Home ದಕ್ಷಿಣ ಕನ್ನಡ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗಾಗಿ ಪ್ರಾಧಿಕಾರ ರಚನೆ, ಸುತ್ತಮುತ್ತ ಬಾರ್, ವಾಣಿಜ್ಯ ಸಂಕೀರ್ಣ ಮುಂತಾದವುಗಳು ಆಗಲಿವೆಯಾ...

ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗಾಗಿ ಪ್ರಾಧಿಕಾರ ರಚನೆ, ಸುತ್ತಮುತ್ತ ಬಾರ್, ವಾಣಿಜ್ಯ ಸಂಕೀರ್ಣ ಮುಂತಾದವುಗಳು ಆಗಲಿವೆಯಾ ಬಂದ್ ?

Hindu neighbor gifts plot of land

Hindu neighbour gifts land to Muslim journalist

ಪವಿತ್ರ ತೀರ್ಥಕ್ಷೇತ್ರವಾಗಿರುವ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗಾಗಿ ಧರ್ಮಸ್ಥಳ ಪ್ರಾಧಿಕಾರ ರಚಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಧರ್ಮಸ್ಥಳದಲ್ಲಿ 14.80 ಕೋಟಿ ವೆಚ್ಚದಲ್ಲಿ ಮಾಡಲಾದ ನೇತ್ರಾವತಿ ಸ್ನಾನಘಟ್ಟ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಾ ಅವರು ಈ ಭರವಸೆ ನೀಡಿದ್ದಾರೆ.

ಜನರು ಸರ್ಕಾರದ ಕಾನೂನನ್ನು ಉಲ್ಲಂಘನೆ ಮಾಡುತ್ತಾರೆ. ಆದರೆ, ಧರ್ಮದ ನೀತಿ, ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡುವುದಿಲ್ಲ. ಧರ್ಮಸ್ಥಳವು ಕೇವಲ ಪ್ರವಾಸಿ ತಾಣವಲ್ಲ, ಪವಿತ್ರ ತೀರ್ಥಕ್ಷೇತ್ರವಾಗಿದೆ. ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಬಾರ್, ಮಾಂಸಾಹಾರಿ ಹೋಟೆಲ್, ಜೂಜು ಮೊದಲಾದವುಗಳನ್ನು ತಡೆಗಟ್ಟಿ ಕ್ಷೇತ್ರದ ಪಾವಿತ್ರ್ಯ ರಕ್ಷಣೆಗಾಗಿ ಪ್ರಾಧಿಕಾರ ರಚಿಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಹಂಪಿ ಸಂರಕ್ಷಣೆಗಾಗಿ ಹಂಪಿ ಪ್ರಾಧಿಕಾರ ರಚಿಸಿದ್ದು, ಅದೀಗ ಸುಗಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮತ್ತು ಶಾಸಕ ಹರೀಶ್ ಪೂಂಜ ಅವರಿಗೆ ಸಲಹೆ ನೀಡಿದರು.

ನೇತ್ರಾವತಿ ಸ್ನಾನಘಟ್ಟದ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗೆ 15 ಕೋಟಿ ಅನುದಾನವನ್ನು ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.
ಇಲ್ಲಿ ಕ್ರೂಜ್ ಟೂರಿಸಂ ಆರಂಭಿಸಿಸಲು ಉದ್ದೇಶಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ 82 ಹೋಂ ಸ್ಟೇಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ, 23.6 ಕೋಟಿ ವೆಚ್ಚದಲ್ಲಿ ಸೋಮೇಶ್ವರ, ಸುರತ್ಕಲ್ ಬೀಚ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಧರ್ಮಸ್ಥಳದಲ್ಲಿ ಭಕ್ತರಿಗೆ ಎಲ್ಲಾ ಮೂಲ ಸೌಕರ್ಯ ಒದಗಿಸುತ್ತಿದ್ದು, ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ. ಧರ್ಮಸ್ಥಳ ಪವಿತ್ರ ತೀರ್ಥಕ್ಷೇತ್ರವಾಗಿದ್ದು, ನೇತ್ರಾವತಿ ನದಿಯಲ್ಲಿ ಭಕ್ತರು ಸ್ನಾನ ಮಾಡಿ ದೈಹಿಕ ಕೊಳೆಯನ್ನು ಕಳೆದು, ಬಳಿಕ ದೇವಸ್ಥಾನಕ್ಕೆ ನಡೆದುಕೊಂಡು ಬಂದು ದೇವರ ದರ್ಶನ ಮಾಡಿ ಆತ್ಮಾವಲೋಕನದೊಂದಿಗೆ ಅಂತರಂಗದ ಪಾಪಕರ್ಮದ ಕೊಳೆಯನ್ನು ಕಳೆದು ಪರಿಶುದ್ಧರಾಗುತ್ತಾರೆ’ ಎಂದರು.

ತೀರ್ಥಕ್ಷೇತ್ರಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಮಾಂಸಾಹಾರಿ ಹೋಟೆಲ್‌ಗಳು, ಬಾರ್‌ಗಳನ್ನು ತೆರೆಯಲು ಸರ್ಕಾರ ಪರವಾನಗಿ ನೀಡಬಾರದು. ಈ ಬಗ್ಗೆ ಸಂಸತ್‌ನಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.

ಸಚಿವ ಆನಂದ್ ಸಿಂಗ್ ಧರ್ಮಸ್ಥಳದ ಪರಮ ಭಕ್ತರಾಗಿದ್ದು, ದೇವಸ್ಥಾನಕ್ಕೆ ಆನೆಯನ್ನು ನೀಡಿ ‘ಗಜಸೇವೆ’ಯನ್ನೂ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಹರೀಶ್ ಪೂಂಜ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ ಅಜಿಲ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯ‌ ಎಂ.ಯಶವಂತ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಜಿಲಾಧಿಕಾರಿ ಎಂ.ಆರ್. ರವಿಕುಮಾರ್, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎನ್. ಮಾಣಿಕ್ಯ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಾ ಮೋನಪ್ಪ ಗೌಡ ಈ ಸಂದರ್ಭದಲ್ಲಿ ಹಾಜರಿದ್ದರು.