

Puttur: ಪುತ್ತೂರು (Puttur) ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಏಳನೇ ದಿವಸದಂದು ಉಳ್ಳಾಲ್ತಿ ಅಮ್ಮನವರ ಭಂಡಾರ ಬೆಳಿಗ್ಗೆ ಸೂರ್ಯೋದಯದ ಮೊದಲು ದೀಪದ ಬಲಿ ಉತ್ಸವ, ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಗಳ ಮಾಮೂಲು ಪ್ರಕಾರ ಬರುವ ಕಿರುವಾಳು (ಭಂಡಾರ ಬರುವುದು) ದೇವರ ರಾಜಾಂಗಣದ ಪಶ್ಚಿಮ ನೈರುತ್ಯ ಜಾಗದಲ್ಲಿ ದೇವರ ಭೇಟಿ. ಒಳಾಂಗಣದಲ್ಲಿ ಭಂಡಾರ ಇರಿಸುವುದು ನಂತರ ಸೇವೆ ಸುತ್ತುಗಳೊಂದಿಗೆ ರಾಜಾಂಗಣದಲ್ಲಿ ಪಾಲಕ್ಕೆ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯುತ್ತದೆ.
ದಂಡನಾಯಕ ಉಳ್ಳಾಲ್ಲಿ ಮಲ್ಲಿಗೆ ಮಾಲೆಯ ಮೆರವಣಿಗೆಯಲ್ಲಿ ಸಾಗಿ ಬಂದು ದೇವಳದ ಹೊರಭಾಗದಲ್ಲಿ ದೇವರೊಂದಿಗಿನ ಭೇಟಿ ನಡೆಯಲಿದೆ. ಕಿರುವಾಳು ಭೇಟಿಯ ನಂತರ ಪಾಲಕಿ ಉತ್ಸವ ಕೆರೆ ಉತ್ಸವ ನಡೆಯುತ್ತದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಸ್ತಾರವಾದ ಕೆರೆಯಲ್ಲಿ ದೇವರು ಎರಡು ದೋಣಿಗಳನ್ನು ಜೋಡಿಸಿದ ತೆಪ್ಪದಲ್ಲಿ ಸಾಗಿ ತೆಪ್ಪೋತ್ಸವ ನಡೆಯುತ್ತದೆ. ಕೆರೆಯ ನಾಲ್ಕು ಮೂಲೆಗಳಲ್ಲಿ ತಂತ್ರಿಗಳು ತಂತ್ರ ತೂಗುತ್ತಾರೆ. ನಂತರ ಕೆರೆಯ ಸುತ್ತಲಿನ ಕಟ್ಟೆಗಳಲ್ಲಿ ದೇವರಿಗೆ ಪೂಜೆ ನಡೆಯುತ್ತದೆ. ನಂತರ ತಂತ್ರಿಗಳು ಕೆರೆಯ ನೀರನ್ನು ವೈಧಿಕ ಕ್ರಿಯೆಯ ಮೂಲಕ ಪವಿತ್ರಗೊಳಿಸುತ್ತಾರೆ. ಬಳಿಕ ದೇವರನ್ನು ಕೆರೆಯಲ್ಲಿನ ತೆಪ್ಪದಲ್ಲಿ ಕುಳ್ಳಿರಿಸಿ ಅಲ್ಲಿ ದೇವರಿಗೆ ಪುಂಜೆ ನಡೆಯುತ್ತದೆ. ಆಮೇಲೆ ತೆಪ್ಪದಲ್ಲಿ ದೇವರ ಪಯಣ ನಡೆಯುತ್ತದೆ. ಪರಿಚಾರಕರು ಅಂಬಿಗರಾಗಿ ತೆಪ್ಪವನ್ನು ಹುಟ್ಟುಹಾಕುತ್ತಾರೆ. ಕೆರೆ ಆಯನದ ದಿನ ಮಾತ್ರವಲ್ಲದೆ ಶಿವರಾತ್ರಿ ಲಕ್ಷದೀಪೋತ್ಸವದಂದೂ ತೆಪ್ಪೋತ್ಸವ ನಡೆಯುತ್ತದೆ. ಆದರೆ ವರ್ಷಕ್ಕೆ ಒಂದು ಬಾರಿ ಕೆರೆ ಆಯನ ದಿವಸ ತೆಪ್ಪದಲ್ಲಿ ಪೂಜೆ ನಡೆದ ಬಳಿಕ ತೆರೆಗೆ ಒಂದು ಸುತ್ತು ಬಂದು ಕೆರೆಯ ಮಧ್ಯದಲ್ಲಿರುವ ಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿ ಅಲ್ಲಿ ಕಟ್ಟೆ ಪೂಜೆ ನಡೆಯುತ್ತದೆ. ಕಟ್ಟಿ ಪೂಜೆ ನಡೆದ ಬಳಿಕ ತೆಪ್ಪೋತ್ಸವ ನಡೆಯುತ್ತದೆ. ತೆಪ್ಪದಲ್ಲಿ ದೇವರು ವಿಹರಿಸುವಾಗ ಕೆರೆಯ ಕಟ್ಟೆಯ ಹೊರಗೆ ಉತ್ಸವ ಸಂದರ್ಭದಲ್ಲಿ ಇರುವಂತೆ ಪಕ್ಕಿ ನಿಶಾನೆ ಸಹಿತ ವಾದ್ಯಘೋಷ, ಬಸವ, ಇತ್ಯಾದಿ ಹೊರಗಿನಿಂದ ಸುತ್ತು ಬರುತ್ತದೆ. ಕೆರೆ ಆಯನದ ಬಳಿಕ ದೇವರು ದೇಗುಲದ ಒಳಭಾಗಕ್ಕೆ ಬಂದು ಒಂದು ಸುತ್ತಿನ ಸಣ್ಣರಥೋತ್ಸವ (ಹೂತೇರು) ನಡೆಯುತ್ತದೆ, ನಂತರ ದೇವರು ದೇಗುಲದ ಒಳಗೆ ಹೋಗುತ್ತಾರೆ.













