SK Bhagavan : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ನಿಧನ
Director S K Bhagavan Passes away : ಇಂದು ( ಫೆ.20) ಮುಂಜಾನೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಅವರು ಸುಮಾರು 6 ಗಂಟೆಗೆ ನಿಧನ ಹೊಂದಿದ್ದಾರೆ ( Director S K Bhagavan Passes Away). ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನ ಹೊಂದಿದ್ದಾರೆ.
ಇವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.
1933 ರಲ್ಲಿ ಜನಿಸಿದ ಇವರು ಅನೇಕ ಹಿಟ್ ಚಿತ್ರಗಳ ನಿರ್ದೇಶನ ನೀಡಿದವರು. ಇವರ ಸಂಪೂರ್ಣ ಹೆಸರು ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ( S K Bhagavan). ಇವರು ರಂಗಭೂಮಿ ಹಿನ್ನಲೆಯುಳ್ಳವರು. ಇವರು 1956 ರಲ್ಲಿ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು.
“ಕಸ್ತೂರಿ ನಿವಾಸ, ಸಂಧ್ಯಾರಾಗ, ಬಯಲುದಾರಿ, ಹೊಸ ಬೆಳಕು, ಬೆಂಕಿಯ ಬಲೆ…” ಮುಂತಾದ ಹಲವು ಸಿನಿಮಾಗಳು ಭಗವಾನ್ ಬತ್ತಳಿಕೆಯಿಂದ ಮೂಡಿ ಬಂದಿದೆ. ನಂತರ ಸಿನಿಮಾ ನಿರ್ದೇಶನದಿಂದ ಬ್ರೇಕ್ ತಗೊಂಡು, “ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್”ನ ಪ್ರಾಂಶುಪಾಲರಾಗಿ ತಮ್ಮ ಜ್ಞಾನ ಮತ್ತು ಅನುಭವನ್ನು ಇಂದಿನ ಹೊಸ ತಲೆಮಾರಿಗೂ, ಕಲಾಸಕ್ತರಿಗೂ ಹಂಚುವ ಕೆಲಸ ಮಾಡಿದ್ದರು. ಇವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ತುಂಬಲಾರದ ನಷ್ಟ ಎಂದೇ ಹೇಳಬಹುದು.
ಸಹಕಾರ ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಡಾ.ರಾಜ್‌ಕುಮಾರ್ ಜೊತೆ ಇವರು ಮಾಡಿದಂತಹ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಹಾಗಾಗಿ ಇವರು ರಾಜ್ ಕುಟುಂಬಕ್ಕೆ ತುಂಬಾ ಆಪ್ತರು.
ಕನ್ನಡ ಚಿತ್ರರಂಗದಲ್ಲಿ ಸುಮಾರು 55 ಚಿತ್ರಗಳನ್ನು ದೊರೈರಾಜ್ ಅವರ ಜೊತೆ ಸೇರಿ ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೊರೈ-ಭಗವಾನ್ ಎಂದೇ ಇಬ್ಬರು ಖ್ಯಾತರಾಗಿದ್ದ ಇವರು, ಸರಿ ಸುಮಾರು 25 ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ದೇಶನ ಮಾಡಿದ ಕೀರ್ತಿ ಈ ದೊರೈ ಭಗವಾನ್ ಜೋಡಿ ಪಡೆದುಕೊಂಡಿತ್ತು ಎಂದು ಹೇಳಬಹುದು.