ದ್ವಿದಳ-ಧಾನ್ಯಗಳಲ್ಲಿ ಬೇಗನೇ ಹುಳಗಳಾಗುವುದರಿಂದ ಚಿಂತಿತರಾಗಿದ್ದೀರಾ !?? | ಹಾಗಾದರೆ ಈ ಮನೆ ಮೂಲಿಕೆಗಳನ್ನು ಬಳಸಿ ಬೇಳೆಕಾಳುಗಳನ್ನು ಸುರಕ್ಷಿತವಾಗಿರಿಸಿ
ನಮ್ಮ ದೇಶದಲ್ಲಿ ಅನೇಕ ಬಗೆಯ ಬೇಳೆಕಾಳುಗಳನ್ನು ಬೆಳೆಯಲಾಗುತ್ತದೆ. ಬೇಳೆ ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾನೆ ಉಪಕಾರಿ. ಅವುಗಳಲ್ಲಿ ಪ್ರೋಟೀನ್ ಭಾರೀ ಪ್ರಮಾಣದಲ್ಲಿ ಕಂಡು ಬರುತ್ತದೆ. ಅಷ್ಟು ಮಾತ್ರವಲ್ಲ ಅವುಗಳಲ್ಲಿ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. ಎಷ್ಟೋ ಸಲ ಅಗತ್ಯಕ್ಕಿಂತ ಜಾಸ್ತಿಯಾಗಿ ಬೇಳೆ ಕಾಳುಗಳನ್ನು ಖರೀದಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ ಹೆಚ್ಚು ಕಾಲ ಬೇಳೆ ಕಾಳುಗಳನ್ನು ಹಾಗೆಯೇ ಇಟ್ಟಾಗ ಅದರಲ್ಲಿ ಸಣ್ಣ ಸಣ್ಣ ಹುಳಗಳು ಕಂಡು ಬರುತ್ತವೆ.
ಬೇಳೆ ಕಾಳುಗಳಲ್ಲಿ ಆಗುವ ಹುಳಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮನೆಯಲ್ಲಿಯೇ ಸಿಗುವ ಈ ವಸ್ತುಗಳನ್ನು ಬಳಸಿಕೊಂಡು, ಬೇಳೆಯಲ್ಲಿ ಹುಳುಗಳಾಗದಂತೆ ಅದನ್ನು ಸಂರಕ್ಷಿಸಿ ಇಡಬಹುದು. ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿದರೆ ಸಾಕು. ಹಾಗಿದ್ದರೆ, ಬೇಳೆ ಕಾಳುಗಳಲ್ಲಿ ಹುಳಗಳಾಗದಂತೆ ಬಹಳ ದಿನಗಳವರೆಗೆ ಕಾಪಾಡಲು ಏನು ಮಾಡಬೇಕು ನೋಡೋಣ.
*ಅರಿಶಿನವನ್ನು ಬಳಸುವುದರಿಂದ, ಬೇಳೆಯನ್ನು ಕೀಟಗಳಿಂದ ದೂರ ಇಡಬಹುದು. ಅಂತಹ ಬೇಳೆ ಕಾಳುಗಳನ್ನು ಇಡುವ ಡಬ್ಬದಲ್ಲಿ ಅರಶಿನದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಹಾಕಿ. ಹೀಗೆ ಮಾಡುವುದರಿಂದ ದ್ವಿದಳ ಧಾನ್ಯಗಳು ಕೀಟಗಳಿಂದ ದೂರ ಉಳಿಯುತ್ತವೆ.
*ಪಲಾವ್ ಎಲೆಗಳನ್ನು ಬಳಸಿ ಕೂಡಾ ಹುಳಗಳಾಗದಂತೆ ನೋಡಿಕೊಳ್ಳಬಹುದು. ಬೇಳೆ ಕಾಳುಗಳನ್ನು ಹಾಕಿಡುವ ಡಬ್ಬದಲ್ಲಿ ಪಲಾವ್ ಎಲೆಗಳನ್ನು ಹಾಕಿಟ್ಟರೂ ಕೂಡಾ ಬೇಳೆ ಕಾಳುಗಳಲ್ಲಿ ಹುಳಗಳಾಗದಂತೆ ನೋಡಿಕೊಳ್ಳಬಹುದು.
*ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಎಣ್ಣೆಯನ್ನು ಬೇಳೆ ಕಾಳುಗಳಲ್ಲಿ ಕೀಟಗಳಾಗದಂತೆ ತಡೆಯಲು ಕೂಡಾ ಬಳಸಲಾಗುತ್ತದೆ. ಹೌದು, ಬೇಳೆಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬೆರೆಸಿ ನಂತರ ಬೇಳೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಬೇಳೆಯನ್ನು ಡಬ್ಬದಲ್ಲಿ ಹಾಕಿಟ್ಟರೆ ಅದರಲ್ಲಿ ಹುಳಗಳಾಗದಂತೆ ತಡೆಯಬಹುದು.
*ಬೆಳ್ಳುಳ್ಳಿಯ ಬಳಕೆಯಿಂದ ಬೇಳೆಯಲ್ಲಿ ಕೀಟಗಳಾಗದಂತೆ ನೋಡಿಕೊಳ್ಳಬಹುದು. ಯಾವ ಡಬ್ಬದಲ್ಲಿ ಬೇಳೆ ಧಾನ್ಯ , ಕಾಳುಗಳನ್ನು ಹಾಕಿ ಇಡುತ್ತೇವೆಯೋ ಅದೇ ಡಬ್ಬದಲ್ಲಿ ಬೆಳ್ಳುಳ್ಳಿ ಮೊಗ್ಗುಗಳನ್ನು ಹಾಕಿಡಿ. ಬೆಳ್ಳುಳ್ಳಿಯ ಗಾಢವಾದ ಪರಿಮಳದಿಂದ ಕೀಟಗಳು ಬರುವುದಿಲ್ಲ.