ಪವರ್‌ಸ್ಟಾರ್ ಪುನೀತ್ ರಾಜ್ ಹೃದಯಾಘಾತದಿಂದ ನಿಧನ | ಬಾರದ ಲೋಕಕ್ಕೆ ತೆರಳಿದ ಅಭಿಮಾನಿಗಳ ಅಪ್ಪು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ. ಬೆಳಗ್ಗಿನವರೆಗೂ ಎಂದಿನಂತೆ ಸಾಮಾನ್ಯವಾಗಿ ಇದ್ದ ಪುನೀತ್ ರಾಜಕುಮಾರ್ ಅವರಿಗೆ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ಪುನೀತ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಇಂದು ಜಿಮ್ ನಲ್ಲಿ ಕಸರತ್ತು ಮಾಡುವ ವೇಳೆಯಲ್ಲಿ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಾಗ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಅವರಿಗೆ ಇಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದರೂ, ಅವರನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನ ಯಶಸ್ಸಾಗಲಿಲ್ಲ. ಅವರು ಅಷ್ಟರಲ್ಲಾಗಲೇ ಚಿರನಿದ್ರೆಗೆ ಜಾರಿದ್ದರು. ಅಭಿಮಾನಿಗಳ ದೇವತೆ ಪ್ರೀತಿಯ ಅಪ್ಪು ಮರಣದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಕರ್ನಾಟಕ ವನ್ನು ಕಂಗಾಲು ಮಾಡಿತ್ತು. ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರು ಭೇಟಿ ನೀಡಿದ್ದಾರೆ.

ಪುನೀತ್ ಇಂದು ಬೆಳಗ್ಗೆ ಗಾಜನೂರಿಗೆ ತೆರಳುವುದಾಗಿ ಪುನೀತ್ ತಿಳಿಸಿದ್ದರು. ಅದರ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಮನೆಯಲ್ಲಿ ವರ್ಕೌಟ್ ಮುಗಿಸಿದ ಬಳಿಕ ಗಾಜನೂರಿಗೆ ಪಯಣ ಬೆಳೆಸಬೇಕಿತ್ತು. ಆದರೆ, ಅಷ್ಟರಲ್ಲೇ ಪುನೀತ್‌ಗೆ ಹೃದಯಾಘಾತವಾಗಿದ್ದು, ಇದೀಗ ಎಲ್ಲರನ್ನು ಬಿಟ್ಟು ದೂರದ ಊರಿಗೆ ಪುನೀತ್ ತೆರಳಿದ್ದು, ಇಡೀ ರಾಜ್ಯವೇ ಕಣ್ಣೀರ ಸಾಗರದಲ್ಲಿ ಮುಳುಗಿದೆ.

ಪುನೀತ್, ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ 17 ಮಾರ್ಚ್,1975 ರಂದು ಜನಿಸಿದರು. ಪೂರ್ವ ಹೆಸರು ಲೋಹಿತ್. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಆರು ತಿಂಗಳ ಮಗುವಾಗಿದ್ದಾಗಲೇ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್ಗೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ, ಧೃತಿ ಮತ್ತು ವಂದಿತಾ.

ಪುನೀತ್ 29 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ .ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ(1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು.

ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002 ಅಪ್ಪು ರಲ್ಲಿ ಅಭಿನಯಿಸಿದರು. ಅವರು ಅಭಿ (2003), ವೀರ ಕನ್ನಡಿಗ (2004), ಮೌರ್ಯ (2004), ಆಕಾಶ್ (2005), ನಮ್ಮ ಬಸವ (2005), ಅಜಯ್ (2006), ಅರಸು (2007), ಮಿಲನ (2007), ವಂಶಿ (2008), ಬಿಂದಾಸ್ (2008), ರಾಮ್ (2009), ರಾಜ್ (2009), ಜಾಕೀ (2010), ಪೃಥ್ವಿ (2010), ಹುಡುಗರು (2011), ಪರಮಾತ್ಮ (2011), ಅಣ್ಣಾ ಬಾಂಡ್ (2012), ಯಾರೇ ಕೂಗಾಡಲಿ (2012), ಪವರ್ (2014), ನಿನ್ನಿಂದಲೇ (2014), ರಣವಿಕ್ರಮ (2015), ಮೈತ್ರಿ (2015), ದೊಡ್ಮನೆ ಹುಡುಗ (2016), ಚಕ್ರವ್ಯೂಹ (2016), ರಾಜಕುಮಾರ (2017), ಅಂಜನಿಪುತ್ರ (2017), ನಟಸಾರ್ವಭೌಮ(2019) ಹಾಗೂ ಯುವರತ್ನ (2021) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಾಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.

26 ಅನಾಥಾಶ್ರಮ, 45 ಉಚಿತ ಶಾಲೆ,16 ವೃದ್ಧಾಶ್ರಮ, 19 ಗೋಶಾಲೆ,1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗು ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟ ಪುನೀತ್ ರಾಜ್ ಕುಮಾರ್ ಎಂಬುದು ಕನ್ನಡಿಗರ ಹೆಮ್ಮೆ. ಆದರೂ ಅವರ ಈ ಅಗಲಿಕೆ ಕನ್ನಡದ ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಚಿತ್ರರಂಗಲ್ಲಿ ಮುಂದುವರಿಯುತ್ತಿದ್ದಂತೆ ಅವರಲ್ಲಿ ಒಬ್ಬ ಪ್ರಬುದ್ಧ ನಟ ಮರ ರೂಪುಗೊಳ್ಳುತ್ತಿದ್ದ. ವೈಯಕ್ತಿಕವಾಗಿ ಹಲವಾರು ಸಂಘ ಸಂಸ್ಥೆಗಳಿಗೆ ಅನಾಥಾಶ್ರಮಗಳಿಗೆ ಮತ್ತು ಗೋ ರಕ್ಷಣಾ ಕೇಂದ್ರಗಳಿಗೆ ಕೈಗಿಚ್ಚಿ ಸಹಾಯಮಾಡಿದ್ದರು ಪುನೀತ್. ಈಗ ಎಲ್ಲವನ್ನೂ ಹಿಂದಕ್ಕೆ ಬಿಟ್ಟು ಮುಂದೆ ನಡೆದಿದ್ದಾರೆ.

Leave A Reply

Your email address will not be published.