School: ದಸರಾ ರಜೆ ವಿಸ್ತರಣೆ ಪರಿಣಾಮ: ಎಲ್ಲ ಶಾಲೆಗಳಲ್ಲಿ ಹೆಚ್ಚುವರಿ ಕ್ಲಾಸ್‌ಗೆ ಸರ್ಕಾರ ಆದೇಶ

School: ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊರತೆಯಾಗುವ ಶಾಲಾ ದಿನಗಳ ಬೋಧನಾ ಕಲಿಕೆ ಸರಿದೂಗಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ದಸರಾ ರಜೆಗಳನ್ನು ವಿಸ್ತರಿಸಿದ ಪರಿಣಾಮವಾಗಿ ಶಾಲಾ ದಿನಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಕಲಿಕಾ ಅವಧಿಯನ್ನು ಸಮತೋಲನಗೊಳಿಸಲು ಶಿಕ್ಷಣ ಇಲಾಖೆ ಮಹತ್ವದ ಹಾಗೂ ಬಾಧ್ಯತೆಯ ನಿರ್ಧಾರ ಪ್ರಕಟಿಸಿದೆ.ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ದಸರಾ ರಜಾ ಅವಧಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಸದರಿ ಕಾರ್ಯ ದಸರಾ ರಜೆಯಲ್ಲಿ ಆರಂಭಗೊಂಡಿರುತ್ತದೆ. ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಉಲ್ಲೇಖ(4) ರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ರವರು ಮುಖ್ಯ ಮಂತ್ರಿಗಳಿಗೆ ನೀಡಿದ ಮನವಿ ಪತ್ರ ದಿನಾಂಕ:06.10.2025 ರಲ್ಲಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಅವಶ್ಯಕತೆ ಇದ್ದು ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಾಲೆಗಳಿಗೆ ಹೆಚ್ಚುವರಿ ದಸರಾ ರಜೆಗಳನ್ನು ನೀಡಿ ಸಮೀಕ್ಷೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿರುತ್ತಾರೆ ಹಾಗೂ ವಿದ್ಯಾರ್ಥಿಗಳಿಗೆ ಮುಂದೆ ವಿಶೇಷ ಬೋಧನಾ ಅವಧಿಗಳನ್ನು ನಡೆಸಲಾಗುವುದು ಎಂದಿರುತ್ತಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರು ನಮೂದಿಸಿದ ಟಿಪ್ಪಣಿಯಲ್ಲಿ ಸದರಿ ಮನವಿ ಕುರಿತು ಮುಖ್ಯ ಮಂತ್ರಿಗಳು ನೀಡುವ ಸೂಚನೆಯಂತೆ ಕ್ರಮವಹಿಸಿ ಎಂದು ನಿರ್ದೇಶಿಸಿರುತ್ತಾರೆ.ರಜೆ ವಿಸ್ತರಣೆ ಎಂದಾಗ ಅದು ವಿದ್ಯಾರ್ಥಿಗಳಿಗೆ ಸಂತೋಷ ತಂದರೂ, ಪಠ್ಯಕ್ರಮ ಪೂರ್ಣಗೊಳಿಸುವಲ್ಲಿ ಉಂಟಾಗುವ ವ್ಯತ್ಯಾಸವನ್ನು ಸರಿಪಡಿಸುವುದು ಶಾಲಾ ಆಡಳಿತಕ್ಕೆ ಸದಾ ಸವಾಲಾಗಿರುತ್ತದೆ. ಈ ವರ್ಷವೂ ಇದೇ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ ಬದಲಿ ಕ್ರಮವಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಿತ್ಯ ಒಂದು ಹೆಚ್ಚುವರಿ ಪೀರಿಯಡ್ ನಡೆಸುವಂತೆ ಹೊಸ ಆದೇಶ ಹೊರಡಿಸಿದೆ. ಈ ನಿರ್ದೇಶನವು 2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪುನರ್‌ಸಂಯೋಜಿಸಲು ರೂಪಿಸಲಾಗಿದೆ. ದಸರಾ ರಜೆಗಳ ವಿಸ್ತರಣೆಯಿಂದ ಒಟ್ಟು 10 ಶಾಲಾ ದಿನಗಳ ಕಲಿಕಾ ಕೊರತೆ ಉಂಟಾಗಿದ್ದು, ಇದರಲ್ಲಿ 8 ಪೂರ್ಣ ದಿನಗಳು ಮತ್ತು 2 ಅರ್ಧ ದಿನಗಳು ಸೇರಿವೆ. ಕಲಿಕಾ ವೇಳಾಪಟ್ಟಿಯ ಸಮತೋಲನ ಕಾಪಾಡಿ ವಿದ್ಯಾರ್ಥಿಗಳ ಪಠ್ಯ ಪ್ರಗತಿಯಲ್ಲಿ ಅಡೆತಡೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಸೂಚಿಸಿದೆ.ಮುಖ್ಯಮಂತ್ರಿಗಳು ಉಲ್ಲೇಖ(3) ರೀತ್ಯಾ ದಿನಾಂಕ:07.10.2025 ರ ವರೆಗೆ ನಿಗದಿಯಾಗಿದ್ದ ದಸರಾ ರಜೆಯನ್ನು ದಿನಾಂಕ:18.10.2025 ರ ವರೆಗೆ ವಿಸ್ತರಿಸಿ ಆದೇಶಿಸಿರುತ್ತಾರೆ. ಅದರಂತೆ ಉಲ್ಲೇಖ(2)ರ ಈ ಕಛೇರಿಗೆ ಜ್ಞಾಪನ ದಿನಾಂಕ:07.10.2025 ರಂತೆ ದಿನಾಂಕ:7.10.2025 ರ ವರೆಗೆ ನಿಗದಿಯಾಗಿದ್ದ ದಸರಾ ರಜೆಯನ್ನು ದಿನಾಂಕ:18.10.2025 ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಈ ಅವಧಿಯಲ್ಲಿ ಕಳೆದುಕೊಳ್ಳುವ ಶಾಲಾ ದಿನಗಳು (ಕಾರ್ಯನಿರತ ದಿನಗಳು) 8,9,10,11,13 ರಿಂದ 18 ಆಗಿದ್ದು, ಒಟ್ಟಾರೆ 10 ಶಾಲಾ ದಿನಗಳ ಕೊರತೆಯಾಗಿದೆ. ಇದರಲ್ಲಿ 8 ಪೂರ್ಣದಿನ ಮತ್ತು 2 ಅರ್ಧದಿನಗಳಾಗಿರುತ್ತದೆ.2025-26ರ ಶೈಕ್ಷಣಿಕ ಮಾರ್ಗಸೂಚಿಯ ಪ್ರಕಾರ ದಸರಾ ರಜೆಗಳನ್ನು 22 ಸೆಪ್ಟೆಂಬರ್ 2025 ರಿಂದ 7 ಅಕ್ಟೋಬರ್ 2025 ರವರೆಗೆ ನಿಗದಿಪಡಿಸಲಾಗಿತ್ತು. ನಂತರ ರಜೆ ವಿಸ್ತರಣೆಯಾಗಿ 8ರಿಂದ 18ರವರೆಗೆ ಶಾಲೆಗಳು ಮುಚ್ಚಬೇಕಾದ ಕಾರಣ ಒಟ್ಟು 10 ದಿನಗಳು ಕಳೆದುಹೋಗಿವೆ. ಪೂರ್ಣ ದಿನಗಳು: 8, ಅರ್ಧ ದಿನಗಳು: 2. ಈ ದಿನಗಳಲ್ಲಿ ನಷ್ಟವಾದ ಅವಧಿಗಳನ್ನು (ಪ್ರೌಢ ಶಾಲೆ – 66 ಪೀರಿಯಡ್ಸ್, ಪ್ರಾಥಮಿಕ ಶಾಲೆ – 74 ಪೀರಿಯಡ್ಸ್) ಸರಿಪಡಿಸುವುದು ಈಗ ಶಾಲೆಗಳ ಜವಾಬ್ದಾರಿಯಾಗಿದೆ.

Comments are closed.