

ಸುಳ್ಯ: ಇಲ್ಲಿನ ಸಂಪಾಜೆ ಕಡೆಪಾಲ ಎಂಬಲ್ಲಿ 2015ರ ಫೆ 18ರಂದು ಮರಳು ಸಾಗಾಟದ ಲಾರಿ ಹಾಗೂ ಕಾರು ನಡುವೆ ಸಂಭವಿಸಿದ್ದ ಅಪಘಾತವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಲಾರಿ ಚಾಲಕ ಹಾಗೂ ಮಾಲಕನಿಗೆ ಎರಡು ವರ್ಷ ಜೈಲು ಹಾಗೂ ದಂಡ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.
ಘಟನೆ ವಿವರ: ಮಂಗಳೂರಿನ ಅಡ್ಯಾರ್ ಬಳಿಯಿಂದ ಅಕ್ರಮವಾಗಿ ಮರಳು ತುಂಬಿಸಿಕೊಂಡು ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಅತಿವೇಗವಾಗಿ ಚಲಿಸಿಕೊಂಡು ಬಂದ ಟಿಪ್ಪರ್ ಸುಳ್ಯ ಸಮೀಪದ ಸಂಪಾಜೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಭೀಮಗುಳಿ ಕುಟುಂಬದ ಒಂದೇ ಮನೆಯ ನಾಲ್ವರು ಮೃತಪಟ್ಟಿದ್ದರು.
ಜೇಸಿಐ ಪೂರ್ವಾಧ್ಯಕ್ಷ ಅವಿನಾಶ್ ಭೀಮಗುಳಿ,ತಂದೆ ಸಾಮಾಜಿಕ ಧುರೀನ ಲಕ್ಷ್ಮಿನಾರಾಯಣ ಭೀಮಗುಳಿ ಸ್ಥಳದಲ್ಲೇ ಮೃತಪಟ್ಟಿದ್ದು,ತಾಯಿ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಹಾಗೂ ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟು ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯಕ್ಕೆ ಕಾರಣವಾಗಿತ್ತು.
ಅಪಘಾತ ಎಸಗಿದ ಚಾಲಕ ಇಸ್ಮಾಯಿಲ್ ಹಾಗೂ ಮಾಲೀಕ ಮಂಗಳೂರು ಮೂಲದ ರಫೀಕ್ ಎಂಬವರ ಮೇಲೆ ಅಂದಿನ ಎಸ್. ಐ ಚಂದ್ರಶೇಖರ್ ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು. ಅಪಘಾತ ಎಸಗಿದ ಕೂಡಲೇ ಯಾರಿಗೂ ಮಾಹಿತಿ ತಿಳಿಸದೇ ಸ್ಥಳದಿಂದ ಕಾಲ್ಕಿತ್ತಿದ್ದ ಆರೋಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಧೀಶ ಸೋಮಶೇಖರ್ ಎ.ಅವರಿದ್ದ ಪೀಠ ತಪ್ಪಿತಸ್ಥ ಚಾಲಕ ಹಾಗೂ ಮಾಲೀಕನಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಮೂರು ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.













