ನೂರ್ ಜಹಾನ್‌ ರ ಮೇಲೆ ಸುಳ್ಳಾರೋಪದ ಪ್ರಕರಣವು ರಾಜಕೀಯ ಷಡ್ಯಂತ್ರದ ಭಾಗ : ಪಾಪ್ಯುಲರ್ ಫ್ರಂಟ್

ಮಂಗಳೂರು : ಹಿಂದು ಯುವತಿಯೊಬ್ಬಳಿಗೆ ನೆರವು ನೀಡಿ ಮಾನವೀಯತೆ ಮೆರೆದ ನೂರ್ ಜಹಾನ್ ಎಂಬವರ ಮೇಲೆ ಮತಾಂತರದ ಸುಳ್ಳಾರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.

ಗಂಡನಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದ ವಿಜಯಲಕ್ಷ್ಮೀ ಎಂಬಾಕೆ ತಾನು ಕೆಲಸಕ್ಕಿದ್ದ ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ನೂರ್ ಜಹಾನ್ ರೊಂದಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ಸಹಜವಾಗಿ ಇದಕ್ಕೆ ಸ್ಪಂದಿಸಿದ್ದ ನೂರ್ ಜಹಾನ್ ತನ್ನಿಂದಾದ ನೆರವನ್ನು ನೀಡಿದ್ದರು. ಆದರೆ ಆಕೆಯ ಗಂಡ ಡೆತ್ ನೋಟ್ ನಲ್ಲಿ ಬರೆದ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ಅವರ‌ ವಿರುದ್ಧ ವೃಥಾ ಪ್ರಕರಣ ದಾಖಲಿಸಲಾಗಿದೆ. ಇಂತಹ ಪೂರ್ವಾಗ್ರಹಪೀಡಿತ ಮತ್ತು ದುರುದ್ದೇಶಪೂರಿತ ಕ್ರಮಗಳು ಮನುಷ್ಯತ್ವದ ಪರಿಕಲ್ಪನೆಗೆ ಗಂಭೀರ ಅಪಾಯ ತಂದೊಡ್ಡಬಹುದು. ಮಹಿಳಾ ಹಕ್ಕುಗಳ ಸಂಘಟನೆಯೊಂದು ಘಟನೆಯ ಬಗ್ಗೆ ಸತ್ಯಶೋಧನೆ ನಡೆಸಿ ಇಂದು ಕಳವಳಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ. ಮಹಿಳಾ ಸಂಘಟನೆ ಪ್ರಸ್ತುತಪಡಿಸಿರುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಘಟನೆಯಲ್ಲಿ ನೂರ್ ಜಹಾನ್ ರನ್ನು ಬಲಿಪಶುವನ್ನಾಗಿ ಮಾಡಿರುವುದು ಬಹಳ ಸ್ಪಷ್ಟವಾಗುತ್ತದೆ. ಸಂಘಪರಿವಾರದ ಶಕ್ತಿಗಳು ಮತಾಂತರದ ಬಗ್ಗೆ ಹುಯಿಲೆಬ್ಬಿಸಿ ಮುಸ್ಲಿಮ್ ಮತ್ತು ಕ್ರೈಸ್ತ ಸಮಯದಾಯವನ್ನು ಗುರಿಪಡಿಸುತ್ತಿವೆ. ಇದೀಗ ಸಂಘಪರಿವಾರಪ್ರೇರಿತ ಪ್ರತಿಭಟನೆಗಳ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷ ಕಾರಲಾಗುತ್ತಿದೆ. ಮಹಿಳೆಯರು ಇಂದು ಅತಿಹೆಚ್ಚು ಗೃಹಹಿಂಸೆಗೆ ಒಳಗಾಗುತ್ತಿರುವ ಸಮುದಾಯವಾಗಿದ್ದಾರೆ. ಸಂತ್ರಸ್ತರಿಗೆ ನೆರವು ನಿರಾಕರಿಸುವುದೆಂದರೆ, ಅವರ ವಿರುದ್ಧದ ದೌರ್ಜನ್ಯಕ್ಕೆ ಕೈಜೋಡಿಸುವುದೆಂದೇ ಅರ್ಥ.

ಇತ್ತೀಚಿಗೆ ಬಹಿರಂಗವಾಗಿ ನಡೆದ ಕಾನೂನುಬಾಹಿರ ತ್ರಿಶೂಲ ದೀಕ್ಷೆಗೆ‌ ಸಂಬಂಧಿಸಿ ಪೊಲೀಸ್ ಇಲಾಖೆ ಯಾವುದೇ ಕ್ರಮಗೊಂಡಿಲ್ಲ. ಇದರ‌ ಮಧ್ಯೆಯೇ ಇಂತಹ ಒಂದು ಬೆಳವಣಿಗೆ ನಡೆದಿರುವುದು, ಸಂಘಪರಿವಾರದ ಒತ್ತಡಕ್ಕೆ ಮಣಿದು ಇಲಾಖೆ ಮುಸ್ಲಿಮರ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿದೆಯೇ ಎಂಬ ಅನುಮಾನ ಬಲವಾಗುತ್ತಿದೆ. ಪೊಲೀಸರು ಈ ಘಟನೆಯಲ್ಲಿ ಯಾವುದೇ‌ ರಾಜಕೀಯ ಒತ್ತಡಕ್ಕೆ ಮಣಿಯದೆ ತಮ್ಮ ಕರ್ತವ್ಯನಿಷ್ಠೆಯನ್ನು ತೋರ್ಪಡಿಸಬೇಕು. ಮಾನವೀಯ ನೆರವು ನೀಡಿದ ನೂರ್ ಜಹಾನ್ ಅವರಿಗೆ ನ್ಯಾಯ ಕಲ್ಪಿಸಿ ಕೂಡಲೇ ಬಿಡುಗಡೆಗೊಳಿಸಬೇಕು. ಪ್ರತಿಭಟನೆಯ ಹೆಸರಿನಲ್ಲಿ ಪ್ರಕರಣದಲ್ಲಿ ಪ್ರಭಾವ ಬೀರಲು ಮತ್ತು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡಬೇಕೆಂದು ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.

Leave A Reply

Your email address will not be published.