Home Education ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕ್ರಮ

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕ್ರಮ

2nd PUC Exam
Image Credit: The Indian Express

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ 1 ರ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಜ.19 ರಿಂದ ಪ್ರಾರಂಭಗೊಳ್ಳಲಿರುವ ಪೂರ್ವ ಸಿದ್ಧತಾ ಪರೀಕ್ಷೆ 2 ರಲ್ಲಿ ಈ ಲೋಪ ಆಗಬಾರದೆಂದು ಶಿಕ್ಷಣ ಇಲಾಖೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.

ನೋಡಲ್‌ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಆ ಕೇಂದ್ರದ ಪ್ರಾಂಶುಪಾಲರ ಮೇಲೆ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್‌ಅಪ್‌/ ಯೂಟ್ಯೂಬ್‌/ ಇನ್‌ಸ್ಟಾಗ್ರಾಂ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಬಹಿರಂಗ, ಪ್ರಸಾರ ಮಾಡಿದಲ್ಲಿ ವಿದ್ಯಾರ್ಥಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಕಾಲೇಜುಗಳು ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಕಾರಣವಾದರೆ ಕಾಲೇಜಿನ ಅನುದಾನ ಹಿಂಪಡೆಯಲು, ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ಕೇಂದ್ರದಲ್ಲಿ ನಡೆದರೆ ಅಂಥ ಕೇಂದ್ರವನ್ನೇ ರದ್ದುಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರಶ್ನೆ ಪತ್ರಿಕೆಗಳನ್ನು ಡಿಡಿಪಿಯು ಒಂದೇ ಐಪಿ ವಿಳಾಸ ಮತ್ತು ಒಂದೇ ಗಣಕ ಯಂತ್ರದಲ್ಲಿ ಮಾತ್ರ ಡೌನ್‌ಲೋಡ್‌ ಮಾಡಬೇಕು. ಅಲ್ಲದೆ ತಮ್ಮ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣಾಲಯವನ್ನು ಡಿಡಿಪಿಯು ಮೊದಲೇ ಗುರುತಿಸಿ, ಮುದ್ರಣ ಕಾರ್ಯ ಪ್ರಾರಂಭವಾದ ನಂತರ ಖಾಸಗಿ ಮುದ್ರಣ ಚಟುವಟಿಕೆ ಮಾಡುವಂತಿಲ್ಲ. ಖಾಸಗಿ ವ್ಯಕ್ತಿಗಳು ಪ್ರವೇಶ ಮಾಡುವಂತಿಲ್ಲ. ಕೇವಲ ಸರಕಾರಿ ಪಿಯು ಕಾಲೇಜುಗಳನ್ನು ಮಾತ್ರ ನೋಡಲ್‌ ಕೇಂದ್ರ ಎಂದು ಗುರುತಿಸಿ ಆ ಕೇಂದ್ರದ ಪ್ರಾಂಶುಪಾಲರು ಮತ್ತು ಒಬ್ಬ ಉಪನ್ಯಾಸಕರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಕ ಮಾಡಿ ಜವಾಬ್ದಾರಿ ನೀಡಬೇಕು.

ನೋಡಲ್‌ ಕೇಂದ್ರದ ಕಾಲೇಜು ಕೋಡ್‌ ಅನ್ನು ವಾಟರ್‌ ಮಾರ್ಕ್‌ ಆಗಿ ಹೊಂದಿರುವ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್‌ ಮಾಡಬೇಕು. ಆ ಪ್ರಶ್ನೆ ಪತ್ರಿಕೆಗಳ ಮುದ್ರಣ, ಪ್ಯಾಕಿಂಗ್‌ ಅನ್ನು ಬದಲಾಯಿಸಲಾಗದ ಸೀಲ್‌ ಬಳಸಿ ನಿಯೋಜಿತ ಮುದ್ರಣಾಲಯದಲ್ಲೇ ಸೀಲಿಂಗ್‌ ಕಾರ್ಯ ಮುಗಿಸಬೇಕು. ಸೀಲ್‌ ಮಾಡಿರುವ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ಉಪನಿರ್ದೇಶಕರ ಕಚೇರಿಯಲ್ಲಿ ನೋಡಲ್‌ ಕೇಂದ್ರದ ಪ್ರಾಂಶುಪಾಲರು ಮತ್ತು ಪ್ರಶ್ನೆ ಪತ್ರಿಕೆ ಪಾಲಕರಿಗೆ ಹಸ್ತಾಂತರಿಸಬೇಕು. ನಂತರ ಪ್ರಶ್ನೆ ಪತ್ರಿಕೆ ಸಂಪೂರ್ಣ ಜವಾಬ್ದಾರಿ ನೋಡಲ್‌ ಕೇಂದ್ರದವರದ್ದಾಗಿರುತ್ತದೆ ಎಂದು ಸೂಚಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ 8.30 ಕ್ಕೆ ಆಯಾ ದಿನದ ಪರೀಕ್ಷಾ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಬೇಕು. ಪ್ರಶ್ನೆಗಳನ್ನು ಸುರಕ್ಷಿತವಾಗಿ ಸೀಲ್‌ ಮಾಡಿ, ಸಿಸಿ ಕ್ಯಾಮೆರಾ ಅಳವಡಿಸಿ ನೋಡಲ್‌ ಕೇಂದ್ರ ಒಂದು ಕೋಣೆಯಲ್ಲಿ ಇಡಬೇಕು. ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲ ದಿನ ಯಾವುದೇ ಕಾರಣಕ್ಕೂ ನೀಡುವಂತಿಲ್ಲ. ಕಾಲೇಜಿನ ಪ್ರಾಂಶುಪಾಲರು ಪ್ರಶ್ನೆ ಪತ್ರಿಕೆ ಪ್ಯಾಕೆಟ್‌ಗಳನ್ನು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ತೆರೆಯಬೇಕು. ಈ ಕುರಿತು ಕನಿಷ್ಠ ಇಬ್ಬರು ವಿದ್ಯಾರ್ಥಿಳು ಪ್ರಮಾಣೀಕರಿಸಬೇಕು ಎಂದು ಸೂಚನೆ ನೀಡಲಾಗಿದೆ.