Harish Poonja: ರಣ ರೋಚಕ ಘಟ್ಟ ತಲುಪಿದ ಬೆಳ್ತಂಗಡಿ ಕ್ಷೇತ್ರ ಚುನಾವಣೆ | ಹರೀಶ್ ಪೂಂಜಾಗೆ ಸೆಡ್ಡು ಹೊಡೆದ ರಕ್ಷಿತ್ ಶಿವರಾಂ, ಚುನಾವಣಾ ಪ್ರಚಾರಕ್ಕೆ ನಟ ವಿಜಯ ರಾಘವೇಂದ್ರ ಎಂಟ್ರಿ !
Actor Vijaya Raghavendra : ಬೆಳ್ತಂಗಡಿ ವಿಧಾನಸಭಾ ಚುನಾವಣಾ ಕಣವು ಕ್ಷಣ ಕ್ಷಣಕ್ಕೂ ಹೊಸ ರಂಗು ಪಡೆದುಕೊಳ್ಳುತ್ತಿದೆ. ಹಾಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಕಾಂಗ್ರೆಸಿನ ಹೊಸ ಮುಖ ರಕ್ಷಿತ್ ಶಿವರಾಂ ಅವರು ಈ ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ.
ಇದೀಗ ಚುನಾವಣೆ ಘೋಷಣೆಯಾಗಿ ರಾಜ್ಯದೆಲ್ಲೆಡೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯುತ್ತಿದೆ. ಏಪ್ರಿಲ್ 17 ರಂದು ಬೆಳ್ತಂಗಡಿ ತಾಲೂಕಿನ ಹಳ್ಳಿ ಹಳ್ಳಿಗಳೂ ಬಿಕೋ ಎನ್ನಲಿವೆ. ಊರಿಗೆ ಊರೇ, ಬೆಳ್ತಂಗಡಿಗೆ ಹರಿದು ಬರಲಿದ್ದು ಎರಡು ವಿಭಿನ್ನ ಶಕ್ತಿಗಳ ಶಕ್ತಿ ಪ್ರದರ್ಶನದಲ್ಲಿ ಜನರು ಪಾಲು ಪಡೆದುಕೊಳ್ಳಲಿದ್ದಾರೆ.
ಏಪ್ರಿಲ್ 17ರಂದು ತಮ್ಮ ಸಮಸ್ತ ಶಕ್ತಿಯೊಂದಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಬೃಹತ್ ಮೆರವಣಿಯೊಂದಿಗೆ ರಣ ಕಹಳೆ ಮೊಳಗಿಸಿ ನಾಮಪತ್ರ ಸಲ್ಲಿಸಲಿದ್ದಾರೆ.
ವಿಶೇಷವೆಂದರೆ ಈ ಚುನಾವಣೆಗೆ ಜನಪ್ರಿಯ ಚಲನ ಚಿತ್ರನಟ ವಿಜಯ ರಾಘವೇಂದ್ರ (Actor Vijaya Raghavendra) ಅವರು ಎಂಟ್ರಿ ಕೊಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ದಿನ ತಮ್ಮ ಭಾವ ರಕ್ಷಿತ್ ಶಿವರಾಮಗೆ ನಟ ವಿಜಯ ರಾಘವೇಂದ್ರ ಸಾಥ್ ನೀಡಲಿದ್ದಾರೆ.
ದಿನಾಂಕ 17.04.2023 ನೇ ಸೋಮವಾರ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಆ ದಿನ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾ ಭವನದಲ್ಲಿ ಬೆಳಗ್ಗೆ 9.30 ಕ್ಕೆ ಸೇರಿ 10.00 ಗಂಟೆಗೆ ನಡೆಯುವ ಬಹಿರಂಗ ಚುನಾವಣಾ ಪ್ರಚಾರ ಸಭಾ ಕಾರ್ಯಕ್ರಮ ನಡೆದು ಬ್ರಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುವುದೆಂದು ಬೆಳ್ತಂಗಡಿ ಕಾಂಗ್ರೆಸ್ ಸಮಿತಿ ತೀರ್ಮಾನಿಸಲಾಗಿದೆ.
ಸಭಾ ಕಾರ್ಯಕ್ರಮದಲ್ಲಿ ಕೆ. ಪಿ. ಸಿ. ಸಿ ಮಾಧ್ಯಮ ವಕ್ತಾರರಾದ ನಿಕೇತ್ ರಾಜ್ ಮೌರ್ಯರವರು ಪ್ರಧಾನ ಭಾಷಣ ಗೈಯಲಿದ್ದಾರೆ. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಮಾಜಿ ಸಚಿವರಾದ ಗಂಗಾಧರ ಗೌಡ, ಕೆ. ಪಿ. ಸಿ. ಸಿ ಸಂಯೋಜಕರಾದ ಶಾಹಿದ್ ತೆಕ್ಕಿಲ್ ಮತ್ತು ಜಿಲ್ಲಾ ಮಟ್ಟದ ಪಕ್ಷದ ನಾಯಕರುಗಳು ಭಾಗವಹಿಸಲಿದ್ದಾರೆ.
ಏಪ್ರಿಲ್ 17ರಂದು ಬಿಜೆಪಿ ಕೂಡ ಶಕ್ತಿ ಪ್ರದಶನಕ್ಕೆ ಸಜ್ಜಾಗಿದೆ. ಹಾಲಿ ಶಾಸಕರಾದ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ದಿನ ಬೆಳ್ಳಗ್ಗೆ 10.೦೦ ಗಂಟೆಗೆ ಕುತ್ಯಾರು ಶ್ರೀ ಸೋಮನಾಥೇಶ್ವೆರ ದೇವಸ್ಥಾನ ಸನ್ನಿಧಿಯಲ್ಲಿ ವಿಶೇಷ ಸೇವೆ ಸಲ್ಲಿಸಿ ಬೃಹತ್ ಸಂಖ್ಯೆಯ ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಬೆಳ್ತಂಗಡಿಯ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ ಮತ್ತು 12.೦೦ ಗಂಟೆಗೆ ಸರಿಯಾಗಿ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಪೂಂಜಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ.