

ಸುಳ್ಯ : ಅವಿನಾಶ್ ಬಸ್ ನ ಮಾಲಕ ನಾರಾಯಣ ರೈ ಯವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು.
ಸುಳ್ಯದ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಇಲ್ಲದಂತಹ ಸಂದರ್ಭದಲ್ಲಿ ನಾರಾಯಣ ರೈಯವರು ಬಸ್ ಸೇವೆಯನ್ನು ಆರಂಭಿಸಿ ಗ್ರಾಮೀಣ ಭಾಗದಲ್ಲಿ ಬಸ್ ಓಡಾಡುವಂತೆ ಮಾಡಿದ್ದರು.

ಅವಿನಾಶ್ ರೈಯವರು ಅರಂಬೂರಿನ ತನ್ನ ಮನೆಯಲ್ಲಿದ್ದರು. ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದ ಹಿನ್ನಲೆಯಲ್ಲಿ ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು. ರಾತ್ರಿ 11.45 ರ ಸುಮಾರಿಗೆ ಅವರು ಅವಿನಾಶ್ ಮೋಟಾರ್ಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತನ್ನ ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ಅವರು ಇಂದು ಬೆಳಿಗ್ಗೆಯಷ್ಟೇ ಈ ಮೆಸೇಜ್ ನೋಡಿದ್ದರು. ಕೂಡಲೇ ಅವರು ಮನೆಯಲ್ಲಿದ್ದ ಯುವಕನಿಗೆ ಫೋನ್ ಮಾಡಿದಾಗ ಅವರು ಫೋನ್ ತೆಗೆದಿರಲಿಲ್ಲ. ಈ ಹಿನ್ನಲೆಯಲ್ಲಿ ಫಿಟ್ಟರ್‌ಗೆ ಕರೆ ಮಾಡಿ ತಕ್ಷಣ ಹೋಗುವಂತೆ ತಿಳಿಸಿದರು. ಕೂಡಲೇ ಅವರು ಮನೆಗೆ ಹೋಗಿ ಯುವಕನನ್ನು ಎಬ್ಬಿಸಿ ನಾರಾಯಣ ರೈಗಳ ಕೋಣೆಗೆ ಹೋಗಿ ನೋಡಿದಾಗ ಅವರು ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರು.
ಬಳಿಕ ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಲಾಯಿತು. ಮೃತದೇಹದ ಪಕ್ಕದಲ್ಲಿ ಡೆತ್‌ನೋಟ್ ಕೂಡಾ ಪತ್ತೆಯಾಗಿದ್ದು, ಅಸೌಖ್ಯದ ಹಿನ್ನಲೆಯಲ್ಲಿ ತನಗೆ ಬದುಕಲು ಕಷ್ಟವಾಗುತ್ತಿದೆ, ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ, ಹೀಗಾಗಿ ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಎಂದು ಅವರು ಅದರಲ್ಲಿ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ತನ್ನ ಮರಣದ ಕಾರಣದಿಂದ ಬಸ್‌ಗಳ ಓಡಾಟವನ್ನು ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿ ಬಸ್ ಓಡಿಸಬೇಕು ಎಂದೂ ಅದರಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.













