Home ದಕ್ಷಿಣ ಕನ್ನಡ ದ.ಕ.ಜಿಲ್ಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ನಡೆಸಲು ಅವಕಾಶ-ಡಾ.ರಾಜೇಂದ್ರ ಕೆ.ವಿದ.ಕ.ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿ ಈ ರೀತಿ ಇರಲಿದೆ

ದ.ಕ.ಜಿಲ್ಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ನಡೆಸಲು ಅವಕಾಶ-ಡಾ.ರಾಜೇಂದ್ರ ಕೆ.ವಿ
ದ.ಕ.ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿ ಈ ರೀತಿ ಇರಲಿದೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದ್ದು, ಈ ಸಂದರ್ಭ ದ.ಕ. ಜಿಲ್ಲೆಯಲ್ಲಿ ಈ ವಾರದ ವೀಕೆಂಡ್‌ನಲ್ಲಿ ಹೊರಾಂಗಣದಲ್ಲಿ 200 ಜನರಿಗೆ (ಒಳಾಂಗಣ 100) ಸೀಮಿತಗೊಳಿಸಿ ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ವಾರ ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ವಾರದಿಂದ ಕರ್ಪ್ಯೂ ಮುಂದುವರಿದರೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುವುದು.

ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ ಕ್ಷೇತ್ರ ಸೇರಿದಂತೆ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳಲ್ಲಿ ವೀಕೆಂಡ್ ಕರ್ಪ್ಯೂನಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಂಬಳ, ಧರ್ಮನೇಮ, ಬ್ರಹ್ಮಕಲಶೋತ್ಸವ ಸೇರಿದಂತೆ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಕೂಡಾ ಮುಂದೂಡುವಂತೆ ಸೂಚಿಸಲಾಗಿದೆ. ನಿಗದಿತ ಸಮಯದಲ್ಲೇ ಮಾಡಬೇಕಾದ ಕೆಲವೊಂದು ಸಾಂಪ್ರದಾಯಿಕ ಕಾರ್ಯಕ್ರಮಗಳಿದ್ದಲ್ಲಿ ಅವುಗಳನ್ನು 200 ಮಂದಿಗೆ ಸೀಮಿತಗೊಳಿಸಿ ನಡೆಸಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಸೇರುವಿಕೆಯನ್ನು ನಿಯಂತ್ರಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರ ಜತೆಯಲ್ಲೇ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವೈದ್ಯಕೀಯ ಪರಿಣಿತರು, ಮಾಲ್, ಬಸ್ಸು, ಹೊಟೇಲ್- ರೆಸ್ಟೋರೆಂಟ್ ಮಾಲಕರ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ ಸಕ್ರಿಯವಾಗಿದ್ದ ಕೋವಿಡ್ ಕೇರ್ ಸೆಂಟರ್, ಕೋವಿಡ್ ಕಂಟ್ರೋಲ್ ರೂಂಗಳನ್ನು ಹಾಗೂ ಕೋವಿಡ್ ಸಂದರ್ಭ ರಚಿಸಲಾದ ಸುರಕ್ಷಾ ತಂಡಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಗಡಿ ಭಾಗಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಪಾಸಣಾ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ದಿನವೊಂದಕ್ಕೆ ಜಿಲ್ಲೆಯಲ್ಲಿ 15,000 ಕೋವಿಡ್ ತಪಾಸಣೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಹೇಳಿದರು.

ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ ಇಲ್ಲ’

ಕಳೆದ ವಾರದವರೆಗೂ ನಿಯಂತ್ರಣದಲ್ಲಿದ್ದ ಕೋವಿಡ್ ಪಾಸಿಟಿವಿಟಿ ದರ ಈ ವಾರದಲ್ಲಿ ಸ್ವಲ್ಪ ಮಟ್ಟದಲ್ಲಿ ಏರಿಕೆಯಾಗಿದ್ದರೂ, ಸೂಕ್ತ ಕ್ರಮಗಳನ್ನು ವಹಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 341 ಸಕ್ರಿಯ ಪ್ರಕರಣಗಳಿದ್ದು, 38 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಏಳು ಒಮೈಕ್ರಾನ್ ಸೋಂಕಿತರು ಮತ್ತೆ ತಪಾಸಣೆಯ ವೇಳೆ ನೆಗೆಟಿವ್ ಆಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾದಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೋವಿಡೇತರ ಚಿಕಿತ್ಸೆಯನ್ನು ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸುವ ಆಲೋಚನೆ ಇದೆ. ಆದರೆ ಸದ್ಯ ಯಾವುದೇ ರೀತಿಯ ಆತಂಕದ ಪರಿಸ್ಥಿತಿ ಇಲ್ಲ. ಆದರೆ ಕೋವಿಡ್ ನಿಯಂತ್ರಣದಲ್ಲಿ ಜನರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ವೀಕೆಂಡ್ ಕರ್ಪ್ಯೂ ಸಂದರ್ಭ ಶಾಲೆ, ಕಾಲೇಜುಗಳು ಬಂದ್ ಆಗಿರಲಿವೆ. ಆದರೆ ಪೂರ್ವನಿಗದಿತ ಪರೀಕ್ಷೆಗಳಿದ್ದಲ್ಲಿ ನಡೆಸಬಹುದಾಗಿದೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್‌ನೊಂದಿಗೆ ಪ್ರಯಾಣ ಬೆಳೆಸಬಹುದು. ದೂರದ ಊರುಗಳಿಗೆ ಹೋಗುವವರು ತಮ್ಮ ಬಸ್ಸು, ರೈಲು ಅಥವಾ ವಿಮಾನ ಯಾನದ ಟಿಕೆಟ್‌ನೊಂದಿಗೆ ವೀಕೆಂಡ್ ಕರ್ಪ್ಯೂ ಸಂದರ್ಭ ಸಂಚರಿಸಲು ಅವಕಾಶವಿದೆ. ದಿನಸಿ, ಹಾಲು, ಔಷಧಿ ಅಂಗಡಿಗಳು ವೀಕೆಂಡ್ ಕರ್ಪ್ಯೂ ಸಂದರ್ಭ ತೆರೆದಿರುತ್ತವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ವೈದ್ಯಕೀಯ ತಜ್ಞ ಡಾ. ಶಾಂತಾರಾಮ ಬಾಳಿಗ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.