Ramayana: ರಾಮಾಯಣ ಕಾಲದಲ್ಲಿದ್ದ ಪುಷ್ಪಕ ವಿಮಾನ ಮಹಾಭಾರತ ಯುದ್ಧದಲ್ಲಿ ಬಳಕೆ ಆಗಿತ್ತಾ?

Ramayana:ರಾಮ ಮತ್ತು ಸೀತೆಯನ್ನು ಅಯೋಧ್ಯೆಗೆ ಹಿಂದಿರುಗಿಸಲು ಪುಷ್ಪಕ ವಿಮಾನವನ್ನು ಬಳಸಲಾಗಿತ್ತು ಎಂದು ರಾಮಾಯಣ ಕಥೆ ಹೇಳುತ್ತದೆ. ಹಾಗಾದ್ರೆ ವಿಮಾನಯಾನ ಆ ಕಾಲದಲ್ಲಿ ಇತ್ತು ಎಂದು ನಂಬೋಣ. ಸರಿ ಸುಮಾರು ಕ್ರಿಸ್ತ ಪೂರ್ವ 5000 ವರ್ಷ ಹಿಂದೆ ರಾಮಾಯಣ ಘಟಿಸಿದೆ. ಅದೇ ಮಹಾಭಾರತ ಕ್ರಿಸ್ತ ಪೂರ್ವ 3000 ನಡೆದಿದೆ. ಒಂದು ಅಂದಾಜಿನ ಪ್ರಕಾರ ರಾಮಾಯಣ ಮತ್ತು ಮಹಾಭಾರತದ ನಡುವೆ ಇರುವ ವರ್ಷಗಳ ವ್ಯತ್ಯಾಸ ಸುಮಾರು 800 ರಿಂದ 2,000 ವರ್ಷಗಳು.

ರಾಮಾಯಣದ ಕಾಲದಲ್ಲಿ ಪುಷ್ಪಕ ವಿಮಾನದ ಮೂಲಕ ವಾಯುಯಾನ ತಂತ್ರಜ್ಞಾನ ಇದ್ದದ್ದೇ ಆದರೆ ಮಹಾಭಾರತ ಕಾಲದಲ್ಲಿ, ಮಹಾಭಾರತ ಯುದ್ಧದಲ್ಲಿ ಕೂಡಾ ಪುಷ್ಪಕ ವಿಮಾನ ಇದ್ದಿರಬೇಕಲ್ಲ? ಹಾಗಾದ್ರೆ ಯಾಕೆ ಪುಷ್ಪಕ ವಿಮಾನವನ್ನು ಬಳಸಲಿಲ್ಲ ಅನ್ನೋದು ಇವತ್ತಿನ ಪ್ರಶ್ನೆ.
ಕಥೆಯ ಪ್ರಕಾರ ಪುಷ್ಪಕ ವಿಮಾನವು ಕುಬೇರನಿಗೆ ಬ್ರಹ್ಮನಿಗೆ ನೀಡಿದ ಉಡುಗೊರೆಯಾಗಿತ್ತು. ಆದರೆ ರಾವಣನು ಅದನ್ನು ಕುಬೇರನ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು. ಅದು ದೇವಲೋಕದ ಆಚಾರಿ ವಿಶ್ವಕರ್ಮನು ಸ್ವರ್ಗದಲ್ಲಿ ಬ್ರಹ್ಮನಿಗಾಗಿ ಮಾಡಿದ, ಎಲ್ಲಾ ರೀತಿಯ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟ, ಪುಷ್ಪಗಳಿಂದ ಸಿಂಗರಿಸಲ್ಪಟ್ಟ ಈ ಅದ್ಭುತ ವಿಮಾನವನ್ನು, ಕುಬೇರನು ಬ್ರಹ್ಮನಿಂದ ಅತ್ಯಂತ ಕಠಿಣ ಪರಿಶ್ರಮದಿಂದ ಪಡೆದಿದ್ದ. ಆದರೆ ತನ್ನ ತಪಸ್ಸಿನ ಶಕ್ತಿಯಿಂದ ರಾವಣನು ಕುಬೇರನನ್ನು ಸೋಲಿಸಿ ಪರಾಕ್ರಮದಿಂದ ಆ ವಿಮಾನವನ್ನು ಪಡೆದನು. ಮುಂದೆ ರಾಮನು ರಾವಣನನ್ನು ಸೋಲಿಸಿದ ನಂತರ ಪುಷ್ಪಕ ವಿಮಾನವು ತನ್ನ ಒಡೆಯ ಕುಬೇರನ ಕೈ ಸೇರಿತ್ತು.
ಆದರೆ ಮಹಾಭಾರತದ ಕಥೆಯಲ್ಲಿ ಮತ್ತೆ ಪುಷ್ಪಕ ವಿಮಾನದ ಸುದ್ದಿ ಬರುತ್ತದೆ. ಕುಬೇರನು ಪುಷ್ಪಕ ವಿಮಾನದ ಮೇಲೆ ಸವಾರಿ ಮಾಡುವುದನ್ನು ಪಾಂಡವರು ನೋಡಿದರು ಎನ್ನುವ ವಿಮಾನದ ಪ್ರಸ್ತಾಪ ಅಲ್ಲೊಂದು ಕಡೆ ಇದೆ. “ಅವರೆಲ್ಲರೂ ಸಂಪತ್ತಿನ ಅಧಿಪತಿಯನ್ನು ಸುತ್ತುವರೆದು, ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿದರು. ವಿಶ್ವಕರ್ಮ ನಿರ್ಮಿಸಿದ ಮತ್ತು ಪಕ್ಕಗಳಲ್ಲಿ ಬಣ್ಣ ಬಳಿದ ತನ್ನ ಪರಮೋಚ್ಚ ಪುಷ್ಪಕದ ಮೇಲೆ ಸಂಪತ್ತಿನ ಸುಂದರ ಅಧಿಪತಿ ಕುಳಿತದ್ದ” ಅನ್ನುತ್ತೆ ಯಕ್ಷ ಯುದ್ಧ ಪರ್ವದ ಮಹಾಭಾರತದ ಕಥೆ.
ಮಹಾಭಾರತದ ಅವಧಿಯಲ್ಲಿ ವಿಮಾನ ಹೊಂದಿದ್ದ ಏಕೈಕ ಮಾನವ ಶಾಲ್ವ. ಅವನ ವಿಮಾನವನ್ನು ಸೌಭ ಎಂದು ಕರೆಯಲಾಯಿತು. ಅವನು ಅದನ್ನು ಶಿವನಿಂದ ಆಶೀರ್ವಾದವಾಗಿ ಪಡೆದ ಅನ್ನುವ ಮಾಹಿತಿ ಮಹಾಭಾರತದಲ್ಲಿ ಬರುತ್ತಿದೆ.
ಶಿವನು ಶಾಲ್ವನಿಗೆ ಸೌಭ ವಿಮಾನ ನೀಡುತ್ತಾನೆ. ಒಮ್ಮೆ ಸಾಲ್ವನು, “ನಾನು ಈ ಭೂಮಿಯಿಂದ ಎಲ್ಲಾ ಯಾದವರನ್ನು ನಿರ್ಮೂಲನೆ ಮಾಡುತ್ತೇನೆ. ನನ್ನ ಧೈರ್ಯವನ್ನು ನೋಡು” ಎಂದು ಪ್ರತಿಜ್ಞೆ ಮಾಡಿದನು. ನಂತರ ಸಾಲ್ವನು ಘೋರ ತಪಸ್ಸು ಮಾಡಿ, ಶಿವನಿಂದ ವರವಾಗಿ, ತನ್ನ ಇಚ್ಛೆಯಂತೆ ಎಲ್ಲಿ ಬೇಕಾದರೂ ಹೋಗುವ ಮತ್ತು ದೇವತೆಗಳು, ಅಸುರರು, ಮನುಷ್ಯರು, ಗಂಧರ್ವರು, ಸರ್ಪಗಳು ಮತ್ತು ರಾಕ್ಷಸರು ಕೂಡಾ ಅಜೇಯರಾಗುವ ಮತ್ತು ಎಲ್ಲರ ಹೃದಯದಲ್ಲಿ ಭಯವನ್ನು ಉಂಟು ಮಾಡುವ ವೈಮಾನಿಕ ರಥವನ್ನು ಪ್ರಾರ್ಥಿಸಿ ಪಡೆದನು ಅನ್ನುತ್ತದೆ ಕಥೆ. ಹಾಗಾಗಿ ಮಹಾಭಾರತ ಮತ್ತು ರಾಮಾಯಣ ಎರಡರಲ್ಲೂ ಪುಷ್ಪಕ ವಿಮಾನದ ಪ್ರಸ್ತಾಪ ಬಂದರೂ ವಿಮಾನವನ್ನು ಯುದ್ಧಕ್ಕೆ ಬಳಸಲಿಲ್ಲ. ಕೇವಲ ಕುಬೇರನ ಪ್ರಯಾಣವನ್ನು ಗಮನಿಸಿ, ಪಾಂಡವರು ಆತನಿಗೆ ನಮಸ್ಕಾರ ಮಾಡಿಸುವಲ್ಲಿ ಮಾತ್ರ ಪುಷ್ಪಕ ವಿಮಾನದ ಕಥೆ ನಿಲ್ಲುತ್ತದೆ. ಹಾಗಾಗಿ ಪುಷ್ಪಕ ವಿಮಾನ ಅನ್ನುವುದು ಒಂದು ಕಾಲ್ಪನಿಕ ವಸ್ತುವಾಗಿತ್ತು. ಕಥೆಗೆ ಪೂರಕವಾಗಿ ವಿಮಾನದ ಕಲ್ಪನೆಯು ಮೂಡಿತ್ತೆ ವಿನಃ, ಈಗಿನ ವಿಮಾನಗಳ ಹಾಗೆ ಅದು ತಂತ್ರಜ್ಞಾನ ಬೆರೆತ ಸಾಧನ ಆಗಿರಲಿಕ್ಕಿಲ್ಲ ಅನ್ನೋದು ಗೊತ್ತಾಗುತ್ತದೆ.
ಸುದರ್ಶನ್ ಬಿ.ಪ್ರವೀಣ್
Comments are closed.