ಲಿದೆ ಹೇಳಿ. ಕೇಂದ್ರದ ಉಜ್ವಲಾ ಸ್ಕೀಮ್ (Ujwala) ಬಂದ ಮೇಲಂತೂ ಬಡವರ ಮನೆಯಲ್ಲೂ ಗ್ಯಾಸಿನಲ್ಲೆ ಅಡುಗೆ ತಯಾರಾಗೋದು ! ಬಹುತೇಕ ಎಲ್ಲರೂ ಗ್ಯಾಸ್ ಸಿಲಿಂಡರ್ (Gas Cylinder) ಇಟ್ಟುಕೊಂಡು ಆ ಮೂಲಕವೇ ಗ್ಯಾಸ್ ಸ್ಟವ್ ಉರಿಸಿ ಅಡುಗೆ ಮಾಡುತ್ತಾರೆ. ಆದರೆ ಗ್ಯಾಸು ಯಾವಾಗ ಖಾಲಿ ಆಗತ್ತೆ ಅನ್ನೋದು ಗೃಹಿಣಿಯರ ಬಹುದೊಡ್ಡ ಸಮಸ್ಯೆ. ಆದರೀಗ ಬಹಳ ಸುಲಭವಾಗಿ ಗ್ಯಾಸ್ ಸಿಲಿಂಡರ್ ಖಾಲಿ ಆಗಿದ್ಯಾ ಇಲ್ವಾ ಎಂಬುದನ್ನು ಪತ್ತೆ ಮಾಡಬಹುದು. ಅಷ್ಟೇ ಅಲ್ಲ, ಖಚಿತವಾಗಿ ಗೆರೆ ಎಳೆದಂತೆ, ಸಿಲಿಂಡರ್ ನಲ್ಲಿ ಇಷ್ಟೇ ಇದೆ ಗ್ಯಾಸ್ ಅಂತ ಕೂಡಾ ಹೇಳಬಹುದು. ತೂಕ ಮಾಡುವ ಅಗತ್ಯ ಇಲ್ಲ, ಯಾವುದೇ ಅತ್ಯಾಧುನಿಕ ಸಾಧನ ಬೇಕಿಲ್ಲ. ಅದು ಹೇಗೆ ಗೊತ್ತಾ? (How to find cooking gas is empty or full?)
ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ (Gas Cylinder) ಯಾವಾಗ ಖಾಲಿಯಾಗುತ್ತದೆ ಅಂತ ನಾವು ಊಹೆ ಮಾಡುತ್ತೇವೆ. ಆದರೆ ನಿಜವಾಗಿ ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆಯಾ ಇಲ್ವಾ ಅಂತ ನಮಗೆ ಗೊತ್ತಾಗುವುದಿಲ್ಲ. ಎಷ್ಟೋ ಜನ ಸಿಲಿಂಡರ್ ಓಪನ್ ಮಾಡಿದ ಆರಂಭದ ದಿನದಿಂದ ಲೆಕ್ಕ ಇಟ್ಟು ಸಿಲಿಂಡರ್ ಗ್ಯಾಸ್ ಖಾಲಿ ಯಾವಾಗ ಆದೀತು ಅಂತ ಊಹಿಸುತ್ತಾರೆ. ಕೆಲವೊಮ್ಮೆ ಈ ಊಹೆ ಕೈ ಕೊಡುತ್ತದೆ. ಅಗತ್ಯ ಸಮಯದಲ್ಲಿ ಅರ್ಧಕ್ಕೆ ಗ್ಯಾಸ್ ಖಾಲಿಯಾಗಿ ಫಜೀತಿಗೆ ಬೀಳಬೇಕಾಗುತ್ತದೆ.
ಕೆಲವರು ಗೃಹಿಣಿಯರು ಆಗಾಗ ಗ್ಯಾಸ್ ಸಿಲಿಂಡರ್ ಅನ್ನು ಅಲುಗಾಡಿಸಿ ನೋಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅದರಿಂದ ಗ್ಯಾಸ್ ನಿಖರವಾಗಿ ಎಷ್ಟು ಇದೆ ಎಂದು ಗೊತ್ತಾಗಲಿಲ್ಲದಿದ್ದರೂ ಗ್ಯಾಸ್ ಅಂತಿಮ ಹಂತಕ್ಕೆ ಬಂದಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. ಆದರೆ ಈ ರೀತಿ ಸಿಲಿಂಡರ್ ನ್ನು ಅಲುಗಾಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಅದಕ್ಕೇ ನಾವೊಂದು ಸರಳ, ಸುಲಭ ಮತ್ತು ಅತ್ಯಂತ ಸುರಕ್ಷತಾ ವಿಧಾನದಿಂದ ನಿಖರವಾಗಿ ಸಿಲಿಂಡರಿನಲ್ಲಿ ಎಲ್ಲಿಯ ತನಕ ಗ್ಯಾಸ್ ಇದೆ ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.
ಗ್ಯಾಸ್ ಖಾಲಿಯಾದರೆ ಮೊದಲು ಈ ಲಕ್ಷಣಗಳನ್ನು ಗಮನಿಸಿ:
ಗ್ಯಾಸ್ ವಾಸನೆ:
1) ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಸಣ್ಣಗೆ ಎಲ್ ಪಿ ಜಿ ಗ್ಯಾಸ್ ನ ವಾಸನೆ ಬರುವುದನ್ನು ನೀವು ಸಾಕಷ್ಟು ಬಾರಿ ಫೀಲ್ ಆಗಿರಬಹುದು. ಗ್ಯಾಸ್ ಸಿಲಿಂಡರ್ (Gas Cylinder) ಮುಗಿಯುವ ಹಂತದಲ್ಲಿ ಸಾಮಾನ್ಯವಾಗಿ ಈ ತರಹ ಗ್ಯಾಸ್ ವಾಸನೆ ಬರಲು ಪ್ರಾರಂಭವಾಗುತ್ತದೆ. ಇದು ಅಪೂರ್ಣ ಉರುವಲಿನಿಂದ ಆಗುವ ಸೋರಿಕೆಯ ಕಾರಣದಿಂದ ಇರಬಹುದು. ಹೆಚ್ಚಿನ ಸಮಯದಲ್ಲಿ ಗ್ಯಾಸ್ ಸಿಲೆಂಡರ್ ಖಾಲಿಯಾಗುತ್ತಿದೆ ಎನ್ನುವುದರ ಒಂದು ಮುನ್ಸೂಚನೆ ಆಗಿರುತ್ತದೆ.
2) ಗ್ಯಾಸ್ ಸ್ಟವ್ ನ ಬೆಂಕಿಯಲ್ಲಿ ಹಳದಿ ಹೊಗೆ:
ಇದು ಕೂಡ ಗ್ಯಾಸ್ ಸಿಲಿಂಡರ್ ಖಾಲಿ ಆಗ್ತಾ ಇದೆ ಎನ್ನುವುದರ ಚಿಹ್ನೆಯಾಗಿದೆ. ಸಾಮಾನ್ಯವಾಗಿ ಗ್ಯಾಸ್ ಸಿಲೆಂಡರ್ ತುಂಬಿಕೊಂಡಿದ್ದರೆ ಎಲ್ಪಿಜಿ ನೀಲಿ ಬಣ್ಣದ ಜ್ವಾಲೆಯಿಂದ ಅದು ಉರಿತುತ್ತದೆ. ಗ್ಯಾಸ್ ಸಿಲಿಂಡರ್ ಖಾಲಿ ಆಗ್ತಾ ಬರುತ್ತಿದ್ದ ಹಾಗೆ ಹಳದಿ ಹೊಗೆ ಕಾಣಿಸಿಕೊಳ್ಳಬಹುದು. ನೀವು ಗ್ಯಾಸ್ ಸಿಲೆಂಡರ್ ಅನ್ನು ಉಪಯೋಗಿಸಲು ಆರಂಭಿಸಿ ಬಹಳ ಸಮಯವಾಗಿದ್ದರೆ ಮತ್ತು ಗ್ಯಾಸ್ ಜ್ವಾಲೆಯಿಂದ ಹಳದಿ ಹೊಗೆ ಬರುತ್ತಿದ್ದರೆ, ಆಗ ಗ್ಯಾಸ್ ಖಾಲಿಯಾಗುತ್ತ ಬಂದಿರುವ ಸಂಭವ.
3) ಅನಿಯಮಿತವಾಗಿ ಗ್ಯಾಸ್ ಉರಿದರೆ :
ಅನಿಯಮಿತವಾಗಿ, ಅಂದರೆ ಜ್ವಾಲೆ ಬಿಟ್ಟು ಬಿಟ್ಟು ಉರಿದರೆ, ಸಣ್ಣದಾಗಿ ಬರಬರ ಸದ್ದು ಬಂದರೆ ಆಗ ಗ್ಯಾಸ್ ಖಾಲಿಯಾಗುತ್ತ ಬಂದಿದೆ ಎಂದೇ ಅರ್ಥ.
ಸಿಲಿಂಡರ್ ನಲ್ಲಿ ಇರುವ ಅನಿಲದ ಸ್ಥಿತಿ ತಿಳಿಯುವುದು ಹೇಗೆ?
ನೀವು ಬಳಸುತ್ತಿರುವ ಗ್ಯಾಸ ಸಿಲಿಂಡರ್ ನಲ್ಲಿ ಗ್ಯಾಸ್ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಮೊದಲು ಒಂದು ಬಟ್ಟೆಯನ್ನು ಚೆನ್ನಾಗಿ ನೀರಿನಲ್ಲಿ ಒದ್ದೆ ಮಾಡಿ ಅದನ್ನು ಸಿಲಿಂಡರ್ ಮೇಲಿನಿಂದ ಕೆಳಗಿನವರೆಗೆ ಒಂದು ಲೈನ್ ಹಾಕಿದಂತೆ ಉಜ್ಜಿರಿ. ಸಿಲಿಂಡರ್ ಸಂಪೂರ್ಣ ಒದ್ದೆ ಆಗಿ ಅಲ್ಲಿ ಒಂದು ಲೈನ್ ಕಂಡು ಬರುತ್ತದೆ. ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಇದೆಯೋ ಆ ಜಾಗವನ್ನು ಬಿಟ್ಟು ಉಳಿದ ಜಾಗ ಬೇಗ ಒಣಗುತ್ತದೆ. ಯಾವ ಜಾಗ ಇನ್ನೂ ಒದ್ದೆಯಾಗಿಯೇ ಇದೆಯೋ ಅಷ್ಟು ಪ್ರಮಾಣದ ಗ್ಯಾಸ್ ಇದೆ ಎಂದು ನಿಖರವಾಗಿ ಕೇಳಬಹುದು.
ಗ್ಯಾಸ್ ಇರುವ ಜಾಗದಲ್ಲಿ ನೀರು ಒಣಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಎಷ್ಟು ಪ್ರಮಾಣದಲ್ಲಿ ಗ್ಯಾಸ್ ಇದೆ ಎಂಬುದನ್ನು ಸುಲಭವಾಗಿ ಮತ್ತು ಖಚಿತವಾಗಿ ತಿಳಿದುಕೊಳ್ಳಬಹುದು.
ಈಗ ಗ್ಯಾಸ್ ಪ್ರೆಶರ್ ತೋರುವ ಮೀಟರ್ ಗಳೂ ಲಭ್ಯ. ಆದರೆ ನಿಮ್ಮಗ್ಯಾಸ್ ಏಜೆನ್ಸಿಗಳು ಹೇಳುವ) ಮಾರುವ ಮೀಟರ್ ಗಳನ್ನು ಮಾತ್ರ ಬಳಸಿ. ಸುರಕ್ಷತೆಯ ಜತೆ ಯಾವತ್ತೂ ರಾಜಿ ಮಾಡಿಕೊಳ್ಳದಿರಿ.