ಕರಾವಳಿಯ ‘ ಕನ್ನಯ್ಯ ‘ ನಿಗಾಗಿ ಕಳೆದ ಆ 22 ಗಂಟೆಗಳು !!
“ಎನ್ನ ಬಾಲೇನ್ ಎಂಕ್ ಕಂತ್ ಕೊರ್ಲೆ, ದಮ್ಮಯ್ಯ” ಎಂಬ ಅಮ್ಮನ ಆರ್ತನಾದ…!
22 ಗಂಟೆಗಳಿಂದ ನಡೆದ ಸಂಪೂರ್ಣ ಚಿತ್ರಣ !
ಮಂಗಳೂರು : ಈಗಕ್ಕೆ ಪ್ರವೀಣ್ ನೆಟ್ಟಾರ್ ಮಣ್ಣಿಗೆ ಮಲಗಿ ಸರಿ ಸುಮಾರು 22 ಗಂಟೆಗಳಾಗಿವೆ. ನಿನ್ನೆ ರಾತ್ರೆ, ದಿನಾಂಕ 26.07.2022ರಂದು ರಾತ್ರಿ 8.30 ಕ್ಕೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಬಳಿ ತನ್ನ ಕೋಳಿ ಅಂಗಡಿಯ ವ್ಯವಹಾರ ಮುಗಿಸಿಕೊಂಡು, ಸಣ್ಣಗೆ ಹಣಿಯುವ ಮಳೆಯಲ್ಲಿ ನೆಂದುಕೊಂಡು ತನ್ನ ಗಾಡಿಯತ್ತ ನಡೆದಿದ್ದರು ಪ್ರವೀಣ್. ಸಣ್ಣ ಮಳೆಯಲ್ಲಿ ಮನೆಸೇರುವ ತವಕ ಅವರದು. ಆದರೆ ವಿಧಿ ದುಷ್ಕರ್ಮಿಗಳ ರೂಪದಲ್ಲಿ ಕಾಯುತ್ತಾ ಕೂತಿತ್ತು. ಏನೂ ಅತಿರೇಕಕ್ಕೆ ಹೋಗಿ ರಾಜಕೀಯ ಮಾಡದ, ಸ್ವಾಮ್ಯ ಬಿಜೆಪಿ ಯುವ ನಾಯಕನಿಗೆ ಸಾವು ಜತೆಯಾಗಲು ಹೊಂಚಿ ಕೂತಿತ್ತು. ಪ್ರವೀಣ್ ನೆಟ್ಟಾರ್ ನ ಅಂಗಡಿಯ ಜತೆಗಾರ, ಅಂಗಡಿಯ ಒಳಗೆ ರೈನ್ ಕೋರ್ಟ್ ತರಲೆಂದು ಹೋದ ಸಮಯ ಅಂಗಡಿಯ ಹೊರಗೆ ಜೋರಾಗಿ ಬೊಬ್ಬೆ ಕೇಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ನೆಟ್ಟಾರುರವರು ಸ್ಕೂಟರ್ ನಿಂತಿದ್ದ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಕವಚಿ ಬಿದ್ದಿದ್ದು, ಅಷ್ಟರಲ್ಲಿ ಕೂಗಾಟ ಬೊಬ್ಬೆ ಹಾಹಾಕಾರ ಕೇಳಿಬಂದಿತ್ತು.
ಆಗ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಹತ್ಯಾರುಗಳನ್ನು ಹಿಡಿದುಕೊಂಡು ಮೋಟಾರು ಸೈಕಲ್ಲಿನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ. ದ್ವಿಚಕ್ರವಾಹನದಲ್ಲಿ ಬಂದ ಮೂವರು, ಇನ್ನೇನು ತನ್ನ ಗಾಡಿ ಹತ್ತಬೇಕೆಂದುಕೊಂಡಾಗ ಮಚ್ಚು ಜ್ಹಳಪಿಸಿದ್ದರು. ಅನೂಹ್ಯವಾಗಿ ತಲೆಯನ್ನೇ ಗುರಿಯಾಗಿಸಿಕೊಂಡು ಬಂಡ ತಳವಾರ್ ಗಳು ಅರ್ಧ ಮುಖ್ಯ ಜೀವವನ್ನು ಸ್ಥಳದಲ್ಲೇ ಕೊಡಿಯಾಗಿ ಹರಿದ ರಕ್ತದ ಜತೆ ಬಸಿದು ಹಾಕಿದ್ದವು. ಇದೆಲ್ಲ ಆಗಿ ಈಗ ಸುಮಾರು 20 ಗಂಟೆಗಳಾಗಿವೆ. ಆಸ್ಪತ್ರೆಯ ದಾರಿಮಧ್ಯದಲ್ಲೇ ಪ್ರವೀಣ್ ಉಸಿರು ನಿಲ್ಲಿಸಿ ಮಲಗಿದ್ದರು. ಆದರೆ, ಹೇಗಾದರೂ ಗೆಳೆಯನೇ ಜೀವ ಉಳಿಸಬೇಕೆಂದುಕೊಂಡ ಹುಡುಗರು ಮತ್ತು ಜತೆಗಾರ ಆಸೆ ಇಟ್ಟುಕೊಂಡು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆತಂದಿದ್ದರು. ‘ ಇಟ್ ವಾಸ್ ಟೂ ಲೇಟ್ ‘ ಅನ್ನುವುದು ತಪ್ಪಾದೀತು. ಕಾರಣ, ಹೊಡೆದ ಜಾಗ, ಬಿದ್ದ ಏಟು ಮಾರಣಾಂತಿಕವಾಗಿತ್ತು. ಬಂದದ್ದು ಲೇಟಾಗಿರಲಿಲ್ಲ, ಘಟನೆ ನಡೆದ ತಕ್ಷಣ ಧಾವಿಸಿ ಬಂದಿದ್ದರು. ಪ್ರವೀಣ್ ಎಂಬ ಸಜ್ಜನ ಯುವ ನಾಯಕ ಮರಳಿ ಬಾರಲಾರದ ಜಾಗಕ್ಕೆ ಪ್ರಯಾಣ ಬೆಳೆಸಿದ್ದರು.
ಇವತ್ತು ಪ್ರವೀಣ್ ಅವರ ಮನೆಯಲ್ಲಿ ದೊಡ್ಡ ಜಂಗುಳಿ. ಆತಂಕದ ಆಕ್ರೋಶದ ಜನ ಲಕ್ಷೋಪಲಕ್ಷವಾಸಿಯಾಗಿ ಭೇಟಿ ಆಗುತ್ತಿದ್ದಾರೆ. ಯಾರು ಬಂದರು, ಯಾರು ಹೋದರು ಅನ್ನುವುದೂ ಗಮನಕ್ಕೆ ಬರದಂತೆ ಇಡೀ ಕುಟುಂಬ ಸ್ತಬ್ದವಾಗಿದೆ. ಕುಟುಂಬದ ಸದಸ್ಯರಲ್ಲಿ ದುಃಖ ಮಡುಗಟ್ಟಿದೆ. ಮೂರು ವರ್ಷಗಳ ಹಿಂದಷ್ಟೇ ಪ್ರವೀಣ್ ನೆಟ್ಟಾರ್ ಮತ್ತು ನೂತನಾ ಅವರ ಮದುವೆಯಾಗಿತ್ತು. ಸಂಬಂಧಿಕರು ಮತ್ತು ಹಿತೈಷಿಗಳು ನೂತನಾ ಅವರನ್ನು ಸಂತೈಸಲು ಯತ್ನಿಸುತ್ತಿದ್ದಾರೆ. ಆದರೆ ಇದು ಸಂತೈಸಲು ಸಾಧ್ಯವಾಗುವ ನೋವಲ್ಲ, ಯಾಕೆ ಗೊತ್ತೇ ?
ಯಾರೋ ಒಬ್ಬ ಕ್ರಿಮಿನಲ್ ಚಟುವಟಿಕೆಯಲ್ಲಿ, ಇಂತಹುದೇ ಚಟುವಟಿಕೆಯಲ್ಲಿ ಕೊಲೆಯಾಗಿ ಹೋಗುವುದು ಬೇರೆ, ಏನೂ ಅರಿಯದೆ, ಯಾರದ್ದೋ ದ್ವೇಷಕ್ಕೆ, ಇನ್ಯಾರದೋ ಜೀವವನ್ನು ತಲೆದಂಡವಾಗಿ ಕೊಡುವುದು ಬೇರೆ. ಅದೇ ಕಾರಣಕ್ಕಾಗಿ ಇವತ್ತು ಕಂಡಿದೆ ಈ ಪರದ ಆಕ್ರೋಶ. ಎಲ್ಲೆಲ್ಲೂ ಉದ್ವೇಗದ ಸ್ಥಿತಿ. ಇಂತಹಾ ಪರಿಸ್ಥಿತಿ ಕೆಲ ವಾರಗಳ ಹಿಂದೆ ದೇಶದಲ್ಲಿ ನಡೆದಿತ್ತು. ತನ್ನಪಾಡಿಗೆ ತಾನು ಟೈಲರಿಂಗ್ ವೃತ್ತಿ ಮಾಡಿ ಬದುಕುತ್ತಿದ್ದ ಅಮಾಯಕ ಸಾದಾ ಸೀದಾ ಕನ್ನಯ್ಯ ಲಾಲ್ ಅನ್ನು ಅವತ್ತು ತಲೆ ಕಡಿದು ಹೋಗಿದ್ದರು ಧರ್ಮದ ಅಮಲು ತಲೆಯ ತುಂಬಾ ತುಂಬಿಕೊಂಡ ಹಂತಕರು. ಇವತ್ತು ಇದು ಕರಾವಳಿಯಲ್ಲಿ ಮರುಕಳಿಸಿದೆ. ಪ್ರವೀಣ್ ನೆಟ್ಟಾರ್ ನ ತಲೆಗೇ ಅಟ್ಯಾಕ್ ಮಾಡಿದ್ದಾರೆ ದುಷ್ಕರ್ಮಿಗಳು. ಮತ್ತೊಂದು ನರಮೇಧ ಹೀಗೆ ನಡೆದು ಹೋಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ‘ ಬಿ ಹೆಡಿಂಗ್ ‘ ಅಂದರೆ ತಲೆ ಕಡಿಯುವ ಉದ್ದೇಶ ಇದ್ದವರಂತೆ ಕಾಣಿಸುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಕನ್ನಯ್ಯ ಕೂಡ ಅಮಾಯಕ. ಪ್ರವೀಣ್ ಕೂಡಾ. ಹಾಗಾಗಿ ಈ ಘಟನೆಯನ್ನು ನಾವು ‘ ಕನ್ನಯ್ಯಾ ಲಾಲ್ ‘ ಜತೆ ಹೋಲಿಸಿಕೊಳ್ಳುತ್ತಿರುವುದು. ಕರಾವಳಿಯ ‘ಕನ್ನಯ್ಯಾ ಲಾಲ್ ‘ ಹತ್ಯೆ ಈಗ ನಡೆದು ಹೋಗಿದೆ.
ನನ್ನ ಪತಿಯನ್ನು ಕೊಂದದ್ದು ಯಾರೆಂದು ನನಗೆ 24 ಗಂಟೆಗಳಲ್ಲಿ ಗೊತ್ತಾಗಬೇಕು ಎಂದ ಪತ್ನಿ ನೂತನಾ !
” ನನ್ನ ಗಂಡ ಸಮಾಜಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ವೈದ್ಯರಿಗೂ ನನ್ನ ಗಂಡನನ್ನು ಉಳಿಸಲು ಆಗಲಿಲ್ಲ ” ಎಂದು ದುಷ್ಕರ್ಮಿಗಳಿಂದ ಕೊಲೆಯಾದ ಬೆಳ್ಳಾರೆಯ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ ಪತ್ನಿ ಆ ನೋವಿನಲ್ಲೂ ತಾಳ್ಮೆ ಪ್ರದರ್ಶಿಸಿ ಮಾತಾಡಿದ್ದಾರೆ ಪ್ರವೀಣ್ ಪತ್ನಿ ನೂತನಾ.
”ಎಷ್ಟೊತ್ತಿಗೆ ಯಾರು ಕರೆದರೂ ಹೋಗುತ್ತಿದ್ದರು. ನಾನು ಬೇಡ ಅಂದ್ರೂ, ಅವರ ಅಪ್ಪ ಅಮ್ಮ ಬೇಡ ಅಂದ್ರೂ ಕೇಳುತ್ತಿರಲಿಲ್ಲ. ಇವತ್ತು ಅವರನ್ನು ಕಳೆದುಕೊಂಡಿದ್ದೇನೆ. ನನಗೆ ಅವರನ್ನು ಕೊಡುವವರು ಯಾರು. ಅವರು ಸಮಾಜಕ್ಕೆ ಏನೆಲ್ಲಾ ಮಾಡಿದರು ಆದರೆ ಅವರಿಗೆ ಸಮಾಜ ಏನೂ ಮಾಡಲಿಲ್ಲ. ನನ್ನ ಗಂಡನ ಜೀವ ಉಳಿಸಲು ಯಾರಿಂದಲೂ ಆಗಲಿಲ್ಲ” ಎಂದು ನೂತನಾ ಕಣ್ಣೀರಿಟ್ಟರು. ”ನನ್ನ ಗಂಡನನ್ನು ಇನ್ಯಾರೂ ವಾಪಸ್ ಕೊಡುವುದಿಲ್ಲ. ಆದರೆ ಮುಂದೆ ಯಾರಿಗೂ ಹೀಗೆ ಆಗದಂತೆ ಕ್ರಮ ಜರುಗಿಸಬೇಕು” ಎಂದು ಅವರು ಆಗ್ರಹಿಸಿದರು. ನನ್ನ ಪತಿಯನ್ನು ಕೊಂದದ್ದು ಯಾರೆಂದು ನನಗೆ 24 ಗಂಟೆಗಳಲ್ಲಿ ಗೊತ್ತಾಗಬೇಕು ಎಂದ ಪತ್ನಿ ನೂತನಾ ! ಸಹಜವಾಗಿ, ಸಚಿವ ಅಂಗಾರ ಬಂದಾಗ ಆಕೆ ಕಣ್ಣೀರಿನ ಜತೆಗೇ ದನಿ ಎತ್ತರಿಸಿ ಹೇಳಿದ್ದರು.
ಆದರೆ ಹೆತ್ತಮ್ಮನ ನೋವು ಬೇರೆಯದೇ ರೀತಿಯದು. ಪ್ರವೀಣ್ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದು “ಎನ್ನ ಬಾಲೇನ್ ಎಂಕ್ ಕಂತ್ ಕೊರ್ಲೆ ದಮ್ಮಯ್ಯ- ಎಂಕಲೇಗ್ ನ್ಯಾಯ ಇಜ್ಜಾಂಡೆ..!!” ನನ್ನ ಮಗನನ್ನು ತಂದು ಕೊಡಿ- ನನ್ನ ಮಗನ ಜೀವ ತಂದು ಕೊಡಿ, ನಮಗೆ ನ್ಯಾಯ ಇಲ್ಲದೆ ಹೋಯಿತೆ ? ಎಂದು ಬಿಕ್ಕಿ ಅಳುತ್ತಿರುವ ದೃಶ್ಯ ಮನಕರಗುವಂತೆ ಮಾಡಿತ್ತು.
ಮೃತ ಪ್ರವೀಣ್ ನೆಟ್ಟಾರು ಅವರು ಇತರ ಧರ್ಮದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಇತ್ತೀಚೆಗೆ ತಮ್ಮ ಮಿತ್ರ ಆರಿಫ್ ನೊಂದಿಗೆ ಫೋಟೋಗೆ ತೆಗೆಸಿಕೊಂಡು ಅದನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ್ದರು. ಅದಕ್ಕೆ ಈ ಫೋಟೋ ನೋ ಸಾಕ್ಷಿ. ಎಲ್ಲಾ ಧರ್ಮಗಳೊಂದಿಗೆ ಸೌಹಾರ್ದತೆಯಿಂದ ಇದ್ದ ವ್ಯಕ್ತಿಯ ಈ ದುರ್ಮರಣಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತದೆ.
ಮುಗ್ಧಪ್ರಾಣಿಗಳ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಪ್ರವೀಣ್ ನೆಟ್ಟಾರ್ : ಬೀದಿ ನಾಯಿಮರಿಗಳ ನೋವಿಗೂ ಮರುಗಿತ್ತು ಜೀವ !
ದುಷ್ಕರ್ಮಿಗಳಿಂದ ಕೊಲೆಯಾದ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ನಾಯಕ ಪ್ರವೀಣ್ ಸ್ವಭಾವತಃ ಮೃದುಹೃದಯಿಯಾಗಿದ್ದರು ಎಂದು ಅವರ ಒಡನಾಡಿಗಳು ನೆನಪಿಸಿಕೊಂಡಿದ್ದಾರೆ. ಪ್ರಾಣಿಗಳ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಅವರು, ಹಲವು ಮೂಕ ಪ್ರಾಣಿಗಳಿಗೆ ಕಾಯಕಲ್ಪ ಕಲ್ಪಿಸಿದ್ದರು. ಪ್ರವೀಣ್ ಅವರು ಜುಲೈ 4ರಂದು ಹಾಕಿಕೊಂಡಿದ್ದ ಫೇಸ್‌ಬುಕ್ ಪೋಸ್ಟ್ ಒಂದು ಇದೀಗ ವೈರಲ್ ಆಗುತ್ತಿದೆ. 127 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿಕೊಂಡಿರುವ ಈ ಪೋಸ್ಟ್‌ಗೆ 560ಕ್ಕೂ ಹೆಚ್ಚು ಲೈಕ್ ಮತ್ತು 92 ಕಾಮೆಂಟ್ ಸಿಕ್ಕಿದೆ. ಪ್ರಾಣಿಗಳ ಕಷ್ಟ, ಬುದ್ಧಿವಂತಿಕೆ, ರಕ್ಷಣೆ ಬಿಂಬಿಸುವ ಹಲವು ವಿಡಿಯೊ ಮತ್ತು ಫೋಟೊಗಳನ್ನೂ ಪ್ರವೀಣ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
” ರಸ್ತೆಬದಿ ಅಸಹಾಯಕತೆಯಿಂದ ಮೊರೆಯಿಡುತ್ತಿದ್ದ ಪುಟ್ಟಮರಿಗಳು ನನ್ನ ಮಿತ್ರನ ಮನೆಯಲ್ಲಿ ಸುರಕ್ಷಿತವಾಗಿದೆ. ಬದುಕಿಸಿದ್ದೇವೆ ಎಂಬ ಹೆಮ್ಮೆ ನಮ್ಮದು” ಎಂದು ಪ್ರವೀಣ್ ಬರೆದುಕೊಂಡಿದ್ದರು. ‘ನಿನ್ನೆ ರಾತ್ರಿ ನಾನು ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಕೋಟೆಮುಂಡುಗಾರುಗೆ ಹೋಗುತ್ತಿದ್ದೆ. ಜೋರು ಗಾಳಿ ಮಳೆಗೆ ಕಳಂಜ ಕ್ರಾಸ್ ರಸ್ತೆ ಬದಿಯಲ್ಲಿ ಕಂಡು ಬಂದ ದೃಶ್ಯ ಇದು. ಗಾಳಿ ಮಳೆಗೆ ಕಂಗಾಲಾಗಿದ್ದ ಈ ಜೀವಗಳು ಬೈಕಿನ ಲೈಟು (ಬೆಳಕು) ನೋಡಿ ಹತ್ತಿರ ಬಂದು ರಕ್ಷಣೆಗಾಗಿ ಅದರದ್ದೇ ಭಾಷೆಯಲ್ಲಿ ಕಾಡಿಬೇಡಿಕೊಂಡ ದೃಶ್ಯ ಎಂತಹ ಕಲ್ಲುಹೃದಯವನ್ನು ಕೂಡ ಕರಗಿಸುವ ಹಾಗಿತ್ತು.
‘ಈ ಮೂಕ ಮುಗ್ಧ ಪ್ರಾಣಿಗಳನ್ನು ಇಂತಹ ಜೋರು ಗಾಳಿ ಮಳೆಯ ಸಂಧರ್ಭ ಜನರಹಿತವಾದ ರಸ್ತೆಯಲ್ಲಿ ಬಿಟ್ಟುಹೋಗುವಂತಹ ದಯೆ, ಕನಿಕರ ಇಲ್ಲದ ಹೀನಾಯ ಮನಸ್ಥಿತಿಯ ಆ ಕೊಳಕು ಹೊಲಸು ಜೀವಿಗಳು ಮುಂದೊಂದು ದಿನ ಖಂಡಿತವಾಗಿಯೂ ನರಕ ಯಾತನೆ ಅನುಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಬಿಡಲೇಬೇಕಂತಿದ್ದರೆ ಆ ಪುಟ್ಟ ಮರಿಗಳ ಜೊತೆಗೆ ಅದರ ತಾಯಿಯನ್ನು ಕೂಡ ರಸ್ತೆಬದಿಯಲ್ಲಿ ಜೊತೆಗೆ ಬಿಡಿ, ಅವು ಹೇಗಾದರೂ ಬದುಕಿಕೊಳ್ಳುತ್ತವೆ. ಈಗ ಆ ಪುಟ್ಟಮರಿಗಳು ನನ್ನ ಮಿತ್ರನ ಮನೆಯಲ್ಲಿ ಸುರಕ್ಷಿತವಾಗಿದೆ. ಬದುಕಿಸಿದ್ದೇವೆ ಎಂಬ ಜಂಬ, ಹೆಮ್ಮೆ ನಮ್ಮದು’ ಎಂದು ಪ್ರವೀಣ್ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹಲವರು, ತಮ್ಮ ಬದುಕಿನಲ್ಲಿ ಎದುರಾದ ಇಂಥದ್ದೇ ಸಂದರ್ಭಗಳನ್ನು ನೆನಪಿಸಿಕೊಂಡಿದ್ದರು. ಹರಿಣಿ ಉದಯ್ ಎನ್ನುವವರು ತಾವು 12 ಮರಿಗಳನ್ನು ರಕ್ಷಿಸಿದ್ದು ನೆನಪಿಸಿಕೊಂಡಿದ್ದರೆ, ಸುಧೀರ್ ಕುಮಾರ್ ಎನ್ನುವವರು ಇನ್ನೂ ಭೀಕರ ಘಟನೆಯೊಂದನ್ನು ಬರೆದಿದ್ದರು. ‘ತಾಯಿಗೆ ಯಾರೋ ಅನ್ನದ ಜೊತೆ ಗ್ಲಾಸ್ ತುಂಡುಗಳನ್ನು ಹಾಕಿ ಸಾಯಿಸಲು ಪ್ರಯತ್ನಿಸಿದ್ದರು. ಕುತ್ತಿಗೆಯ ಭಾಗ ಸಂಪೂರ್ಣ ಕೊಳೆತು ಹೋಗಿ ಸತ್ತು ಹೋಯಿತು. ಅದರ ಮರಿಯನ್ನು ಈಗಲೂ ಮನೆಯಲ್ಲಿ ಸಾಕುತ್ತಿದ್ದೇವೆ’ ಎಂದು ಅವರು ಹೇಳಿದ್ದರು. ‘ಜೀವಪರ ಕಾಳಜಿಗೆ ಅಭಿನಂದನೆಗಳು’ ಎಂದು ಹಲವರು ಪ್ರವೀಣ್ ಅವರನ್ನು ಅಭಿನಂದಿಸಿದ್ದರು. ಈಗ ರಸ್ತೆಯ ಬದಿಯ ಬೀದಿನಾಯಿಯ ಜೀವಕ್ಕೂ ಮರುಗುತ್ತಿದ್ದ ಹುಡುಗ ನಿರ್ಜೀವವಾಗಿ, ಇದೀಗ ತಾನೇ ಆತ ಪಂಚಭೂತಗಳಲ್ಲಿ ಲೀನನಾಗಿಹೋಗಿದ್ದಾನೆ.
ಅದಕ್ಕೂ ಮೊದಲು, ನಿನ್ನೆ ರಾತ್ರಿಯಿಂದ ಇವತ್ತಿನತನಕ ಏನೇನು ಆಯಿತು ಎಂದು ನೋಡಿದರೆ :
26/07/2022:
ನಿನ್ನೆ ರಾತ್ರೆ 8.30 ಹಂತಕರ ಅಟ್ಯಾಕ್
ಸುಮಾರು 9ರ ಸುಮಾರಿಗೆ ಸಾವಿನ ಸುದ್ದಿ
ರಾತ್ರಿ 9.30ರಿಂದ ಪುತ್ತೂರಿನಲ್ಲಿ ಬಿಗುವಿನ ವಾತಾವರಣ, ಪ್ರತಿಭಟನೆ
ಸೆಕ್ಷನ್ 144 ಘೋಷಣೆ
ಜಿಲ್ಲಾಧಿಕಾರಿ ಬರಲು ಆಗ್ರಹ
27/07/2022:
ರಾತ್ರಿ 1.20 ಕ್ಕೆ ಡಿಸಿ ಆಗಮನ, ಪ್ರತಿಭಟನೆ ಹಿಂಪಡೆದ ಜನ
ಬೆಳಿಗ್ಗೆ 9 ಗಂಟೆಗೆ ಮೃತಶರೀರ ಹಸ್ತಾಂತರ,10 ಗಂಟೆಗೆ ಮೆರವಣಿಗೆ ಆರಂಭ, ಸಾಗರೋಪಾದಿಯಲ್ಲಿ ಹರಿದು ಬಂದ ಜನ
5 ಜನ ಶಂಕಿತರ ಬಂಧನ
ಮಧ್ಯಾಹ್ನ 1 ಗಂಟೆಗೆ ಬೆಳ್ಳಾರೆ ಮೃತದೇಹ ಆಗಮನ,ಅಂತಿಮ ನಮನ
3 ಗಂಟೆಗೆ ನೆಟ್ಟಾರಿನಲ್ಲಿ ನೂತನ ಮನೆಗಾಗಿ ಸಮತಟ್ಟು ಮಾಡಿದ ಜಾಗದಲ್ಲಿ ಅಂತ್ಯ ಸಂಸ್ಕಾರ
ಮಧ್ಯಾಹ್ನ ತಡವಾಗಿ ಬಂದ ಶಾಸಕರು, ಮಂತ್ರಿಗಳು ಮತ್ತು ಸಂಸದರು, ಕಾರು ಅಡ್ಡಗಟ್ಟಿದ ಜನ ಸಂಸದರ ಕಾರು ಪಂಚರ್
ಜನರನ್ನು ನಿಯಂತ್ರಿಸಲು ಸಣ್ಣದಾಗಿ ಲಾಠಿ ಚಾರ್ಜ್ ಮೆರವಣಿಗೆ ,ಸಂಸ್ಕಾರ
ಸಂಘಪರಿವಾರದಿಂದ 50 ಲಕ್ಷ ಘೋಷಣೆ
ಬಿಜೆಪಿಗೆ ಒಂದೊಂದೇ ಬೀಳುತ್ತಿರುವ ರಾಜೀನಾಮೆ
ಈಗ ಇಂತಹಾ ಅಮಾಯಕನ ವಿನಾ ಸಾವಾಗಿದೆ. ಅದೇ ಕಾರಣಕ್ಕಾಗಿ ಇಡೀ ಸಮಾಜ ಆತನಿಗಾಗಿ ಮಿಡಿದು ರಸ್ತೆಗೆ ಬಂದು ನಿಂತಿದೆ. ತನ್ನ ಕೈಲಾದ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರವೀಣ್ ಮಾತ್ರ ಅಲ್ಲ, ಮೊನ್ನೆ ಕಳಂಜದಲ್ಲಿ ಕ್ಷುಲ್ಲಕ ವಿಚಾರಕ್ಕೆ ಹತ್ಯೆಗೀಡಾದ ಅಮಾಯಕ ಮಸೂದ್ ಅವರದ್ದು ಕೂಡಾ ಸಾವು ಸಾವೇ. ಎಲ್ಲ ಸಾವುಗಳೂ ನೋವಿನಲ್ಲೇ ಮುಕ್ತಾಯ. ಏನೂ ತಪ್ಪಿಲ್ಲದೆ, ಯಾರದ್ದೋ ದ್ವೇಷಕ್ಕೆ, ಇನ್ಯಾರದ್ದೋ ಸಾವಾದಾಗ ಆಗುವ ನೋವು ಜಾಸ್ತಿ. ಅದು ಇವತ್ತು ವ್ಯಕ್ತವಾಗುತ್ತಿದೆ. ಕರಾವಳಿಯ ಕನ್ನಯ್ಯನಿಗಾಗಿ ಕರುನಾಡು ಮರುಗಿದೆ. ಹಂತಕರ ಶೀಘ್ರ ಶಿಕ್ಷೆಗಾಗಿ ಮತ್ತು ಮುಂದೆಂದೂ ಇಂತಹಾ ಹತ್ಯೆ ನಡೆಯಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಕೂಗು ಎದ್ದಿದೆ. ಕೊನೆಯಲ್ಲಿ ಉಳಿಯುವುದು ಮಾತ್ರ ನೋವು ಅದು ನಿರಂತರ !!