Home ದಕ್ಷಿಣ ಕನ್ನಡ ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತದಿಂದ ಸಕಲ ಕ್ರಮ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತದಿಂದ ಸಕಲ ಕ್ರಮ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರೈತರಿಗೆ ಭರವಸೆ ನೀಡಿದರು.

ಅವರು ಮೇ.10ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರೈತರ ಅಹವಾಲುಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಗಾರು ಹತ್ತಿರವಿದೆ. ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲಾಗುವುದು, ಅಲ್ಲಿ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ, ಆದಾಗ್ಯೂ ಡಿಐಪಿ, ಯೂರಿಯಾ, ಗೊಬ್ಬರದ ಸಮಸ್ಯೆ ಕಂಡುಬಂದಲ್ಲಿ ರೈತರು ಹಾಗೂ ರೈತ ಸಂಘಟನೆಗಳು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ನೇರವಾಗಿ ಕರೆ ಮಾಡಿ ಪಡೆಯಬಹುದಾಗಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸೀತಾ ಮಾತನಾಡಿ, ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಕೂಡಲೇ ಸಂಪರ್ಕಿಬಹುದಾಗಿದೆ, ಒಂದು ಗಂಟೆಯೊಳಗೆ ರೈತರಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜದ ಪೂರೈಸಲಾಗುವುದು ಎಂದರು.

ಅದೇ ರೀತಿ ರಸಗೊಬ್ಬರ ದಾಸ್ತಾನು ಮಾಡುವ ಸಂದರ್ಭದಲ್ಲಿ ಚೀಲಕ್ಕೆ ಕೊಕ್ಕೆ ಹಾಕದಂತೆ ಎಚ್ಚರ ವಹಿಸಬೇಕು, 50 ಕೆ.ಜಿ ರಸಗೊಬ್ಬರದ ಚೀಲಕ್ಕೆ ಕಬ್ಬಿಣದ ಸಲಾಕೆಯ ಕೊಕ್ಕೆ ಹಾಕಿದ್ದಲ್ಲೀ ರಂದ್ರದಿಂದ ಗೊಬ್ಬರ ಪೋಲಾಗುವ ಸಾಧ್ಯತೆ ಇರಲಿದೆ, ಇಂತಹ ವಿಷಯಗಳಲ್ಲಿ ಕೃಷಿ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬೆಳೆ ವಿಮ ಹಾಗೂ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಚರ್ಚೆಯಲ್ಲಿ ಬೆಳೆ ವಿಮೆಗೆ ಗೊತ್ತು ಪಡಿಸಲಾದ ಬೆಳೆಗಳಿಗೆ ಬ್ಯಾಂಕ್ ಖಾತೆಗಳಿರುವ ಬ್ಯಾಂಕುಗಳೇ ಬೆಳೆ ವಿಮೆ ಮಾಡಿಕೊಡುತ್ತವೆ, ಲೋನ್ ಪಡೆಯದ ರೈತರು ಕೂಡ ನೋಟಿಫೈಡ್ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಹರಿರುತ್ತಾರೆ, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿಯವರು ಕೋರಿದರು.

ಜಿಲ್ಲೆಯ ಅಭಿವೃದ್ದಿ ಚಟುವಟಿಕೆಗಳಿಗೆ ರೈತರ ಸಹಕಾರವೂ ಅತ್ಯಗತ್ಯ. ಈ ದಿಸೆಯಲ್ಲಿ ಪವರ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ರೈತರು ನೀಡಬೇಕು, ಇಂತಹ ಸನ್ನಿವೇಶದಲ್ಲಿ ಸಂಬಂಧಿಸಿದ ರೈತರಿಗೆ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ನೀಡಲು ಶಕ್ತಿಮೀರಿ ಯತ್ನಿಸಲಾಗುವುದು, ಸುಳ್ಯದ ಮಾಡಾವಿನಲ್ಲಿ ಮುಂದಿನ ವರ್ಷದೊಳಗೆ 110 ಕೆ.ವಿ. ಕೇಂದ್ರ ನಿರ್ಮಾಣವಾಗಲಿದೆ, ರೈತರು ಸಹಕರಿಸಬೇಕು ಎಂದು ಹೇಳಿದರು.

ವಿವಿಧ ರೀತಿಯ ಬೆಳೆ ಇದ್ದರೂ ಬೆಳೆ ಸಮೀಕ್ಷೆ ವೇಳೆ ಕೇವಲ ಒಂದು ಬೆಳೆಯನ್ನು ಮಾತ್ರ ಆರ್‌ಟಿಸಿಯಲ್ಲಿ ನಮೂದಿಸಲಾಗುತ್ತಿದೆ, ಇದೂ ರೈತರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಕೃಷಿ ಇಲಾಖೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ರೈತರು ಕೋರಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ರೈತರು ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ಬೆಳೆ ಬೆಳೆದಾಗಲೂ ಆರ್‌ಟಿಸಿಯಲ್ಲಿ ಅವುಗಳನ್ನು ಸೂಕ್ತವಾಗಿ ದಾಖಲಿಸಬೇಕು, ಈ ಸಮಸ್ಯೆಯ ಬಗ್ಗೆ ಕೃಷಿ ಇಲಾಖೆ ಕೂಡಲೇ ಪರಿಹಾರ ಒದಗಿಸಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ ಬಾರಿ ರೈತರಿಂದ ಭತ್ತ ಖರೀದಿಗೆ ಬೇಡಿಕೆಯಿತ್ತು, ಅದರಂತೆ ಖರೀದಿ ಕೇಂದ್ರಗಳನ್ನು ತೆರೆಯಲಾಯಿತು, ಆದರೆ ಯಾರೂ ಕೂಡ ಬೆಂಬಲ ಬೆಲೆಗೆ ಭತ್ತ ನೀಡಲಿಲ್ಲ, ಪ್ರಸಕ್ತ ಸಾಲಿನಲ್ಲೂ ಬೆಂಬಲ ಬೆಲೆಗೆ ಭತ್ತ ಖರೀದಿಗೆ ರೈತರು ಆಸಕ್ತರಿದ್ದರೆ ತಿಳಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲೆಯ ಎಲ್ಲಾ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿಯವರು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಕಾರ್ಡ್ ಪಡೆಯಲು ಕಷ್ಟವಾದಲ್ಲೀ ಗ್ರಾಮಲೆಕ್ಕಾಧಿಕಾರಿ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಯ ನೆರವು ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಕೆಲವೊಂದು ಸಮಸ್ಯೆಗಳಿಂದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರ ಪಟ್ಟಿ ನೀಡಿದರೆ, ಅದನ್ನು ಸರಿಪಡಿಸಿಕೊಡಲಾಗುವುದು, ಈ ಬಗ್ಗೆ ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳನ್ನು ಮತ್ತಷ್ಟು ಹಮ್ಮಿಕೊಳ್ಳಲಾಗುವುದು, ಅದೇ ರೀತಿ ರೈತರು ಕೂಡ ಮಹಾತ್ಮಾ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತ್ರಿ, ಪಿಎಂ. ಕಿಸಾನ್, ವಿದ್ಯಾನಿಧಿಯೋಜನೆಗಳ ಬಗ್ಗೆ ಸಮುದಾಯದಲ್ಲಿ ಪ್ರಚಾರ ಪಡಿಸುವಂತೆ ತಿಳಿಸಿದರು.

ಕೃಷಿ ಯಂತ್ರಧಾರೆ ಕಾರ್ಯಕ್ರಮದಡಿ ಜಿಲ್ಲೆಯ ರೈತರಿಗೆ ಅಗತ್ಯವಿರುವ ಯಂತ್ರಗಳನ್ನು ಒದಗಿಸಿಕೊಡುವಲ್ಲಿ ಕೃಷಿ ಇಲಾಖೆ ಮುತುವರ್ಜಿ ವಹಿಸಬೇಕು, ರೈತ ಸಮುದಾಯದವರು ಎದುರಿಸುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಂಡು ಬನ್ನಿ, ಚರ್ಚಿಸಿ ಬಗೆಹರಿಸೋಣ, ಜಿಲ್ಲಾ ಮಟ್ಟದಲ್ಲಿ ಆದಲ್ಲೀ ಅವುಗಳನ್ನು ಕೂಡಲೇ ಪರಿಹರಿಸಕೊಡಲಾಗುವುದು, ಅದೇ ರೀತಿ ರಾಜ್ಯ ಮಟ್ಟದಲ್ಲಿ ಆಗಬೇಕಾದವುಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯಕ್, ಕೃಷಿ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ರೈತ ಮುಖಂಡರಾದ ರೂಪೇಶ್ ರೈ, ಸಂಪತ್, ಆಲ್ವಿನ್, ಧನಕೀರ್ತಿ ಬಳಿಪ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ರೈತ ಮುಖಂಡರು ಸಭೆಯಲ್ಲಿದ್ದರು.