Home ಬೆಂಗಳೂರು ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ಅನುಮತಿ ನೀಡಿದ ಹೈಕೋರ್ಟ್ !!...

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ಅನುಮತಿ ನೀಡಿದ ಹೈಕೋರ್ಟ್ !! | ಹಲವು ಷರತ್ತುಗಳನ್ನು ಹಾಕಿ ವಿದ್ಯಾರ್ಥಿಗೆ ಪರೀಕ್ಷೆಗೆ ಕೂರಲು ಸಮ್ಮತಿಸಿದ ಉಚ್ಛ ನ್ಯಾಯಾಲಯ

Hindu neighbor gifts plot of land

Hindu neighbour gifts land to Muslim journalist

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದ್ದು, ಹಲವು ಷರತ್ತುಗಳನ್ನು ಹಾಕಿ ಹೈಕೋರ್ಟ್ ತನ್ನ ನಿಲುವು ಪ್ರಕಟಿಸಿದೆ.

ಮಾರ್ಚ್ 15 ರಿಂದ ಪರೀಕ್ಷೆ ಬರೆಯಲು 19 ವರ್ಷದ ವಿದ್ಯಾರ್ಥಿಗೆ ರಾಜ್ಯ ಉಚ್ಛ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಪರೀಕ್ಷೆ ಬರೆಯಲು ಜಾಮೀನು ನೀಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ಮನವಿ ಆಲಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ”ಆರೋಪಿ ವಿದ್ಯಾರ್ಥಿಗೆ ಮಾ.15ರಿಂದ ಮಾ.31ರವರೆಗೆ ಬಿ.ಕಾಂ ಪದವಿಯ ಮೂರನೇ ಸೆಮಿಸ್ಟರ್‌ ಪರೀಕ್ಷೆ ನಿಗದಿಯಾಗಿದ್ದು, ಜಾಮೀನು ನೀಡುವಂತೆ ಕೋರಿದ್ದಾನೆ. ಆದರೆ, ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುತ್ತದೆಂದು ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿಯ ಭವಿಷ್ಯ ಕತ್ತಲೆಗೆ ದೂಡಲು ಸಾಧ್ಯವಿಲ್ಲ. ಆದ್ದರಿಂದ ಪರೀಕ್ಷೆ ಬರೆಯಲು ಆರೋಪಿಗೆ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ನ್ಯಾಯಪೀಠ ಹೇಳಿದೆ.

ಷರತ್ತುಗಳನ್ನು ವಿಧಿಸಿ ಪರೀಕ್ಷೆ ಬರೆಯಲು ಆರೋಪಿಗೆ ಅವಕಾಶ ಕಲ್ಪಿಸಿ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್‌, ಈ ಆದೇಶವು ಆರೋಪಿ ಮುಂದೆ ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆರೋಪಿಯನ್ನು ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಕರೆತರಬೇಕು. ಪರೀಕ್ಷೆ ಮುಗಿದ ನಂತರ ಜೈಲಿಗೆ ವಾಪಸ್‌ ಕರೆದೊಯ್ಯಬೇಕು. ಜೈಲು ಅಧಿಕಾರಿಗಳು ಆರೋಪಿ ಖರ್ಚಿನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂದು ಹೈಕೋರ್ಟ್‌ ಷರತ್ತು ವಿಧಿಸಿದೆ. ಆರೋಪಿಯ ಪೋಷಕರು ಆತನಿಗೆ ಅಗತ್ಯ ಪುಸ್ತಕಗಳನ್ನು ತಂದು ಕೊಡಲು ಅಧಿಕಾರಿಗಳು ಅನುಮತಿ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.

ಅಲ್ಲದೆ, ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಮತ್ತು ಜೈಲಿಗೆ ಹಿಂದಿರುವಾಗ ಆರೋಪಿ ಕೈಗೆ ಬೇಡಿ ಹಾಕಬಾರದು. ಆರೋಪಿಯ ಘನತೆ ಮತ್ತು ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿ ಸಮವಸ್ತ್ರ ಧರಿಸಬಾರದು. ಭದ್ರತಾ ಸಿಬ್ಬಂದಿ ನಿಯೋಜನೆಗೆ ಆಗುವ ಖರ್ಚನ್ನು ಅರ್ಜಿದಾರ ಮುಂಚಿತವಾಗಿಯೇ ಜೈಲು ಪ್ರಾಧಿಕಾರಕ್ಕೆ ಪಾವತಿಸಬೇಕು. ಪರೀಕ್ಷೆ ಮುಗಿದ ನಂತರ ಮುಂದಿನ ಪರೀಕ್ಷಾ ದಿನಾಂಕದವರೆಗೆ ಅರ್ಜಿದಾರ ಕೇಂದ್ರ ಕಾರಾಗೃಹದಲ್ಲಿಯೇ ಇರಬೇಕು ಎಂದು ನಿರ್ದೇಶನ ನೀಡಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿ 2022 ರ ಜನವರಿ 20 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.