ACCA Course : ನಿಮಗೆಲ್ಲ ಸಿಎ ಗೊತ್ತು, ಆದರೆ ಎಸಿಸಿಎ ಬಗ್ಗೆ ತಿಳಿದಿದೆಯೇ? ಕಲಿತರೆ ಸಿಗಲಿದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆ!

Association of Chartered Certified Accountants: ಇಂದಿನ ದಿನಗಳಲ್ಲಿ ಶಿಕ್ಷಣ ಅತಿ ಮುಖ್ಯವಾಗಿದ್ದು, ಬ್ಯಾಂಕಿಂಗ್ (Banking), ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹುದ್ದೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್(chartered accountant) ಕೂಡ ಒಂದಾಗಿದ್ದು, ಆದರೆ ಅಷ್ಟು ಸುಲಭವಾಗಿ ಗಿಟ್ಟಿಸಿಕೊಳ್ಳುವ ನೌಕರಿ ಚಾರ್ಟರ್ಡ್ ಅಕೌಂಟಂಟ್ ಅಲ್ಲ ಎನ್ನುವುದು ಹೆಚ್ಚಿನವರಿಗೆ ಗೊತ್ತಿರುವ ಸಂಗತಿ. ಆದರೆ, ಇದರ ಬದಲು ಬೇರೆ ಯಾವ ಕೋರ್ಸ್ ಮಾಡಬಹುದು ಎಂದು ಯೋಚಿಸುತ್ತಿದ್ದರೆ ಈ ಮಾಹಿತಿ ನಿಮಗೆ ಪ್ರಯೋಜನವಾಗಬಹುದು.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡಲು ಬಯಸುವವರು ಎಸಿಎಇಎ/ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಕೋರ್ಸ್ (Association of Chartered Certified Accountants) ಅನ್ನು ಕಲಿಯಬಹುದು. ಚಾರ್ಟೆಟ್ ಅಕೌಂಟೆಂಟ್ ಭಾರತದ ಚಾರ್ಟೆಡ್ ಅಕೌಂಟೆಂಟ್ ಕೋರ್ಸ್ ಆಗಿದ್ದು, ಸಿಎಗೆ ಪರ್ಯಾಯವಾಗಿ ಬೇರೆ ಯಾವುದಾದರೂ ಕೋರ್ಸ್ ಇದೆಯೇ ಎಂದು ಹುಡುಕುವವರಿಗೆ ಜಾಗತಿಕ ಗುಣಮಟ್ಟ ಹೊಂದಿರುವ ಎಸಿಸಿಎ ಕೋರ್ಸ್ (ACCA Course) ಮಾಡಬಹುದಾಗಿದೆ.

ಈ ಜಾಗತಿಕ ಮಟ್ಟದ ಕೋರ್ಸ್ ಕಲಿಯಲು ವಿದೇಶಕ್ಕೆ ಹೋಗಬೇಕಾ ಎಂಬ ಪ್ರಶ್ನೆ ಸಹಜವಾಗಿ ಹೆಚ್ಚಿನವರನ್ನು ಕಾಡುತ್ತದೆ. ಈ ಕೋರ್ಸ್ ಭಾರತವನ್ನೊಳಗೊಂಡಂತೆ ಜಗತ್ತಿನಾದ್ಯಂತ 91ಕ್ಕೂ ಹೆಚ್ಚು ಕೇಂದ್ರಗಳನ್ನು ಒಳಗೊಂಡಿದೆ. ಹಾಗಿದ್ರೆ, ಈ ಕೋರ್ಸ್ ಮೂಲಕ ಯಾವ ನೌಕರಿ ಎಲ್ಲ ಪಡೆಯಬಹುದು? ಎಸಿಸಿಎ ಕೋರ್ಸ್ ಕೇಂದ್ರದ ಜೊತೆಗೆ ಕರ್ನಾಟಕದಲ್ಲಿ ಎಸಿಸಿಎ ಕಲಿತವರು ಚಾರ್ಟೆಡ್ ಅಕೌಂಟೆಂಟ್, ಫೈನಾನ್ಶಿಯಲ್ ಅಕೌಂಟೆಂಟ್, ಅಡಿಟರ್, ಮ್ಯಾನೆಜ್ಮೆಂಟ್ ಕನ್ಸಲ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಬಹುದಾಗಿದೆ.

ಸಿಎ ಎನ್ನುವುದು ಭಾರತದ ಅಕೌಂಟಿಂಗ್, ಫೈನಾನ್ಸ್, ಟ್ಯಾಕ್ಸೆಷನ್ನಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾದ ಕೋರ್ಸ್ ಆಗಿದ್ದು, ಒಂದು ವೇಳೆ, ವಿದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದು ನೀವು ಬಯಸುವುದಾದರೆ ಎಸಿಸಿಎ ಕಲಿತಿರಬೇಕಾದ ಆವಶ್ಯಕತೆಯಿದೆ. ಎಸಿಸಿಎಯು ಇಂಗ್ಲೆಂಡ್ನ ಜಿಎಎಪಿ, ಲಾ, ಐಎಫ್ಆರ್ಎಸ್ನ ಹೆಚ್ಚುವರಿ ಮಾಹಿತಿಯನ್ನು ನೀಡುವುದಲ್ಲದೇ ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ನೆರವಾಗುತ್ತದೆ.

ಎಸಿಸಿಎಗೆ ಸೇರಲು ಇಂತದ್ದೇ ಆದ ಪದವಿ ಹೊಂದಿರಬೇಕು ಎಂದೇನು ಇಲ್ಲ. ಈ ಕೋರ್ಸ್ ಮಾಡಲು ಬಯಸುವ ಆಸಕ್ತರು ನೇರವಾಗಿ ಫೌಂಡೇಷನ್ ಲೆವೆಲ್ಗೆ ಸೇರಲು ಅವಕಾಶವಿದೆ. ಒಂದು ವೇಳೆ ಅಕೌಂಟೆನ್ಸಿಯ (Accountancy) ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು ಜೊತೆಗೆ ಅಕೌಂಟೆನ್ಸಿ ವಿದ್ಯಾರ್ಹತೆ ಕೂಡ ಇಲ್ಲ ಎಂದರು ಕೂಡ ಈ ಕೋರ್ಸ್ ಕಲಿಯಲು ಅವಕಾಶವಿದೆ. ಹೊಸದಾಗಿ ಸೇರಬಯಸುವ ವಿದ್ಯಾರ್ಥಿಗಳು ಅಥವಾ ಡಿಪ್ಲೊಮಾ ಇಲ್ಲವೇ ಬೇರೆ ಸರ್ಟಿಫಿಕೇಟ್ ಕೋರ್ಸ್(Certificate Course) ಪಡೆಯುತ್ತಿರುವ ಸಂದರ್ಭಲ್ಲಿ ಎಸಿಸಿಎ ಶಿಕ್ಷಣವನ್ನು ಪಡೆಯಬಹುದು.

ಎಸಿಸಿಎಯ ಶಿಕ್ಷಣ ಗುಣಮಟ್ಟವು ಜಗತ್ತಿನಾದ್ಯಂತ ಉದ್ಯೋಗದಾತರ ಅವಶ್ಯಕತೆಯ ಅನುಗುಣವಾಗಿ ರೂಪಿಸಲಾಗಿದೆ. ಭಾರತದ ಸಿಎ ಶೀಘ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ತನ್ನ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲಿದೆ. ಈಗಾಗಲೇ ಭಾರತದ ಸಿಎ ಗುಣಮಟ್ಟ ಸಾಕಷ್ಟು ಉತ್ತಮಗೊಂಡಿದೆ. ಭಾರತದ ಸಿಎ ಶಿಕ್ಷಣದ ರೀತಿಯಲ್ಲೇ ಇಂಗ್ಲೆಂಡ್ನ ಎಸಿಸಿಎ ಕೋರ್ಸ್ ಇದ್ದು, ಭಾರತದ ಸಿಎಗಿಂತ ಎಸಿಸಿಎ ಕಲಿಕೆಯು ಹೆಚ್ಚುವರಿಯಾಗಿ ಕಾನೂನು ಮತ್ತು ಅಂತಾರಾಷ್ಟ್ರೀಯ ಹಣಕಾಸು ರಿಪೋರ್ಟಿಂಗ್ ಸ್ಟಾಂಡರ್ಡ್(ಐಎಫ್ಆರ್ಎಸ್) ಜ್ಞಾನವನ್ನು ಒದಗಿಸುತ್ತದೆ. ಇದರ ಜೊತೆಗೆ ಇಂಗ್ಲೆಂಡ್ ಜಿಎಎಪಿ(ಇಂಗ್ಲೆಂಡಿನ ಅಕೌಂಟಿಂಗ್ ಪ್ರಾಕ್ಟೀಸ್ ಮಾಹಿತಿ) . ಈ ಕೋರ್ಸ್ ಅಭ್ಯಾಸ ಮಾಡುವುದರಿಂದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಜೊತೆಗೆ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಎಸಿಸಿಎ ಸರ್ಟಿಫಿಕೇಟ್ ಜೊತೆ ಎಂಬಿಎ ಪದವಿಯು ಜೊತೆಗಿದ್ದರೆ ನೌಕರಿ ಗಿಟ್ಟಿಸಿಕೊಳ್ಳೋದು ಸುಲಭ.

ಪದವಿ/ಸ್ನಾತಕೋತ್ತರ ಪದವಿ ಅಥವಾ ಬೇರೆ ಯಾವುದಾದರೂ ಶೈಕ್ಷಣಿಕ ಅರ್ಹತೆ ಇರುವ ಅಭ್ಯರ್ಥಿಗಳು ಎಸಿಸಿಎ ಸದಸ್ಯರಾಗಲು ಅವಕಾಶವಿದೆ. ಎಸಿಸಿಎ ಶಿಕ್ಷಣವು ಒಟ್ಟು 14 ಪೇಪರ್ ಗಳನ್ನು ಒಳಗೊಂಡಿದೆ. ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಪ್ರತಿ ಅವಧಿಯಲ್ಲಿಯೂ 4 ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಈ ರೀತಿ ಮಾಡಿದರೆ ಕನಿಷ್ಠ 2 ವರ್ಷದಲ್ಲಿಯೇ ಎಸಿಸಿಎ ಕೋರ್ಸ್ ಪೂರ್ಣಗೊಳಿಸಬಹುದಾಗಿದೆ. ಭಾರತೀಯ ಸಿಎಯಲ್ಲಿ ಕೆಲವು ಪೇಪರ್ ಅನ್ನು ಮುಗಿಸಿದ್ದರೆ ನೇರವಾಗಿ ಎಸಿಸಿಎಯ ಪ್ರೊಫೆಷನಲ್ ಲೆವೆಲ್ಗೆ ಸೇರ್ಪಡೆಯಾಗಬಹುದು.

ಅಕೌಂಟೆಂಟ್ಸ್ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಜೂನ್ ಮತ್ತು ಡಿಸೆಂಬರ್ ಅವಧಿಯ ಪರೀಕ್ಷೆಯನ್ನು ‘ಅರ್ಲಿ’, ‘ಸ್ಟಾಂಡರ್ಡ್’ ಮತ್ತು ‘ಲೇಟ್’ ಎಂಬ ಮೂರು ಅವಧಿಯಲ್ಲಿ ಬರೆಯಲು ಅವಕಾಶವಿದೆ. ಅರ್ಲಿ(ಬೇಗ) ಎಕ್ಸಾಂ ಮಾರ್ಚ್ 8 ಮತ್ತು ಸೆಪ್ಟೆಂಬರ್ 8ರಂದು ಜರುಗಲಿದೆ. ಅರ್ಲಿ ಪರೀಕ್ಷೆಯನ್ನು ಆನ್ಲೈನ್ನಲ್ಲಿ ಬರೆಯಲು ಮಾತ್ರ ಬರೆಯಬಹುದು. ಸ್ಟಾಂಡರ್ಡ್ ಎಗ್ಸಾಂ ಮಾರ್ಚ್ 9-ಏಪ್ರಿಲ್ 8ರಂದು ಮತ್ತು ಸೆಪ್ಟೆಂಬರ್ 9 -ಅಕ್ಟೋಬರ್ 8ರಂದು ನಡೆಯಲಿದೆ. ಈ ಪರೀಕ್ಷೆಯನ್ನು ಆನ್ಲೈನ್ನಲ್ಲಿ ಮಾತ್ರವಲ್ಲದೆ ಪೇಪರ್ ಪೆನ್ ಮೂಲಕ ಪರೀಕ್ಷಾ ಕೊಠಡಿಯಲ್ಲಿ ಬರೆಯಬಹುದು. ಲೇಟ್ ಎಗ್ಸಾಂ 9 ಏಪ್ರಿಲ್-ಮೇ 8ರಂದು ಮತ್ತು ಅಕ್ಟೋಬರ್ 9-ನವೆಂಬರ್ 8ರ ನಡುವೆ ಜರುಗಲಿದೆ. ಈ ಪರೀಕ್ಷೆಯನ್ನು ಆನ್ಲೈನ್ ಮೂಲಕ ಮಾತ್ರ ಬರೆಯಲು ಅವಕಾಶವಿದೆ. 6 ತಿಂಗಳಿಗೆ ನಾಲ್ಕು ಪೇಪರ್ ಬರೆಯುವ ಸಾಮರ್ಥ್ಯ ನಿಮಗೆ ಇದ್ದಲ್ಲಿ ಎಸಿಸಿಎ ಕೋರ್ಸ್ ಮುಗಿಸಲು ಎರಡು ವರ್ಷದ ಅವಧಿ ಬೇಕಾಗಬಹುದು. ಎಸಿಸಿಎ ಪರೀಕ್ಷೆಯು ಜೂನ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಜರುಗುತ್ತದೆ.

ಭಾರತೀಯ ಸಿಎಯಲ್ಲಿ ಕೆಲವು ಪೇಪರ್ಗಳನ್ನು ಬರೆದು ಪೂರ್ಣಗೊಳಿಸಿದವರಿಗೆ ಎಸಿಸಿಎಯಲ್ಲಿ ಕೆಲವು ಪೇಪರ್ಗಳನ್ನು ಬರೆಯುವುದರಿಂದ ವಿನಾಯಿತಿ ಕೂಡ ಲಭ್ಯವಾಗುತ್ತದೆ. ಎಸಿಸಿಎ ಮೆಂಬರ್ಷಿಪ್ (ACCA Membership) ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ 3 ವರ್ಷ ಅಥವಾ 36 ತಿಂಗಳ ವರೆಗೆ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸಿದ (Practical Work) ಅನುಭವ ಬೇಕಾಗುತ್ತದೆ. ಈ ಕೆಲಸದ ಅನುಭವವನ್ನು ಎಸಿಸಿಎ ಕೋರ್ಸ್ ಅಧ್ಯಯನ ಮಾಡುವ ಮೊದಲು ಎಸಿಸಿಎ ಅಧ್ಯಯನ ಸಮಯದಲ್ಲಿ ಇಲ್ಲವೇ ಅಧ್ಯಯನ ಪೂರ್ಣಗೊಳಿಸಿದ ನಂತರ ಕೂಡ ಪಡೆಯಬಹುದು.

ಈ ಕೋರ್ಸ್ ಪಡೆಯಲು ಚಂದಾದಾರಿಕೆ (ಸಬ್ಸ್ಕ್ರಿಪ್ಷನ್) ಶುಲ್ಕ ಎಷ್ಟು? ಆರಂಭಿಕ ದಾಖಲಾತಿಗೆ 30 ಪೌಂಡ್ ಆಗಿದ್ದು, ಮರು ದಾಖಲಾತಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ಸಬ್ಸ್ಕ್ರಿಪ್ಷನ್ಗೆ 120 ಪೌಂಡ್ ಇರಲಿದ್ದು, ಅಪ್ಲೈಡ್ ಸ್ಕಿಲ್ಸ್ ಎಕ್ಸಾಂ ಶುಲ್ಕ ಈ ಜೂನ್ 2023 ಸ್ಟಾಂಡರ್ಡ್ ಪ್ರವೇಶಕ್ಕೆ 129 ಪೌಂಡ್ ಆಗಿರುತ್ತದೆ. ಜೂನ್ 2023 ಲೇಟ್ ಪ್ರವೇಶಕ್ಕೆ 329 ಪೌಂಡ್ ಶುಲ್ಕವಿರುತ್ತದೆ. ವಿವಿಧ ಶುಲ್ಕಗಳ ಕುರಿತ ಮಾಹಿತಿಯನ್ನು ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು. ಎಸಿಸಿಎ ಕೋರ್ಸ್ ಕುರಿತು ಹೆಚ್ಚಿನ ವಿವರಕ್ಕೆ www.accaglobal.com ವೆಬ್ ವಿಳಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

Leave A Reply

Your email address will not be published.