Karnataka Elections: ಚುನಾವಣಾ ಪ್ರಚಾರದ ವೇಳೆ ನಿಮ್ ದಿಗ್ಗಜ ನಾಯಕರು ಸೇವಿಸೋ ಆಹಾರ ಏನು ನೋಡಿದ್ರಾ ?!
Election 2023: ಈಗಾಗಲೇ ಚುನಾವಣೆಯ (Election 2023) ಕಾವು ಎಲ್ಲೆಡೆ ಗರಿಗೆದರಿದ್ದು, ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ( Karnataka Election)ಗೆಲುವಿನ ಜಯಭೇರಿ ಸಾಧಿಸಲು ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿದೆ. ಚುನಾವಣಾ ದಿನ ಸನಿಹವಾಗುತ್ತಿದ್ದಂತೆ ರಾಜಕಾರಣಿಗಳಿಗೆ ಪ್ರತಿ ಕ್ಷಣ ಕೂಡ ಅಮೂಲ್ಯವಾಗಿದ್ದು, ಈ ನಡುವೆ ಆಹಾರ ಕ್ರಮದಲ್ಲಿ ಕೂಡ ಕಟ್ಟುನಿಟ್ಟು ಮಾಡುವುದುಂಟು. ಅಷ್ಟೇ ಅಲ್ಲದೆ, ಹೆಚ್ಚಿನ ನಾಯಕರು ಚುನಾವಣೆ ಮುಗಿಯುವ ತನಕ ಮಾಂಸಾಹಾರ ವರ್ಜಿಸಿ ಸಸ್ಯಾಹಾರ ಸೇವನೆ ಮಾಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ? ಇನ್ನೂ ಸ್ಟಾರ್ ನಾಯಕರು ಚುನಾವಣಾ ಸಮಯದಲ್ಲಿ (Election 2023) ಅನುಸರಿಸುವ ಆಹಾರ ಕ್ರಮದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ!
ಚುನಾವಣಾ ಪ್ರಚಾರಕ್ಕಾಗಿ ಊರೂರು ಓಡಾಟ ನಡೆಸಿ ಮತ ಬೇಟೆಗೆ ಭರ್ಜರಿ ತಯಾರಿ ನಡೆಸುತ್ತಿರುವ ನಾಯಕರು ಮಜ್ಜಿಗೆ, ಎಳನೀರು ಎಂದು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಇದರ ನಡುವೆ ಭರ್ಜರಿ ಪ್ರಚಾರದ ಸಂದರ್ಭ ಪರಿಚಿತರ, ನಾಯಕರ, ಕಾರ್ಯಕರ್ತರ ಮನೆಯಲ್ಲಿ ಭೋಜನ ವ್ಯವಸ್ಥೆ ಕೂಡ ನಡೆಯುತ್ತಿದೆ. ಬಹಿರಂಗ ಪ್ರಚಾರ ಮಾಡಲು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಗೆಲುವಿನ ಕಹಳೆ ಮೊಳಗಿಸಲು ರಣತಂತ್ರ ಹೆಣೆಯುತ್ತಿರುವ ನಡುವೆಯೂ ನಾಯಕರು ತಮ್ಮ ಆಹಾರ ಕ್ರಮದ ಮೇಲೆ ವಿಶೇಷ ಗಮನ ಕೊಡುತ್ತಿದ್ದಾರೆ. ಹಾಗಿದ್ರೆ, ಮೂರು ಪಕ್ಷಗಳ ಸ್ಟಾರ್ ಪ್ರಚಾರಕರು, ನಾಯಕರ ಉಪಾಹಾರ, ಊಟೋಪಚಾರ ಹೇಗಿದೆ ಗೊತ್ತಾ?
ಬಸವರಾಜ್ ಬೊಮ್ಮಾಯಿ:
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (Basavaraj Bommayi)ರಾಜ್ಯಾದ್ಯಂತ ಬಿರುಸಿನ ರೋಡ್ ಶೋ, ಸಾರ್ವಜನಿಕ ಸಭೆಗಳಲ್ಲಿ ಭಾಗಿಯುತ್ತಿದ್ದಾರೆ. ಬಿರು ಬಿಸಿಲಿನ ನಡುವೆಯೂ ಕಮಲ ಅರಳಲು ಪಣ ತೊಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರಕ್ಕಾಗಿ ತಮ್ಮ ಆಹಾರಸೇವನಾ ಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರಂತೆ. ಬೆಳಗಿನ ಉಪಾಹಾರಕ್ಕೆ ಇಡ್ಲಿ, ಉಪ್ಪಿಟ್ಟು, ದೋಸೆ ಯಾವುದಾದರೂ ಒಂದನ್ನು ಸೇವಿಸುತ್ತಾರಂತೆ. ಊಟೋಪಚಾರದ ವಿಷಯದಲ್ಲಿ ಮಧ್ಯಾಹ್ನದ ವೇಳೆಗೆ ರೊಟ್ಟಿ,ನವಣೆ ಅನ್ನ, ಸಾಂಬಾರು ಜೊತೆಗೆ ಆಯ್ದ ಕುರುಕಲು ತಿಂಡಿ ಸೇವಿಸುವ ಅಭ್ಯಾಸವಿದೆ. ಸಂಜೆ ವೇಳೆ, ಚುರುಮುರಿ ಸೇವಿಸಬಹುದು. ರಾತ್ರಿ ರೊಟ್ಟಿ ಇಲ್ಲವೇ ಊಟ ಸೇವಿಸುತ್ತಾರೆ. ಇನ್ನು ಪ್ರಯಾಣ ಮಾಡುವ ಸಂದರ್ಭದಲ್ಲಿ ಸೌತೇಕಾಯಿ ಜೊತೆಗೆ ತರಕಾರಿ ಸೇವಿಸುತ್ತಾರೆ.
ಬಿ.ಎಸ್. ಯಡಿಯೂರಪ್ಪ:
ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಡಿಸಿಕೊಂಡಿರುವ ಯಡಿಯೂರಪ್ಪನವರು ಬೆಳಗ್ಗೆ 5ಗಂಟೆಗೆ ಏಳುತ್ತಾರಂತೆ. ಉಪ್ಪಿಟ್ಟು ಮತ್ತು ದೋಸೆ ಯಡಿಯೂರಪ್ಪ ಅವರ ನೆಚ್ಚಿನ ಉಪಹಾರವಾಗಿದ್ದು, ಈ ಎರಡು ತಿಂಡಿಗಳ ಪೈಕಿ ಯಾವುದಾದರೂ ಒಂದು ಬೇಕೆ ಬೇಕಂತೆ! ಬೆಳಗ್ಗೆ ಲಘು ಉಪಹಾರ ಮಾಡುವ ಯಡಿಯೂರಪ್ಪ ಟೀ ಸೇವನೆ ಕೂಡ ಮಾಡುತ್ತಾರೆ. ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಜ್ಯೂಸ್, ಮಜ್ಜಿಗೆ ಸೇವನೆಯ ಜೊತೆಗೆ ಆಗಾಗ ಅಲ್ಪ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಸೇವಿಸುತ್ತಾರೆ. ಮಧ್ಯಾಹ್ನ ಚಪಾತಿ, ಅನ್ನ- ಸಾಂಬಾರ್, ಪಲ್ಯ, ಮೊಸರು ಸೇವಿಸಿದರೆ ಸಂಜೆಯ ವೇಳೆಗೆ 7- 7.30ರೊಳಗೆ ಅವಲಕ್ಕಿ ಅಥವಾ ಸ್ವಲ್ಪ ಪ್ರಮಾಣದ ಚಪಾತಿ, ಅನ್ನ, ಸಾಂಬಾರ್ ಸೇವಿಸುತ್ತಾರೆ. ಇನ್ನು ರಾತ್ರಿ ಮಲಗುವ ಮುನ್ನ ಹಾಲು ಸೇವಿಸುತ್ತಾರೆ.
ಹೆಚ್.ಡಿ.ದೇವೇಗೌಡ:
ಎಚ್.ಡಿ.ದೇವೇಗೌಡರು ತಮ್ಮ 90ರ ಹರೆಯದಲ್ಲಿಯು ಕೂಡ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟು ಮಾಡುತ್ತಾ ಬಂದಿದ್ದಾರಂತೆ. ಬೆಳಗ್ಗೆ ಉಪ್ಪಿಟ್ಟಿನ ಜೊತೆಗೆ ಲಘು ಉಪಾಹಾರ ಸೇವಿಸುವ ಅಭ್ಯಾಸ ಇಟ್ಟುಕೊಂಡಿರುವ ದೇವೇಗೌಡರು ಪ್ರಚಾರಕ್ಕೆ ಹೋಗುವ ವೇಳೆ ದೇವಾಲಯ, ಮಠಗಳಲ್ಲೂ ಉಪಾಹಾರ, ಊಟ ಮಾಡುತ್ತಾರೆ. ಪ್ರಚಾರದ ಸಂದರ್ಭದಲ್ಲಿ ಕೊಂಚ ಫಿಲ್ಟರ್ ಕಾಫಿ ಕುಡಿಯುತ್ತಾರೆ. ಇದರ ಜೊತೆಗೆ ಸ್ಥಳೀಯ ಮುಖಂಡರ ಮನೆಗಳಲ್ಲಿ ಕೂಡ ಕೆಲವೊಮ್ಮೆ ಮುದ್ದೆ ಊಟದ ಬಾಡೂಟ ಮಾಡುತ್ತಾರೆ. ರಾತ್ರಿ ಬಯಸಿದರೆ ಗಂಜಿ, ಮಜ್ಜಿಗೆ ಸೇವಿಸುತ್ತಾರೆ.
ಕುಮಾರಸ್ವಾಮಿ:
ಜೆಡಿಎಸ್ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಊಟೋಪಚಾರದ ವಿಷಯದಲ್ಲಿ ಹೆಚ್ಚಿನ ಬದಲಾವಣೆ ಮಾಡಿಕೊಂಡಿಲ್ಲ. ಆದರೆ, ಮಾಂಸಾಹಾರ ಸೇವನೆಯನ್ನು ಸದ್ಯಕ್ಕೆ ವರ್ಜಿಸಿದ್ದಾರಂತೆ. ಇದನ್ನು ಹೊರತುಪಡಿಸಿದರೆ, ಮಾಮೂಲಿಯಂತೆ ಬೆಳಗಿನ ಉಪಾಹಾರಕ್ಕೆ ಇಡ್ಲಿ, ರಾಗಿ ರೊಟ್ಟಿ ಇತರೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ, ಸಾಂಬಾರು ಸೇವನೆ ಮಾಡುತ್ತಾರೆ. ಪ್ರಚಾರದ ಮಧ್ಯೆ ಹಣ್ಣು, ಸೊಪ್ಪಿನ ಪಲ್ಯ, ಬೇಯಿಸಿದ ತರಕಾರಿ ಸೇವಿಸುವುದರ ಜೊತೆಗೆ ಆಗಾಗ ಕಾಫಿ ಸೇವನೆ ಮಾಡುತ್ತಾರೆ.
ಮಲ್ಲಿಕಾರ್ಜುನ ಖರ್ಗೆ:
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಪ್ರಚಾರದ ಸಂದರ್ಭದಲ್ಲಿ ಯಾವುದೇ ಪಥ್ಯ ಮಾಡುವುದಿಲ್ಲವಂತೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಹಣ್ಣು ಹಂಪಲು, ಮಜ್ಜಿಗೆ, ಎಳನೀರು ಹೆಚ್ಚಾಗಿ ಸೇವಿಸುತ್ತಾರೆ. ಮೊದಲೇ ನಿಗದಿ ಮಾಡಿದ ಪ್ರವಾಸದ ಅನುಸಾರ ಜಿಲ್ಲಾ ಕಾಂಗ್ರೆಸ್ ಸಮಿತಿಯೇ ಊಟ, ವಿಶ್ರಾಂತಿಗೆ ಪೂರಕ ಸೌಕರ್ಯ ಕಲ್ಪಿಸುವುದರಿಂದ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ತಮ್ಮ ದೈನಂದಿನ ಪದ್ಧತಿಯ ಅನುಸಾರವೇ ಹೆಚ್ಚು ನಡೆಯುತ್ತದೆ.
ಸಿದ್ದರಾಮಯ್ಯ:
ಸಿದ್ದರಾಮಯ್ಯನವರು ಚುನಾವಣೆ ಘೋಷಣೆಯಾಗುವ ಮೊದಲೇ ಮಾಂಸಾಹಾರ ವರ್ಜಿಸಿದ್ದು, ಮತದಾನ ಮುಗಿದು ಫಲಿತಾಂಶ ಬರುವವರೆಗೆ ಇದೆ ಕ್ರಮ ಅನುಸರಿಸುತ್ತಾರೆ. ಉಪ್ಪು, ಸಿಹಿ, ಖಾರದ ತಿಂಡಿ ತಿನಿಸುಗಳಿಂದ ಕೊಂಚ ದೂರವೇ ಇರುವ ಸಿದ್ದು ಅವರು ಮುದ್ದೆ ಸಾಂಬಾರು, ಸಿರಿಧಾನ್ಯ ರೊಟ್ಟಿ, ದೋಸೆ, ಪಲ್ಯ, ತರಕಾರಿ ಹೆಚ್ಚು ಸೇವಿಸುತ್ತಾರೆ. ಪ್ರಚಾರದ ನಡುವೆ ಎಳನೀರು, ಮಜ್ಜಿಗೆಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾರೆ.
ಆರ್. ಅಶೋಕ್:
ಆರ್ ಅಶೋಕ್ ಅವರು ಉಭಯ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿರುವ ಹಿನ್ನೆಲೆ ಬಿರುಸಿನ ಪ್ರಚಾರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನಾಮಪತ್ರ ಸಲ್ಲಿಕೆಯಿಂದ ಚುನಾವಣೆ ಮುಗಿಯುವವರೆಗೆ ಆರ್ ಅಶೋಕ್ ಮಾಂಸಾಹಾರ ಸೇವನೆ ಮಾಡುವುದಿಲ್ಲವಂತೆ. ಬೆಳಗ್ಗೆ ಉಪಾಹಾರಕ್ಕೆ ಕುಚಲಕ್ಕಿ ಅನ್ನ- ಮಜ್ಜಿಗೆಯ ಜ್ಯೂಸ್ ಸೇವಿಸುತ್ತಾರೆ. ಮಧ್ಯಾಹ್ನದ ಭೋಜನಕ್ಕೆ ಬೇಯಿಸಿದ ತರಕಾರಿ ಸೇವನೆ ಮಾಡುತ್ತಾರೆ. ಬ್ಲಾಕ್ ಕಾಫಿ ಸೇವನೆ ಮಾಡಲು ಬಯಸುತ್ತಾರೆ. ಸ್ಥಳೀಯ ಮುಖಂಡರು, ಕಾರ್ಯಕರ್ತರ ಒತ್ತಾಯವಿದ್ದಾಗ ಮುದ್ದೆ, ಅನ್ನ ಸಾಂಬಾರ್ ಸೇವನೆ ಮಾಡುತ್ತಾರೆ. ರಾತ್ರಿ ಕುಚಲಕ್ಕಿ ದೋಸೆ, ಪಲ್ಯ ಸೇವನೆ ಮಾಡುತ್ತಾರೆ. ಪ್ರಚಾರದ ಮಧ್ಯದಲ್ಲಿ ಯಾವುದೇ ಗ್ರಾಮಕ್ಕೆ ತೆರಳಿದರೂ ಎಳನೀರು ಸೇವಿಸಲು ಬಯಸುತ್ತಾರೆ. ಇದರ ಜೊತೆಗೆ ಮಜ್ಜಿಗೆ ಸೇವನೆ ಮಾಡುತ್ತಾರೆ.
ಡಿ.ಕೆ.ಶಿವಕುಮಾರ್:
ಡಿ.ಕೆ.ಶಿವಕುಮಾರ್ ಪ್ರಚಾರವಿದ್ದರು ಯಾವುದೇ ಆಹಾರ ಪಥ್ಯ ಮಾಡುವುದಿಲ್ಲವಂತೆ. ಬೆಳಗ್ಗೆ ಒಳ್ಳೆಯ ಉಪಾಹಾರ ಸೇವನೆ, ಡಿಕೆಶಿ ಪ್ರಚಾರದ ಮಧ್ಯೆ ಎಳನೀರು, ಮಜ್ಜಿಗೆ, ಜ್ಯೂಸ್ ಸೇವಿಸುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿ ಸ್ಥಳೀಯ ನಾಯಕರು, ಮುಖಂಡರ ಮನೆಯಲ್ಲಿ ಊಟೋಪಚಾರ ಸೇವಿಸುತ್ತಾರಂತೆ. ಪ್ರಚಾರ ಕಾರ್ಯಕ್ರಮದಲ್ಲಿ ಸಣ್ಣ ಹೋಟೆಲ್ಗಳಲ್ಲಿ ಮುಖಂಡರು, ಕಾರ್ಯಕರ್ತರೊಂದಿಗೆ ತಿಂಡಿ- ತಿನಿಸು ಸೇವಿಸುತ್ತಾರೆ.
ಇದನ್ನು ಓದಿ: Court Jobs: 10th ಪಾಸಾದವರಿಗೆ ಸುವರ್ಣವಕಾಶ! ಕೋರ್ಟ್‌ನಲ್ಲಿ ಉದ್ಯೋಗವಕಾಶ! ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ!