

ವಿಟ್ಲ:ಮದುವೆಯ ದಿನ ರಾತ್ರಿ ವಧುವಿನ ಮನೆಗೆ ಬಂದ ಮದುಮಗ ತನ್ನ ಸ್ನೇಹಿತರೊಂದಿಗೆ ಸೇರಿ ಕೊರಗಜ್ಜನ ವೇಷ ಧರಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದಲ್ಲದೇ, ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಅವಹೇಳನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯ ದಿನ ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಮದುಮಗನ ಸಹೋದರನನ್ನು ರಾತ್ರೋ ರಾತ್ರಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಿಡುಗಡೆಗೊಳಿಸಲಾಗಿದೆ.
ಪೊಲೀಸರು ಉಪ್ಪಳದ ಉಮರುಲ್ ಬಾಶಿತ್ ಸಹೋದರ ಅರ್ಷಾದ್ ನನ್ನು ಶನಿವಾರ ಮಧ್ಯಾಹ್ನ ಉಪ್ಪಳದ ಸೊಂಕಾಲಿನಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತರುತ್ತಿರುವ ಮಾಹಿತಿ ಪಡೆದ ಬಿಜೆಪಿಯ ಅಲ್ಪಸಂಖ್ಯಾತ ಮುಖಂಡ ಆಸ್ಕರ್ ಅಲಿ ಮುಡಿಪು, ಅರ್ಷಾದ್ ನ ಬಿಡುಗಡೆಗೆ ಪ್ರಯತ್ನಿಸಿದ್ದಾನೆ. ಉಳ್ಳಾಲ ಶಾಸಕ, ಮಾಜಿ ಸಚಿವ ಯು.ಟಿ ಖಾದರ್ ಗೆ ವಿಷಯ ತಿಳಿಸಿದ ಆಸ್ಕರ್, ಖಾದರ್ ಮೂಲಕ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ.
ಅಂತೂ ಬಿಜೆಪಿ-ಕಾಂಗ್ರೆಸ್ ರಾಜಕಾರಣಿಗಳ ಒತ್ತಡಕ್ಕೆ ಮಣಿದ ಪೊಲೀಸರು ವಶಕ್ಕೆ ಪಡೆದಿದ್ದ ಧರ್ಮ ನಿಂದಕನನ್ನು ರಾತ್ರೋ ರಾತ್ರಿ ಠಾಣೆಯಿಂದ ಬಿಟ್ಟುಕಳುಹಿಸಿದ್ದಾರೆ. ಒಟ್ಟಾರೆಯಾಗಿ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಗಳಿಗೆ ಯಾವುದೇ ಬೆಲೆ ಇಲ್ಲದಂತೆ, ಆರೋಪಿಯ ಬಗೆಗೆ ಮಾಹಿತಿ ಕಲೆ ಹಾಕಲು ವಶಕ್ಕೆ ಪಡೆದುಕೊಂಡ ವ್ಯಕ್ತಿಯನ್ನು ಬಿಡುಗಡೆಮಾಡುವಲ್ಲಿ ಜಿಲ್ಲೆಯ ರಾಜಕೀಯ ನಾಯಕರು ಸಹಕರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಧರ್ಮಕ್ಕೆ ಅನ್ಯಾಯವಾದಾಗ ಹಿಂದೂ ಪರವಾಗಿ ನಿಲ್ಲುತ್ತೇವೆ ಎಂದು ಹಿಂದೂಗಳ ಓಟು ಪಡೆದು ಪಟ್ಟಕ್ಕೇರಿದ ನಾಯಕರು, ಇತ್ತೀಚಿನ ದಿನಗಳಲ್ಲಿ ಧರ್ಮ ವಿರೋಧಿಗಳಿಗೆ ಸಹಕರಿಸಿ ಬೆನ್ನು ತಟ್ಟುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.













