Actress Aarathi: ನಟಿ ‘ಆರತಿ’ ತಟ್ಟೆಗೆ ಕೈ ಹಾಕಿ, ಕೈ ಸುಟ್ಟುಕೊಂಡ ಮಹನೀಯರು ಯಾರೆಲ್ಲ, ಹದ್ದಾದ ಗಿಣಿ ಯಾರನ್ನೆಲ್ಲಾ ಕುಕ್ಕಿತು ಗೊತ್ತಾ ?!

Actress Aarathi: ಇದು ನಟಿ ‘ ಆರತಿ ‘ ತಟ್ಟೆಗೆ ಕೈ ಹಾಕಿ ಸುಟ್ಟುಕೊಂಡವರ ಕ್ಲುಪ್ತ ಕಥೆ. ನಟಿ ಆರತಿಯ (Actress Aarathi) ಸೌಂದರ್ಯಕ್ಕೆ ಸೋತು ಹೋಗಿ ಆಕೆಯ ಸಹವಾಸಕ್ಕೆ ಕೈ ಹಾಕಿ ಸೋತು ಬದುಕು ಸುಟ್ಟುಕೊಂಡವರ ಕಥೆ. ಜನಪ್ರಿಯತೆಯ ಉತ್ತುಂಗದಲ್ಲಿದ್ದ, ಎರಡು ಮಹಾನ್ ಪ್ರತಿಭಾವಂತರು, ನಟಿ ಆರತಿಯ ಮೋಹದ ಸಹವಾಸಕ್ಕೆ ಸಿಕ್ಕು ತಮ್ಮೆಲ್ಲ ಜನಪ್ರಿಯತೆ, ಕ್ರಿಯಾಶೀಲತೆ, ಆರೋಗ್ಯ ಹೀಗೆ ಎಲ್ಲವನ್ನೂ ಕಳೆದುಕೊಂಡು ಸಾರ್ವಜನಿಕ ಬದುಕಿನಿಂದಲೇ ನಿರ್ಗಮಿಸಬೇಕಾಯಿತು. ಓರ್ವರಂತೂ ಆರತಿ ಬಿಟ್ಟು ಹೋದ ನಾಲ್ಕೇ ವರ್ಷಗಳಲ್ಲಿ ಇಹಲೋಕ ತ್ಯಜಿಸಿ ಹೋದರು. ಹಾಗಾದರೆ ಯಾರ ಕೈ ಎಲ್ಲಿ ಸುಟ್ಟಿತು, ಆರತಿ ತಟ್ಟೆಯ ಬಿಸಿಯಿಂದ ಕೈ ಸುಟ್ಟುಕೊಂಡವರು ಯಾರು, ಏನಾಯ್ತು ಅವರಿಗೆ ಎನ್ನುವುದರ ಪೂರ್ತಿ ಡೀಟೈಲ್ಸ್ !

 

ಆರತಿ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ. “ಗೆಜ್ಜೆ ಪೂಜೆ” ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಭಾರತಿ ಎಂಬ ಹುಡುಗಿಯೇ ಇವತ್ತಿನ ನಮ್ಮ ಈ ಕಥಾನಕದ ರಂಗನಾಯಕಿ. 1954 ರಲ್ಲಿ ಕುಶಾಲನಗರದ ಅರಗಲ್ ಎಂಬಲ್ಲಿ ಜನಿಸಿದ ಆ ಕುಟುಂಬಕ್ಕೆ ಮಗಳು ಆರತಿ ಸಿನಿಮಾಗಳಲ್ಲಿ ನಟಿಸುವುದು ಇಷ್ಟವಿರಲಿಲ್ಲ. ಆದರೆ ನಟಿ ಆರತಿ ಮಹತ್ವಾಕಾಂಕ್ಷಿ. ಜೀವನದಲ್ಲಿ ಏನಾದರೂ ಸಾಧಿಸಬೇಕು ದೊಡ್ಡ ಹೆಸರು ಮಾಡಬೇಕು ಎಂದು ಚಿಕ್ಕಂದಿನಲ್ಲಿಯೇ ಆಕೆಯ ಮನಸ್ಸಿನಲ್ಲಿ ಆಸೆ ಬಲವಾಗಿ ಮೊಳೆತುಬಿಟ್ಟಿತ್ತು. ಅದೊಂದು ಬಾರಿ, ನಟ ಶಿವರಾಮ್ ಅವರು ಆರತಿಯನ್ನು ನೋಡಿ ಬಿಟ್ಟು ಗೆಜ್ಜೆಪೂಜೆ ಸಿನಿಮಾಕ್ಕೆ ಆಕೆಯನ್ನು ಪರಿಚಯಿಸುತ್ತಾರೆ. ತಮ್ಮ ಮನೆಯಲ್ಲಿ ಗೊತ್ತಿಲ್ಲದಂತೆ ಆಕೆ ಗೆಜ್ಜೆಪೂಜೆ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸುತ್ತಾಳೆ. ಅಷ್ಟೇ ಮುಂದಿನದೆಲ್ಲಾ ಇತಿಹಾಸ. ಆ ಮಟ್ಟಿಗೆ 1970 ರಿಂದ 1980ರ ವರೆಗೆ ಕನ್ನಡ ಚಿತ್ರರಂಗವನ್ನು ಆಳಿದ ಖ್ಯಾತಿ ನಟಿ ಆರತಿಗೆ ಲಭಿಸುತ್ತದೆ.

ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ, ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕಗಳ ಜನಪ್ರಿಯ ತಾರೆ ಎನಿಸುತ್ತಾಳೆ. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಆರತಿ ಪರ್ಸನಲ್ ಬದುಕನ್ನು ನಿಮ್ಮೆದುರು ತೆರೆದಿಡುತ್ತಿದ್ದೇವೆ ನೋಡಿ.

ಆದಾಗಲೇ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರಿಗೆ ಮದುವೆಯಾಗಿತ್ತು. ಪುಟ್ಟಣ್ಣ ಕಣಗಾಲ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಾಗಲಕ್ಷ್ಮಿ ಎಂಬಾಕೆಯನ್ನು ಮದುವೆಯಾಗಿದ್ದರು. ಐದು ಮಕ್ಕಳೂ ಆದವು. ಆದರೂ 1970ರ ಸುಮಾರಿಗೆ ತಾನು ನಿರ್ದೇಶಿಸುತ್ತಿದ್ದ ಸಿನಿಮಾದ ನಾಯಕಿ ಆರತಿಯ ಜೊತೆ ಅವರಿಗೆ ಪ್ರೇಮಾಂಕರವಾಗಿತ್ತು. ಆತ ಸಾಲು ಸಾಲು ಚಿತ್ರಗಳನ್ನು ಆರತಿಯನ್ನು ಮುಖ್ಯ ಪಾತ್ರದಲ್ಲಿ ಇಟ್ಟುಕೊಂಡು ಸ್ತ್ರೀ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದರು. 1975 – 76ರ ಸುಮಾರಿಗೆ ಅವರ ಪ್ರೀತಿ ಇನ್ನಷ್ಟು ಬಲಿತು ಯಾರಿಗೂ ಸುಳಿವು ಕೊಡದಂತೆ, ತನ್ನ ಆತ್ಮೀಯರಿಗೂ ಹೇಳಿಕೊಳ್ಳದಂತೆ ಸುದ್ದಿ ತಿಳಿಯದಂತೆ ಪುಟ್ಟಣ್ಣ ಕಣಗಾಲ್ ಆರತಿಯನ್ನು ಮದುವೆಯಾಗಿದ್ದರು. ಆರತಿಯನ್ನು ಹಾಕಿಕೊಂಡು ಅವರು ಬಿಳಿ ಹೆಂಡತಿ ಎನ್ನುವ ಸಿನಿಮಾ ನಿರ್ದೇಶಿಸುತ್ತಿದ್ದರು.

ಮದುವೆಯಾದ ಪುಟ್ಟಣ್ಣ ಮತ್ತು ಆರತಿಯವರ ಸಂಸಾರ ಚೆನ್ನಾಗಿಯೇ ಇತ್ತು. ಆರತಿ ಮತ್ತು ಪುಟ್ಟಣ್ಣ ಕಣಗಾಲ್ ಅವರ ದಾಂಪತ್ಯ ಸುಖವಾಗಿಯೇ ಸಾಗಿತ್ತು. ಅವರಿಬ್ಬರ ಪ್ರೀತಿಯ ದ್ಯೋತಕವಾಗಿ ಯಶಸ್ವಿನಿ ಎಂಬ ಮಗಳು ಕೂಡಾ ಜನಿಸಿದಳು. ಆದರೆ ನಿಧಾನಕ್ಕೆ ಆರತಿ ಪುಟ್ಟಣ್ಣ ಕಣಗಾಲ್ ಅವರ ಮಧ್ಯೆ ವೈಮನಸ್ಸು ಶುರುವಾಗಿತ್ತು. ವರದಿಗಳ ಪ್ರಕಾರ ಅಂದಿನ ಎಲ್ಲಾ ಸಿಗುವ ಮಂದಿಗೆ ತಿಳಿದಿದ್ದಂತೆ ಪುಟ್ಟಣ್ಣ ಕಣಗಾಲ್ ಅವರು ಅತ್ಯಂತ ಕೋಪಿಷ್ಟ. ಪ್ರತಿ ಸಣ್ಣ ವಿಷಯಕ್ಕೂ ಅವರಿಗೆ ಕೋಪ ಬರುತ್ತಿತ್ತು ಇನ್ನೊಬ್ಬರ ಮೇಲೆ ಹಾರಾಡುತ್ತಿದ್ದರು. ಅದೇ ಅವರ ಸ್ವಭಾವ. ತಮ್ಮ ಕೋಪಿಷ್ಟಬುದ್ಧಿಯನ್ನು ಅವರು ಮನೆಯಲ್ಲಿ ಉಪಯೋಗಿಸುತ್ತಿದ್ದರಂತೆ. ಆದರೆ ಹಳೆಯ ಸಿನಿಮಾ ಪತ್ರಕರ್ತರ ಪ್ರಕಾರ ಪುಟ್ಟಣ್ಣ ಅವರನ್ನು ಮದುವೆಯಾಗುತ್ತಿದ್ದಂತೆ ಆರತಿಯವರ ಅಹಂಕಾರ ಜಾಸ್ತಿಯಾಗಿತ್ತು.

ಪುಟ್ಟಣ್ಣ ಬಹುಶಃ ಶಿಸ್ತಿನ ಮನುಷ್ಯ. ಅದಾಗಲೇ ಪುಟ್ಟಣ್ಣನವರು ನಟ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ರಾಮಕೃಷ್ಣ ಮುಂತಾದ ಘಟಾನುಘಟಿ ನಾಯಕರುಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈ ಎಲ್ಲಾ ನಟರು ಮತ್ತಿತರ ಚಿತ್ರ ತಂಡ ಪುಟ್ಟಣ್ಣ ಅಂದರೆ ಬೆದರಿಕೊಳ್ಳುತ್ತಿತ್ತು. ಆದರೆ ಆರತಿ ಒಬ್ಬರನ್ನು ಬಿಟ್ಟು. ಆರತಿ ಅವರು ಪುಟ್ಟಣ್ಣ ಅವರ ಮಾತಿಗೆ ಕ್ಯಾರೆ ಅನ್ನುತ್ತಿರಲಿಲ್ಲ. ಸೆಟ್ ಗಳಲ್ಲಿ ಪುಟ್ಟಣ್ಣ ಅವರಿಗೆ ಪದೇ ಪದೇ ತಿರುಗೇಟು ನೀಡುತ್ತಿದ್ದರು ಆರತಿ. ಸಣ್ಣಪುಟ್ಟ ಅವಮಾನವನ್ನು ಪುಟ್ಟಣ್ಣ ಸಹಿಸಿಕೊಂಡು ಹೋಗಿದ್ದರು ಆದರೆ ಯಾವಾಗ ಆರತಿಯವರ ಅಹಂಕಾರ ಜಾಸ್ತಿ ಆಗುತ್ತೋ, ಆಗ ಪುಟ್ಟಣ್ಣ ಕೂಡ ತಿರುಗಿ ಬಿದ್ದಿದ್ದರು. ಆದರೂ ನಿರ್ದೇಶಕ ಪುಟ್ಟಣ್ಣ ಅವರಿಗೆ ಆರತಿಯ ಮೇಲೆ ಅತೀವ ಪ್ರೀತಿ, ಇನ್ನಿಲ್ಲದ ಮೋಹವಿತ್ತು. ಆದರೆ ಈ ಅಹಂ ಜಗಳ ಅವರಿಬ್ಬರ ದಾಂಪತ್ಯಕ್ಕೆ ತೊಂದರೆ ಕೊಡಲು ಶುರು ಮಾಡಿತು. ಈ ಸಮಯದಲ್ಲೇ ‘ನಾನೇ ಸಾಕಿದಾ ಗಿಣಿ, ನನ್ನ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ’ ಎನ್ನುವ ಅತ್ಯಂತ ಹಾಡು ಕೂಡ ಹುಟ್ಟಿಕೊಂಡಿತೆನ್ನಬಹುದು.

ಇದೇ ಕಾರಣ ಮುಂದೆ ಬಲಗೊಂಡು ದಂಪತಿಗಳು ಪರಸ್ಪರ ದೂರವಾಗಲು ನಿರ್ಧರಿಸುತ್ತಾರೆ. 1981 ರ ಸುಮಾರಿಗೆ ಅವರಿಬ್ಬರೂ ದೂರವಾಗುತ್ತಾರೆ. ಈ ನಡುವೆ ಮಗಳು ಯಶಸ್ವಿನಿಯನ್ನು ಕೂಡಾ ಆರತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಆರೋಪ ಆರತಿಯ ಮೇಲೆ ಬರುತ್ತದೆ. ಅತ್ತ ಬರಬರುತ್ತಾ ಪುಟ್ಟಣ್ಣ ಕಣಗಾಲ್ ಅವರಿಗೆ ಅವಕಾಶಗಳು ವಂಚಿತವಾಗುತ್ತದೆ. ಅದೊಂದು ಸಲ ನಿರಂತರವಾಗಿ 14 ತಿಂಗಳುಗಳ ಕಾಲ ಯಾವುದೇ ಕೆಲಸವಿಲ್ಲದೆ ಅವರು ತುಂಬಾ ಪಡಿಪಾಟಲು ಪಡುತ್ತಾರೆ. ತಾನು ಬಹುವಾಗಿ ಪ್ರೀತಿಸಿದ, ಪ್ರೀತಿಸಿ ಮದುವೆಯಾದ ಆರತಿ ತನ್ನ ಕೈ ಬಿಟ್ಟು ಹೋದ ಕಾರಣಕ್ಕಾಗಿ ಪುಟ್ಟಣ್ಣನವರು ಬಹುವಾಗಿ ಕೊರಗುತ್ತಾರೆ. ಅದೇ ಯೋಚನೆಯಲ್ಲಿಯೇ ಆತನ ಆರೋಗ್ಯ ಪೂರ್ಣವಾಗಿ ಕೆಡುತ್ತದೆ. ನೋಡಿಕೊಳ್ಳಲು ಮನೆಯಲ್ಲಿ ಪತ್ನಿ, ಮಕ್ಕಳು ಇಲ್ಲದ ಕಾರಣ ಆರೋಗ್ಯ ಮತ್ತಷ್ಟು ಹದಗೆಟ್ಟು ಹೋಗುತ್ತದೆ. ಅವರ ಆರ್ಥಿಕ ಸಮಸ್ಯೆಯ ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಅಂದು ಅವಕಾಶ ಕಲ್ಪಿಸಿದ್ದ ನಟ ಶ್ರೀನಾಥ್ ಪುಟ್ಟಣ್ಣರ ಸಹಾಯಕ್ಕೆ ಬರುತ್ತಾರೆ. ಅಂತಿಮವಾಗಿ ಪುಟ್ಟಣ್ಣ ಕಣಗಾಲ್ ಅವರು ಖಿನ್ನತೆಗೆ ಜಾರಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಾರೆ. ಆದರೆ ಅದೊಂದು ದಿನ ತಮ್ಮ ಮಸಣದ ಹೂವು ಚಿತ್ರ ಶೂಟಿಂಗ್ ನಡೆಯುವ ಸಂದರ್ಭ, ಜೂನ್ 5, 1985 ರಂದು ಪುಟ್ಟಣ್ಣ ಅವರಿಗೆ ಹೃದಯಾಘಾತವಾಗಿ ಅವರು ನಿಧನವಾಗುತ್ತಾರೆ.

ಅದಾಗಿ, ಒಂದೇ ವರ್ಷದಲ್ಲಿ ಆಗಿನ ಮಂತ್ರಿ ರಘುಪತಿ ಅವರ ಜೊತೆ ಆರತಿ ಅವರ ಹೆಸರು ಥಳುಕು ಹಾಕಿಕೊಳ್ಳುತ್ತದೆ. 1981 ರಿಂದ 1985 ರ ಮಧ್ಯದಲ್ಲೆಲ್ಲೋ ಅವರಿಬ್ಬರ ನಡುವೆ ಸಂಪರ್ಕ ಏರ್ಪಟ್ಟಿದೆ ಎನ್ನುವುದು ಸತ್ಯ, ಆದರೆ ಖಚಿತವಾಗಿ ಯಾವಾಗ ಎಂದು ಇಲ್ಲಿಯತನಕ ಗೊತ್ತಾಗಿಲ್ಲ. ಆದರೆ ರಾಮಕೃಷ್ಣ ಹೆಗಡೆ ಮಂತ್ರಿಮಂಡಲದಲ್ಲಿ ರಘುಪತಿ ಯವರು ಪ್ರಭಾವಿ ಸಚಿವರಾಗಿದ್ದರು. ರಘುಪತಿ ಅವರ ಕೃಪಾಕಟಾಕ್ಷ ಆರತಿಗೆ ಬಿದ್ದಿತ್ತು. ಅದನ್ನೆ ಸರಿಯಾಗಿ ಬಳಸಿಕೊಂಡ ಆರತಿ ವಿಧಾನ ಪರಿಷತ್ ಹೊಕ್ಕಲು ಹೊಂಚು ಹಾಕಿದ್ದಳು. ಇದರಿಂದ ಹಠಕ್ಕೆ ಬಿದ್ದು ರಘುಪತಿ ಆಗಿನ ಜನತಾ ಪಕ್ಷದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯ ಮೇಲೆ ಒತ್ತಡ ಹಾಕುತ್ತಾರೆ. ರಾಮಕೃಷ್ಣ ಹೆಗ್ಗಡೆ ಕೂಡಾ, ಪ್ರಭಾವಿ ರಘುಪತಿಯವರ ವಿರುದ್ಧಕ್ಕೆ ಮಾತನಾಡಲಾರದೆ ಆರತಿಯನ್ನು ಮೇಲ್ಮನೆಗೆ ಆಯ್ಕೆ ಮಾಡಿಸುತ್ತಾರೆ. ಜೊತೆಗೆ ಬೆಂಗಳೂರಿನಲ್ಲಿ ಒಂದು ಬಂಗಲೆಯನ್ನು ಸಹ ಖರೀದಿ ಮಾಡಿ ಆರತಿಯವರಿಗೆ ರಘುಪತಿ ನೀಡುತ್ತಾರೆ. ಆ ಸುಮಾರಿಗೆ ಮಂತ್ರಿ ರಘುಪತಿಯವರು ಮತ್ತು ಆರತಿಯ ವಿವಾಹ ನಡೆದು ಹೋಗಿರುತ್ತದೆ ಎನ್ನಲಾಗಿದೆ. ಇಷ್ಟಾದರೂ ಅವರ ವಿವಾಹ ತುಂಬಾ ದಿನ ಬಾಳಲಿಲ್ಲ.

ಜನತಾ ಪಕ್ಷದ ಪ್ರಭಾವಿ ಸಚಿವ ರಘುಪತಿಯಾದರೂ ಆತ ಸಾಮಾನ್ಯದ ವ್ಯಕ್ತಿಯಲ್ಲ. ಆತನಿಗೆ ದೊಡ್ಡ ಜನಬೆಂಬಲವಿತ್ತು. ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಈ ಪ್ರಭಾವಿ ಶಾಸಕ ಅಂದುಕೊಂಡದ್ದನ್ನು ರಾಜಕೀಯವಾಗಿ ಸಾಧಿಸಬಲ್ಲ ಸಾಧಕನಾಗಿದ್ದರು. ಆದರೂ ಓರ್ವ ಹೆಣ್ಣಿನ ಮುಂದೆ ರಘುಪತಿ ಸೋತು ಹೋಗಿದ್ದರು.
ಇದರ ಮಧ್ಯೆ ರಘುಪತಿ ನಡುವೆಯೂ ಆರತಿಯವರಿಗೆ ಭಿನ್ನ ಅಭಿಪ್ರಾಯ ಮೂಡಲು ಶುರುವಾಗುತ್ತದೆ. ಕೇವಲ ಒಂದೆರಡು ವರ್ಷಗಳಲ್ಲಿ ರಘುಪತಿಯನ್ನೂ ತೊರೆದು ಆರತಿ ದೂರ ಹೋಗುತ್ತಾಳೆ. ಅದು ಸುಮಾರು 1987 ರ ಸಂದರ್ಭ. ಇದೇ ಸಂದರ್ಭದಲ್ಲಿ ಆರತಿ ಅವರು ಸಿನಿಮಾದಿಂದ ಹಾಗೂ ರಘುಪತಿ ಅವರ ಜೀವನದಿಂದ ದೂರವಾಗುತ್ತಾರೆ. ರಘುಪತಿ ಅವರಿಂದ ಆರತಿಯವರು ದೂರವಾದ ನಂತರ ರಘುಪತಿಯವರು ರಾಜಕೀಯದಲ್ಲಿ ಪೂರಾ ಆಸಕ್ತಿಯನ್ನು ಕಳೆದುಕೊಂಡು ರಾಜಕೀಯದಿಂದ ಸನ್ಯಾಸತ್ವವನ್ನು ಪಡೆದುಕೊಳ್ಳುತ್ತಾರೆ. ನಂತರ ಕಳೆದ ವರ್ಷ ಅಂದರೆ 2022, ಜೂನ್ 18 ರಂದು ತಮ್ಮ 81ನೇ ಪ್ರಾಯದಲ್ಲಿ ನಿಧನರಾಗುತ್ತಾರೆ.

ಹಾಗೆ ಆರತಿ ತಾನೇ ಆಯ್ಕೆ ಮಾಡಿಕೊಂಡ ಇಬ್ಬರೂ ಗಂಡಂದಿರಿಂದ ತಾನೇ ದೂರ ಹೋದಳು. ಒಂದು ಥರ, ಆಕೆಯ ಸಾವಾಸ ಮಾಡಿದರೆ ಏನೋ ದೊಡ್ಡ ಕೆಟ್ಟದಾಗುತ್ತೆ, ಗಳಿಸಿದ ಹಣ, ಹೆಸರು ಇಲ್ಲವಾಗತ್ತೆ ಅನ್ನೋ ಬಹುದೊಡ್ಡ ಪುಕಾರು ಆಗ ಎದ್ದಿತ್ತು. ಅದನ್ನು ಅಂದಿನ ಜನ ನಂಬಿದ್ದರು. ಇಂದಿಗೂ ಜನ ಅದನ್ನು ನಂಬುತ್ತಲೇ ಬಂದಿದ್ದಾರೆ. ಇಲ್ಲದೆ ಹೋದರೆ, ದೊಡ್ಡರಾಜನಂತೆ ತನ್ನ ಸಮಕಾಲಿನ ನಟರ ಮನಸ್ಸಿನಲ್ಲಿ ಭಯ ಭಕ್ತಿಯಿಂದ ನಮಸ್ಕರಿಸಿಕೊಳ್ಳುತ್ತಿದ್ದ ಪುಟ್ಟಣ್ಣ ಕಣಗಾಲ್, ಪತ್ನಿ ಆರತಿಯ ಎದುರು ಸಣ್ಣ ಹುಡುಗನ ತರ ಯಾಕೆ ಆಗಿ ಹೋಗಿದ್ದರು ? ನಂತರ ಆಕೆ ಪುಟ್ಟಣ್ಣ ಕಣಗಾಲ್’ರನ್ನು ತ್ಯಜಿಸಿ ಮುಂದೆ ಹೋದಳು. ಇದೇ ಕೊರಗಿನಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಲು ಆಗಿರಲಿಲ್ಲ. ಹಾಗೆ ಓರ್ವ ಪ್ರತಿಭಾವಂತ ನಿರ್ದೇಶಕ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ಹೋಗಿದ್ದ.

 

ಇಷ್ಟಕ್ಕೆ ಸುಮ್ಮನಾಗದ ಆರತಿ ಮುಂದೆ ಚಂದ್ರಶೇಖರ್ ದೇಸಾಯಿ ಗೌಡ ಎಂಬ ಹಾರ್ಡ್ ವೇರ್ ಇಂಜಿನಿಯರ್ ಅನ್ನು ಮದುವೆಯಾಗಿ ಅಮೆರಿಕಕ್ಕೆ ಹಾರಿ ಹೋಗುತ್ತಾರೆ. ಅಲ್ಲಿಯೇ ತಮ್ಮ ಬಿಡಾರ ಹೂಡುತ್ತಾಳೆ. ವಿಚಿತ್ರ ಏನೆಂದರೆ, ಆ ಸಮಯದಲ್ಲಿ ಅಮೆರಿಕಾದಲ್ಲಿನ ಮದುವೆಗಳು ಜಾಸ್ತಿ ಬಾಳಿಕೆ ಬರುತ್ತಿರಲಿಲ್ಲ. ಅಂತದ್ದರಲ್ಲಿ ಅಮೆರಿಕಕ್ಕೆ ಹೋದ ಮೇಲೆ ಆರತಿ ಬದುಕಿನಲ್ಲಿ ಸೆಟಲ್ ಆದರು ಅನ್ನೋದೇ ಬಹುದೊಡ್ಡ ವಿಶೇಷ !

ಅಂದಹಾಗೆ ತಾನು ಇಲ್ಲದೆ ಹೋದರೆ ಕನ್ನಡ ಇಂಡಸ್ಟ್ರಿಯೇ ಇಲ್ಲ ಎನ್ನುವ ಮಟ್ಟಿಗೆ ಟ್ರೆಂಡ್ ಸೃಷ್ಟಿಸಿದ್ದ ಆರತಿ, ಮುಂದೆ ಆಕೆ ಅಮೇರಿಕಾಕ್ಕೆ ಹಾರಿದಾಗ ಅವಳಿಲ್ಲದೆ ಹೋದದ್ದಕ್ಕೇ ಚಿತ್ರರಂಗವೇನೂ ಬಡವಾಗಲೂ ಇಲ್ಲ ಅಂತ ಹುಂಬ ನಿರ್ದೇಶಕರು ಮಾತಾಡಿಕೊಂಡರು. ಭಾಳಾ ಓವರ್‌ ಅ್ಯಕ್ಟಿಂಗ್‌ ಮಾಡ್ತಾ ಇದ್ದಳು ಮಾರಾಯರೇ ಎಂದು ರೂಟ್‌ಲೆಸ್‌ ಪತ್ರಕರ್ತರು ಬರೆದುಕೊಂಡರು. ಪಟ್ಟಣ್ಣರಿಂದ ನಾಶವಾದಳು, ರಾಜಕೀಯಕ್ಕೆ ಹೋಗಿ ಅಹಂಕಾರಿಯಾದಳು ಎಂದು ಕೆಲವರು ಕನಲಿದರು. ಆದರೆ ಆರತಿ ಮನಸ್ಸಿನಲ್ಲಿ ಏನಿತ್ತು ಅನ್ನುವುದು ಆ ನಂತರ ಎಲ್ಲೂ ಬಹಿರಂಗವಾಗಲೇ ಇಲ್ಲ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಇದ್ದಾಳಂತೆ. ಗಂಡ ಅದ್ಯಾವುದೋ ದೇಸಾಯಿಯಂತೆ. ಕಂಪ್ಯೂಟರ್‌ ಪಂಟರ್‌ ಅಂತೆ. ಸುಧಾರಾಣಿಗೊಮ್ಮೆ ಅಮೆರಿಕಾದಲ್ಲಿ ಸಿಕ್ಕಿದ್ದಳಂತೆ ಎಂಬಿತ್ಯಾದಿ ಗಾಳಿ ಮಾತುಗಳು ತೇಲಿ ಬಂದವು. ಆರತಿಯನ್ನು ನಿಜವಾಗಿಯೂ ಕಂಡವರಿದ್ದಾರೋ ಇಲ್ಲವೋ ಅನ್ನುವುದು ಕೊನೆಗೂ ವಿಷದವಾಗಲಿಲ್ಲ. ಒಟ್ಟಾರೆಯಾಗಿ ಆರತಿ ಸಾರ್ವಜನಿಕ ಬದುಕಿನಿಂದ ದೂರವಿದ್ದಾರೆ. ಅವರ ವೈಯಕ್ತಿಕ ಬದುಕಿನಲ್ಲಿ ಏನಾಯ್ತು ಅನ್ನೋದು ಕೂಡ ಚಿದಂಬರ ರಹಸ್ಯವೇ ಸರಿ !

ಇದನ್ನೂ ಓದಿ:Hair care: ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ

Leave A Reply

Your email address will not be published.