ವಯಸ್ಕರು ಮದುವೆಯಾಗಲು ಕುಟುಂಬ, ಜಾತಿ ಸಮುದಾಯದ ಒಪ್ಪಿಗೆ ಅವಶ್ಯವಿಲ್ಲ !! | ಹೈಕೋರ್ಟ್ ನಿಂದ ಮಹತ್ವದ ತೀರ್ಪು
ಇಬ್ಬರು ವಯಸ್ಕರು ಪರಸ್ಪರ ಒಮ್ಮತದಿಂದ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಕುಟುಂಬ ಹಾಗೂ ಜಾತಿ ಸಮುದಾಯದ ಒಪ್ಪಿಗೆ ಅವಶ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.
ಇಬ್ಬರು ವಯಸ್ಕರು ವಿವಾಹವಾಗಲು ನಿರ್ಧರಿಸಿದ ಮೇಲೆ ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಒಪ್ಪಿಗೆಯನ್ನು ಮಾತ್ರ ಪ್ರಾಥಮಿಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎಂ.ಎ.ಚೌಧರಿ ಅವರಿದ್ದ ಏಕ ಸದಸ್ಯ ಪೀಠ ಹೇಳಿದೆ.
ಇಬ್ಬರು ವಯಸ್ಕರು ಒಮ್ಮತದಿಂದ ಒಬ್ಬರನ್ನೊಬ್ಬರು ಜೀವನ ಸಂಗಾತಿಗಳನ್ನಾಗಿ ಮಾಡಿಕೊಳ್ಳುವ ಆಯ್ಕೆಯು ಸಾಕಾರವಾಗಿದ್ದು, ಇದು ಭಾರತ ಸಂವಿಧಾನದ 19 ಮತ್ತು 21ನೇ ವಿಧಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ. ಅದನ್ನು ಒಮ್ಮೆ ಗುರುತಿಸಿದ ಮೇಲೆ ಆ ಹಕ್ಕನ್ನು ರಕ್ಷಿಸುವ ಅಗತ್ಯವಿದೆ. ಅದು ಜಾತಿ ಗೌರವ ಅಥವಾ ಸಮೂಹ ಚಿಂತನೆಯ ಪರಿಕಲ್ಪನೆಗೆ ತುತ್ತಾಗುವಂತಿಲ್ಲ. ಇಬ್ಬರು ವಯಸ್ಕರು ಮದುವೆಯಾಗಲು ಒಪ್ಪಿಕೊಂಡ ನಂತರ ಕುಟುಂಬ, ಸಮುದಾಯ ಇಲ್ಲವೇ ಕುಲದ ಒಪ್ಪಿಗೆ ಅಗತ್ಯವಿಲ್ಲ ಹಾಗೂ ಅವರ ಸಮ್ಮತಿಗೆ ಧರ್ಮನಿಷ್ಠೆಯಿಂದ ಪ್ರಾಧಾನ್ಯತೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಂ ಸಂಪ್ರದಾಯದಂತೆ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಹುಡುಗಿ ಮತ್ತು ಹುಡುಗ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ತಮ್ಮ ಕುಟುಂಬ ಸದಸ್ಯರು ಹಲ್ಲೆ ನಡೆಸಬಹುದು ಎಂದು ಆತಂಕಗೊಂಡು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.