Katera: ಡಿ ಬಾಸ್ ಅಭಿನಯದ ‘ಕಾಟೇರ’ ಫಸ್ಟ್ ಲುಕ್ ರಿವೀಲ್! ಹಣೇಲಿ ಕುಂಕುಮ, ಕುತ್ತಿಗೇಲಿ ದೇವರ ರಕ್ಷೆ, ಕುರುಚಲು ಗಡ್ಡದ ದರ್ಶನ್ ಖಡಕ್ ಲುಕ್ ಹೇಗಿದೆ ಗೊತ್ತಾ?

Katera: ಡಿ ಬಾಸ್ ದರ್ಶನ(Darshan) ಅಭಿನಯದ ‘ಕ್ರಾಂತಿ'(Kranti) ಚಿತ್ರ ಅದ್ಧೂರಿಯಾಗಿ ತೆರೆ ಕಂಡು ಭರ್ಜರಿಯಾಗಿ ಕಲೆಕ್ಷನ್ ಮಾಡಿ ಸಾಕಷ್ಟು ಸದ್ದು ಮಾಡಿತ್ತು. ನಾಡಿನ ಜನತೆಯ ಮನ ಗೆದ್ದು ಎಲ್ಲರ ಮನೆಮಾತಾಗಿತ್ತು. ಈ ಸಿನಿಮಾದ ಬೆನ್ನಲ್ಲೇ ಡಿ ಬಾಸ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಕಾಟೇರ'(Katera) ಇದೀಗ ಮತ್ತೆ ಸದ್ದು ಮಾಡಲಾರಂಬಿಸಿದೆ. ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು ಚಿತ್ರದ ಫಸ್ಟ್ ಲುಕ್ ಪೋಸ್ಟರ್(Poster) ರಿಲೀಸ್ ಆಗಿ ಸಖತ್ ಧೂಳೆಬ್ಬಿಸಿದೆ.

ಹೌದು, ತರುಣ್ ಸುಧೀರ್(Tarun Sudheer) ನಿರ್ದೇಶನದ ಮತ್ತು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್(Rack line Entertainment) ನಿರ್ಮಿಸಿರುವ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಬರೀ ಮೋಷನ್ ಪೋಸ್ಟರ್ ಮಾತ್ರ ನೋಡಿದವರಿಗೆ ಇದೀಗ ‘ಕಾಟೇರ’ನ ನಿಜವಾದ ದರ್ಶನವಾಗಿದೆ. ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಿರ್ದೇಶಕರು ಟೈಟಲ್ ನ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ಮಧ್ಯರಾತ್ರಿಯಲ್ಲಿ ಬಹಿರಂಗವಾದ ಪೋಸ್ಟಪ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು. ಮೊನ್ನೆ ಯುಗಾದಿಗೆ ನಾಯಕಿ ಪ್ರಭಾವತಿಯ(Prabhavati) ಪೋಸ್ಟರ್ ಬಂದಿತ್ತು.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ಗೆ(Rack Line Venktesh) ಹುಟ್ಟುಹಬ್ಬದ ಪ್ರಯುಕ್ತ ಸ್ಪೆಷಲ್ ವಿಡಿಯೋ ಮೂಲಕ ಚಿತ್ರತಂಡವು ಶುಭಾಶಯ ಕೋರಿದೆ. ‘ಕಾಟೇರ’ ಸೆಟ್‌ನಲ್ಲಿ ರಾಕ್‌ಲೈನ್ ವೆಂಕಟೇಶ್ ಕಾಣಿಸಿಕೊಂಡಿರುವ ಝಲಕ್‌ಗಳನ್ನು ಕಟ್ ಮಾಡಿ ವಿಶೇಷವಾಗಿ ಸೂಪರ್ ಹಿಟ್ ಸಿನಿಮಾಗಳ ಸರದಾರನಿಗೆ ತಂಡ ವಿಡಿಯೋ ಡೆಡಿಕೇಟ್ ಮಾಡಿದೆ. “30 ವರ್ಷಗಳಿಂದ ಚಿತ್ರರಂಗದಲ್ಲಿರುವ ಪ್ರಮುಖ ಭಾಷೆಗಳಲ್ಲಿ 43 ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ, ವಿತರಕ, ಕನ್ನಡ ಚಿತ್ರರಂಗದ ಟ್ರಬಲ್ ಶೂಟರ್, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ರಾಕ್‌ಲೈನ್ ವೆಂಕಟೇಶ್ ಅವರಿಗೆ ಹುಟ್ಟುಹಬ್ಬ ಶುಭಾಶಯಗಳು” ಎಂದು ವಿಶ್ ಮಾಡಿದೆ.
ಸ್ಪೆಷಲ್ ವಿಡಿಯೋದಲ್ಲಿ ‘ಕಾಟೇರ'(Katera) ಚಿತ್ರದ ಮುಹೂರ್ತದ ಝಲಕ್ ಜೊತೆಗೆ ಸಿನಿಮಾ ಶೂಟಿಂಗ್ ಝಲಕ್ ಕೂಡ ಇದೆ. ಸೆಟ್‌ನಲ್ಲಿ ದರ್ಶನ್ ‘ಕಾಟೇರ’ ಲುಕ್‌ನಲ್ಲಿ ಕಾಣಿಸಿಕೊಂಡಿರೋದನ್ನು ನೋಡಬಹುದು. ಶರ್ಟ್ ಕೈ ಮಡಚಿ ಕುತ್ತಿಗೆಯಲ್ಲಿ ದೇವರ ಡಾಲರ್ ಜೊತೆಗೆ ಗಡ್ಡ ಬಿಟ್ಟು ಖಡಕ್ ಲುಕ್‌ನಲ್ಲಿರುವ ದರ್ಶನ್‌ನ ನೋಡಬಹುದು. ಸದ್ಯ ಈ ವಿಡಿಯೋವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ಮೋಷನ್ ಪೋಸ್ಟರ್‌ನಲ್ಲಿ ‘ಕಾಟೇರ’ನ ಗ್ರಾಫಿಕ್ಸ್ ಡಿಸೈನ್ ನೋಡಿದ್ದ ಅಭಿಮಾನಿಗಳು ಅಸಲಿ ಲುಕ್ ಈಗ ನೋಡಿ ಥ್ರಿಲ್ಲಾಗಿದ್ದಾರೆ.
ಅಂದಹಾಗೆ ರಾಕ್‌ಲೈನ್ ವೆಂಕಟೇಶ್ ಬ್ಯಾನರ್‌ನಲ್ಲಿ ನಿರ್ಮಾಣವಾಗಬೇಕಿದ್ದ ‘ರಾಜಾ ವೀರಮದಕರಿ ನಾಯಕ’ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಆ ಸಿನಿಮಾ ಬದಲು ‘D56’ ಸಿನಿಮಾ ಸೆಟ್ಟೇರಿತ್ತು. ಕೆಲ ದಿನಗಳ ಹಿಂದೆಯಷ್ಟೇ ಚಿತ್ರಕ್ಕೆ ‘ಕಾಟೇರ’ ಟೈಟಲ್ ಫಿಕ್ಸ್ ಆಗಿದೆ. ರಾಕ್‌ಲೈನ್ ಸ್ಟುಡಿಯೋ, ಹೈದರಾಬಾದ್ ಹಾಗೂ ಕನಕಪುರದಲ್ಲಿ ಚಿತ್ರದ ಒಂದಷ್ಟು ಸನ್ನಿವೇಶಗಳ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. ಶೀರ್ಷಿಕೆ ಪೋಸ್ಟರ್ ಒಂದು ಬಾರಿ ಗಮನಿಸಿದರೆ, 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್ ಸುಧೀರ್, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಏಕೆಂದರೆ ಪೋಸ್ಟರ್‌ನಲ್ಲಿ ಪಾರ್ಲಿಮೆಂಟ್ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹವೂ ಕಾಣಿಸುತ್ತಿದೆ.
ಹಿಂದಿನ ಸಿನಿಮಾಗಳಲ್ಲಿನ ಖದರ್ ಅನ್ನು ಇಲ್ಲಿಯೂ ಮುಂದುವರಿಸಿರುವ ದರ್ಶನ್, ಮತ್ತೆ ಮತ್ತೆ ಲಾಂಗ್ ಹಿಡಿದು ರಗಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಪಂಚೆಯಲ್ಲಿ ಹಳ್ಳಿಗನಾಗಿ ಕಾಣಿಸಿದ್ದಷ್ಟೇ ಅಲ್ಲದೆ, ‘ಪ್ರತೀ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆಂದಾಗ..’ ಎಂಬ ಖಡಕ್ ಡೈಲಾಗ್ ಸಹ ಅವರ ಬಾಯಿಂದ ಹೊರಬಿದ್ದಿದೆ. ಫೈರ್ ಎಫೆಕ್ಟ್‌ಗಳಿಂದ ತುಂಬಿರುವ ಮೋಷನ್ ಪೋಸ್ಟರ್, ಹಿನ್ನಲೆಯಲ್ಲಿ ಸುನಿತಾ ಎಸ್ ಮುರಳಿ ಹಾಡಿರುವ ಹೈ-ವೋಲ್ಟೇಜ್ ಹಾಡನ್ನು ಹೊಂದಿದೆ. ದರ್ಶನ್ ನೀಡಿದ ಪಂಚ್‌ಲೈನ್‌ನಿಂದ ಬೆಂಬಲಿತವಾದ ರಕ್ತದ ಕಲೆಯ ಮಚ್ಚೆಯ ದೃಶ್ಯವೂ ಇದೆ. ಹಣೆಯ ಮೇಲೆ ಕುಂಕುಮವನ್ನು ಧರಿಸಿ, ಉರಿಯುತ್ತಿರುವ ನೋಟದಲ್ಲಿ ಕಾಣುತ್ತಾರೆ. ಡಾರ್ಕ್ ಮೆರೂನ್ ಟಿ-ಶರ್ಟ್ ಮತ್ತು ಲುಂಗಿಯನ್ನು ಧರಿಸಿರುವ ದರ್ಶನ್ ಮಚ್ಚು ಹಿಡಿದಿದ್ದಾರೆ.
ಬಹಳ ಅದ್ಧೂರಿಯಾಗೇ ಸೆಟ್‌ಗಳನ್ನು ಹಾಕಿ ಸಿನಿಮಾ ಶೂಟಿಂಗ್ ಮಾಡುತ್ತಿರುವುದು ಗೊತ್ತಾಗುತ್ತಿದೆ. 70ರ ದಶಕದಲ್ಲಿ ಹಂಪಿಯಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಆಧರಿಸಿ ‘ಕಾಟೇರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಜಡೇಶ್ ಹಂಪಿ- ತರುಣ್ ಸುಧೀರ್ ಚಿತ್ರಕ್ಕೆ ಕತೆ, ಚಿತ್ರಕಥೆ ಹೆಣೆದಿದ್ದಾರೆ. ತೆಲುಗು ನಟ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕ್ರಾಂತಿ’ ನಂತರ ದರ್ಶನ್ ‘ಕಾಟೇರ’ನಾಗಿ ಪ್ರೇಕ್ಷಕರು ಮುಂದೆ ಬರಲಿದ್ದಾರೆ.
ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದರೆ, ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನ, ಚಿತ್ರಕಥೆಯ ಜವಾಬ್ದಾರಿ ತರುಣ್ ಸುಧೀರ್ ಮತ್ತು ಜಡೇಶ್ ಕುಮಾರ್ ಹಂಪಿ ಅವರದ್ದು. ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾ ರಾಮ್ ಕನ್ನಡಕ್ಕೆ ಪರಿಚಿತಗೊಳ್ಳುತ್ತಿದ್ದಾರೆ. ಹಾಗಾಗಿ ಮಾಲಾಶ್ರೀ ಕೂಡ ಮಗಳ ಜೊತೆ ‘ಕಾಟೇರ’ ಶೂಟಿಂಗ್ ಸೆಟ್‌ಗೆ ಬರ್ತಿದ್ದಾರೆ.
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಬಿಟ್ಟರೆ ದರ್ಶನ್ ಐತಿಹಾಸಿಕ ಕಥಾಹಂದರದ ಸಿನಿಮಾದಲ್ಲಿ ನಟಿಸಿದ್ದು ಕಮ್ಮಿ. ಅದರಲ್ಲೂ ನೈಜ ಘಟನೆಗಳನ್ನಾಧರಿಸಿದ ಚಿತ್ರದಲ್ಲಿ ಮಚ್ಚು ಹಿಡಿದು ಖಡಕ್ ಲುಕ್‌ನಲ್ಲಿ ದರ್ಶನ ಕೊಡ್ತಿದ್ದಾರೆ. ಮಾಸ್ತಿ ಸಂಭಾಷಣೆ ‘ಕಾಟೇರ’ನ ಖದರ್ ಮತ್ತಷ್ಟು ಹೆಚ್ಚಿಸುತ್ತಿದೆ. ಚೌಕ ಮತ್ತು ರಾಬರ್ಟ್ ನಂತರ ತರುಣ್ ಸುಧೀರ್ ಮತ್ತು ದರ್ಶನ್ ಮೂರನೇ ಬಾರಿಗೆ ಒಂದಾಗಿದ್ದಾರೆ. ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಸಾಹಸ ನಡೀತಿದೆ.