ಅತಂತ್ರ ಸ್ಥಿತಿಯಲ್ಲಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ | ಬಿಜೆಪಿಯಲ್ಲಿ ರಿಜೆಕ್ಟ್, ಅತ್ತ ಕಾಂಗ್ರೇಸ್ ಬಾಗಿಲಲ್ಲೇ ಪ್ರತಿರೋಧ, ಠೇವಣಿ ಕಳಕೊಂಡ್ರೂ ಸರಿ, ಎಲೆಕ್ಷನ್ ನಿಲ್ತೇನೆ ಅಂತಾರೆ ರೈಕುಲು!
ಪುತ್ತೂರು ಕೋಡಿಂಬಾಡಿಯ ರೈ ಎಸ್ಟೇಟ್ ಮಾಲಕ, ಬಿಜೆಪಿಯ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಮಾಜಿ ಸದಸ್ಯ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನ ನಡೆಸಿರುವುದಾಗಿ ಹಲವು ತಿಂಗಳುಗಳಿಂದ ಪಿಸುಮಾತುಗಳು ನಡೆಯುತ್ತಿದ್ದು, ಇದೀಗ ಆ ವಿಚಾರ ಪುತ್ತೂರು ತಾಲೂಕಿನಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಉಪ್ಪಿನಂಗಡಿ ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ, ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವಿಕ್ರಮ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ ಆಗಿರುವ ಅಶೋಕ್ ಕುಮಾರ್ ರೈಯವರು ಬಿಜೆಪಿಗೆ ಗುಡ್ ಬೈ ಹೇಳ್ತಾರೆ, ಕಾಂಗ್ರೆಸ್ ಸೇರ್ತಾರೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಅವರ ಕಾಂಗ್ರೆಸ್ ಸೇರ್ಪಡೆಗೆ ಕಾವು ಹೇಮನಾಥ ಶೆಟ್ಟಿ ಬಣ ಸೇರಿದಂತೆ ಹಲವಾರು ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ.
ಅಶೋಕ್ ಕುಮಾರ್ ರೈ ಅರ್ಜೆಂಟಾಗಿ ಎಂಎಲ್ಎ ಎಲೆಕ್ಷನ್ ಗೆ ನಿಲ್ಲಬೇಕಿದೆ. ಅದಕ್ಕಾಗಿ ಒಂದು ಪಕ್ಷದ ಹುಡುಕಾಟದಲ್ಲಿ ಇದೀಗ ‘ ರೈಕುಳು ‘ ಬಿಸಿಯಾಗಿದ್ದಾರೆ. ಆದರೆ ಅವರಿಗೆ ಪಕ್ಷಕ್ಕೆ ಸ್ವಾಗತಿಸಿ ಟಿಕೆಟ್ ನೀಡಿ ಆಗಬೇಕಿರುವುದು ಯಾರಿಗೂ ಏನೇನೂ ಇಲ್ಲ. ಕಾಂಗ್ರೆಸ್ ನಲ್ಲೇ ಹಲವು ಆಕಾ0ಕ್ಷಿಗಳು ಬಕ ಪಕ್ಷಿಯ ಥರ ದಶಕಗಳಿಂದ ಕಾಯುತ್ತಿದ್ದಾರೆ. ಅದರ ಮಧ್ಯೆ ಅಶೋಕ್ ರೈರನ್ನು ತಂದು ಮೆರೆಸುವ ಹರಕತ್ತು ಕಾಂಗ್ರೆಸ್ ನಲ್ಲಿ ಯಾರಿಗೂ ಕಾಣಿಸುತ್ತಿಲ್ಲ.
ಬಿಜೆಪಿಯಲ್ಲಿ ಸದ್ಯ ಶಾಸಕರಾಗಿರುವ ಸಂಜೀವ ಮಟ0ದೂರು ನೇತೃತ್ವದ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿವೆ. ತಳಮಟ್ಟದ ರಾಜಕೀಯ ಜೀವನವನ್ನು ಪ್ರಾರಂಭಿಸಿ ಇದೀಗ ಶಾಸಕನಾಗಿರುವ ಸಂಜೀವ ಮಟ0ದೂರು ಅವರನ್ನು ಪುತ್ತೂರಿನಲ್ಲಿ ಬದಿಗಿರಿಸಿ ಅಶೋಕ್ ರೈ ಅವರಿಗೆ ಟಿಕೆಟ್ ನೀಡಲಾಗುತ್ತದೆ ಅನ್ನುವ ತೀರಾ ಹಾಸ್ಯಾಸ್ಪದವಾದ ಸುದ್ದಿಯನ್ನು ಈಗ ಅಶೋಕ್ ಕುಮಾರ್ ರೈ ಅವರ ಬಳಗ ಹರಿಬಿಡಲು ಪ್ರಾರಂಭಿಸಿದೆ. ಇಂತಹಾ ಸಿಲ್ಲಿ ನಡವಳಿಕೆಗಳಿಂದಲೇ ಅಶೋಕ್ ಕುಮಾರ್ ರೈ ಅವರು ದಿನೇದಿನೇ ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿಯೂ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಅಶೋಕ್ ರೈಯವರು. ಪ್ರತಿ ಬಾರಿ ಹೊಸ ಎಲೆಕ್ಷನ್ ಸಂಹಿತವಾದಾಗ ರೈಕುಳು ಆಕ್ಟಿವೇಟ್ ಆಗುತ್ತಾರೆ. ಹೇಗಾದರೂ ಮಾಡಿ ಬಿಜೆಪಿಯಿಂದ ಟಿಕೆಟ್ ಪಡೆಯಬೇಕು ಅಂತ ಕಳೆದ ಸಲ ತಮ್ಮ ಬ್ಯುಸಿನೆಸ್ ಪಾರ್ಟ್ನರ್ ಆದ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರೂ ಆದ ಡಿ ವಿ ಸದಾನಂದ ಗೌಡರ ಮೂಲಕ ಪ್ರಯತ್ನಿಸಿದ್ದರು. ಆದರೆ ಆ ಅರ್ಜಿಯನ್ನು ಓದದೆಯೇ ಕಸದ ಬುಟ್ಟಿಗೆ ಹಾಕಿತ್ತು ರಾಜ್ಯ ಬಿಜೆಪಿ.
ಯಾಕೆಂದರೆ ಜನ ಸಂಪರ್ಕ ಇಲ್ಲದೆ ಕೆಲವು ದೇವಾಲಯಗಳ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಚುನಾವಣೆಯ ಸಂದರ್ಭ ಮಾತ್ರ ಎಚ್ಚರಗೊಳ್ಳುವ ಅಶೋಕ್ ಕುಮಾರ್ ರೈ ಅವರನ್ನು ಯಾವ ಮತದಾರರೂ ಜನ ಸೇವಕನೆಂದು ಪರಿಗಣಿಸಿಲ್ಲ. ಕೇವಲ ಒಂದು ಸೋಷಿಯಲ್ ಮೀಡಿಯಾದ ತಂಡ ಮತ್ತು ಒಂದಿಷ್ಟು ಪೇಯ್ಡ್ ಅಭಿಮಾನಿಗಳು ಆಗಾಗ ರೈ ಗಳ ಬಗ್ಗೆ ಹೊಗಳಿ ಬರೆದು ಇಮೇಜ್ ಸೃಷ್ಟಿಸಲು ಹೊರಡುತ್ತವೆ. ಅದನ್ನು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನ ಈಗಾಗಲೇ ಗಮನಿಸಿದ್ದಾರೆ. ಸಣ್ಣದಾಗಿ ಸಹಾಯ ಮಾಡಿ ದೊಡ್ಡದಾಗಿ ಪ್ರಚಾರ ಪಡೆದುಕೊಳ್ಳುವ ಅಶೋಕ್ ಕುಮಾರ್ ಅವರ ಗಿಮಿಕ್ ಇದೀಗ ಅವರಿಗೆ ತಿರುಗುಬಾಣವಾಗಿದ್ದು, ಅವರನ್ನು ರಾಜಕೀಯವಾಗಿ ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ.
ಈ ಬಾರಿಯೂ ಬಿಜೆಪಿಯಿಂದ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಶೂನ್ಯ. ಈ ನಿಟ್ಟಿನಲ್ಲಿ ಅವರು ಕಾಂಗ್ರೆಸ್ ಕದ ತಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರೂ ಅಶೋಕ್ ರೈಯವರನ್ನು ಸಂಪರ್ಕಿಸಿದ್ದಾರೆ, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಪುತ್ತೂರಿನ ಜನ ಯಾವುದನ್ನೂ ನಂಬುತ್ತಿಲ್ಲ. ಸುಳ್ಳು ಪ್ರಚಾರ ಮಾಡಿ ಜನರನ್ನು ಸದಾ ಗೊಂದಲ ಎಬ್ಬಿಸಲು ಪ್ರಯತ್ನಿಸುತ್ತಿರುವ ಅಶೋಕ್ ಕುಮಾರ್ ಅವರ ಯಾವುದೇ ಮಾತನ್ನು ಜನ ನಂಬಲು ತಯಾರಿಲ್ಲ. ಅಲ್ಲದೆ ಕಾವು ಹೇಮನಾಥ ಶೆಟ್ಟಿ ಅವರ ಬಣ ಮೀಟಿಂಗ್ನ ಮೇಲೆ ಮೀಟಿಂಗ್ ನಡೆಸಿ ಅಶೋಕ್ ರೈ ಅವರು ಕಾಂಗ್ರೆಸ್ ಗೆ ಬರೋದನ್ನು ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಅವರೆಲ್ಲ ಕಾಂಗ್ರೇಸ್ಹೆ ಹೆಬ್ಬಾಗಿಲಿನ ಮುಂದೆ ರೈ ಅವರ ಬರುವಿಕೆಯನ್ನು ಅಡ್ಡಗಟ್ಟಿ ರಾತ್ರಿ ಹಗಲು ಕಾದು ನಿಂತಿದ್ದಾರೆ. ಹಾಗಾಗಿ ಅವರ ಸ್ಥಿತಿ ಈಗ ಅತಂತ್ರವಾಗಿದ್ದು, ಕೊನೆಯ ಕ್ಷಣದಲ್ಲಿ ಏನಾದರೂ ಆಗಬಹುದು ಎನ್ನುವ ನಿರೀಕ್ಷೆ ಮಾತ್ರ ಅವರಲ್ಲಿ ಉಳಿದಿದೆ.
ಯಾವುದೇ ಷರತ್ತು ವಿಧಿಸದೆ ಸಾಮಾನ್ಯ ಕಾರ್ಯಕರ್ತನಾಗಿ ಅಶೋಕ್ ರೈ ಪಕ್ಷಕ್ಕೆ ಬರುವುದಾದರೆ ನಮ್ಮ ಆಕ್ಷೇಪ ಇಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ್ ರೈ ಮುಂತಾದವರು ಹೇಳಿದ್ದಾರೆ ಎನ್ನಲಾಗಿದೆ. ಶರತ್ತು ವಿಧಿಸದೆ ಬರಲು ಅಶೋಕ್ ಕುಮಾರ್ ರೈಯವರು ಏನು ಸನ್ಯಾಸಿಯೇ ?
ಒಂದು ಮಾಹಿತಿಯ ಪ್ರಕಾರ ಅಶೋಕ್ ರೈಯವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವುದು ಖಚಿತ. ಮತ್ತು ಅವರೇ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಮಾತ್ರ ಕೇವಲ ಊಹಾಪೋಹ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಭಾರೀ ಚರ್ಚೆ ನಡೆಯಲಾರಂಭಿಸಿದ್ದು ಮಾತ್ರ ಸುಳ್ಳಲ್ಲ. ಕಾರಣ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಲ್ಲಿ ಪುತ್ತೂರು ಅತ್ಯಂತ ಮಹತ್ವದ ವಿಧಾನಸಭಾ ಕ್ಷೇತ್ರ. ಪುತ್ತೂರನ್ನು ರಾಜ್ಯದ ಅಷ್ಟೇ ಅಲ್ಲ ದೇಶದ ಹಿಂದುತ್ವದ ಪ್ರಯೋಗಶಾಲೆ ಎನ್ನಲಾಗುತ್ತದೆ. ಹೆಚ್ಚಿನ ರಾಜಕೀಯ ಪ್ರಯೋಗಗಳು ಪುತ್ತೂರು ಕ್ಷೇತ್ರದಿಂದ ಎದ್ದು ಬಂದು ಪರೀಕ್ಷಿಸಲ್ಪಟ್ಟು ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಚಾಲನೆ ಪಡೆದಿವೆ. ಹಾಗಾಗಿ ಸಂಘಪರಿವಾರ ಮತ್ತು ಬಿಜೆಪಿಯ ಹಿಡಿತ ಪುತ್ತೂರಿನಲ್ಲಿ ಬಲವಾಗಿದೆ. ಒಂದು ವೇಳೆ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಗೆ ನಿಂತರೂ ಕೂಡಾ ಅವರು ಗೆಲ್ಲುವುದು ಬಿಡಿ, ಗೆಲುವಿನ ಸನಿಹಕ್ಕೂ ತಲುಪುವುದು ಅಸಾಧ್ಯ.ಆ ಕ್ಷೇತ್ರವನ್ನು ಬಿಜೆಪಿ ಕೈಯಿಂದ ಜಗ್ಗಿಕೊಳ್ಳುವ ಶಕ್ತಿ ಈಗ ಯಾರಿಗೂ ಇಲ್ಲ.
ಒಂದಂತೂ ನಿಜ, ಅಶೋಕ್ ಕುಮಾರ್ ರೈ ಅವರು ಬಿಜೆಪಿಯಿಂದ ಹೊರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸೇರುವುದು ಕೂಡ ಖಚಿತ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ನಿಂದ ಅವರಿಗೆ ಟಿಕೆಟ್ ಲಭಿಸುವುದು ಬಹು ದುರ್ಲಭ. ಓರ್ವ ಯಶಸ್ವಿ ಉದ್ಯಮಿ ರಾಜಕೀಯ ನೆಲೆ ಕಂಡುಕೊಳ್ಳಲು ತಿಣುಕಾಡುತ್ತಿದ್ದಾರೆ. ಉದ್ಯಮ ನಡೆಸುವುದು ಬೇರೆ, ಮನೆಮನೆ ಸುತ್ತಿ ಜನ ಸಂಪರ್ಕ ಸಾಧಿಸಿ ರಾಜಕೀಯ ನಡೆಸುವುದು ಬೇರೆ ಎನ್ನುವುದು ಬಹುಶಃ ಇನ್ನೂ ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಏನೇ ಆಗಲಿ, ಈ ಸಲ ಎಲೆಕ್ಷನ್ ಗೆ ನಿಲ್ಲೋದು ನಿಲ್ಲೋದೆ, ಠೇವಣಿ ಕಳೆದುಕೊಂಡರೂ ಸರಿ ಎನ್ನುವ ಹತಾಶ ಮನಸ್ಥಿತಿಯಲ್ಲಿ ಅಶೋಕ್ ರೈ ಯವರು ಇದ್ದಾರೆ.