ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ!
ರಾಜ್ಯ ಸರ್ಕಾರವು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವನ್ನು ಕೈಗೆತ್ತಿಕೊಂಡಿದ್ದು, ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನೂ ಭರ್ತಿ ಮಾಡಲು ಯೋಜಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದು, ಹಲವು ಇಲಾಖೆಗಳು ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ತಿಳಿದುಬಂದಿದೆ. 2023ರ ಜನವರಿ/ಫೆಬ್ರವರಿ ವೇಳೆಗೆ ನೇಮಕಾತಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಒಂದು ತಿಂಗಳ ಹಿಂದೆಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ 2023ರ ಅಂತ್ಯದ ವೇಳೆಗೆ ಕನಿಷ್ಠ 50,000 ಜನರನ್ನು ನೇಮಿಸಿಕೊಳ್ಳುವ ನಿರೀಕ್ಷೆಗಳಿವೆ ಎಂದಿದ್ದಾರೆ.
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಕೆಎಸ್‍ಆರ್‍ಟಿಸಿ) 2,000 ಚಾಲಕರ ಹುದ್ದೆಗಳಿಗೆ ಅರ್ಜಿಗಳ ಆಹ್ವಾನಿಸಿದೆ. ಕರ್ನಾಟಕ ಪವರ್ ಟ್ರಾನ್ಸ್‍ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) 1,492 ಎಂಜಿನಿಯರ್‍ಗಳಿಗೆ ಅರ್ಜಿ ಆಹ್ವಾನಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ)330 ಎಂಜಿನಿಯರ್‍ಗಳ ಹುದ್ದೆಗಳು ಖಾಲಿ ಇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಲೆಕ್ಕಾಕಾರಿ ವಿಭಾಗದಲ್ಲಿ 6,406 ಹುದ್ದೆಗಳು ಖಾಲಿಯಿದೆ. ಕರ್ನಾಟಕ ಅಬಕಾರಿ ಇಲಾಖೆಯು 1,000 ಕಾನ್‍ಸ್ಟೆಬಲ್‍ಗಳು ಮತ್ತು 100 ಸಬ್‍ಇನ್‍ಸ್ಪೆಕ್ಟರ್‍ಗಳ ಹುದ್ದೆಗಳಿಗೆ ಅರ್ಜಿಗೆ ಆಹ್ವಾನಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 3,484 ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳ ಕರೆದಿದೆ.
ಸಿಬ್ಬಂದಿ ಕೊರತೆಯಿಂದ ಪ್ರಸ್ತುತ ಕೆಲಸ ಮಾಡುತ್ತಿರುವ ನೌಕರರಿಗೆ ಕೆಲಸದ ಹೊರೆ ಹೆಚ್ಚಾಗಿದೆ. ಸಿಬ್ಬಂದಿಗಳ ನೇಮಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನೇಮಕಾತಿ ಮಾಡಿಕೊಳ್ಳಲು ಸರ್ಕಾರಕ್ಕೆ ಇರುವ ಪ್ರಮುಖ ಅಡಚಣೆ ಎಂದರೆ ನ್ಯಾಯಾಲಯದ ಪ್ರಕರಣಗಳು. ಕಾನೂನು ತೊಡಕುಗಳಿಂದಾಗಿ 45,000 ಹುದ್ದೆಗಳು ಖಾಲಿ ಉಳಿದಿವೆ. ಇಲಾಖೆಯು 15,000 ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಶಿಕ್ಷಕರ ನೇಮಕಾತಿಯನ್ನು ಇದು ಒಳಗೊಂಡಿದೆ. ಸರಕಾರ ಮಧ್ಯಪ್ರವೇಶಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದ್ದಾರೆ.