

ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆ ಕ್ಷೇತ್ರ ಹಾಗೂ ಸುಮಾರು ಎರಡೂವರೆ ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯ ದೇವಾಲಯ ಇನ್ನು ಮುಂದಕ್ಕೆ ‘ಕಾಶಿ ಕಾರಿಡಾರ್’ ರಥಬೀದಿಯಿಂದ ಕಂಗೊಳಿಸಲಿದೆ.
ಹೌದು.ಇತ್ತೀಚೆಗೆ ಪ್ರಧಾನಿ ವಾರಣಾಸಿಯಲ್ಲಿ ಉದ್ಘಾಟಿಸಿದ ‘ಕಾಶಿ ಕಾರಿಡಾರ್’ ಮಾದರಿಯಲ್ಲೇ ಕುಕ್ಕೆಯ ರಥಬೀದಿ ಸಿದ್ಧವಾಗಲಿದ್ದು, ಇದಕ್ಕಾಗಿಯೇ ಸುಮಾರು 300 ಕೋಟಿ ರೂಗಳ ಯೋಜನೆಯನ್ನು ರೂಪಿಸಲಾಗಿದೆ.
ಈಗಾಗಲೇ ಶಾಸಕ ಎಸ್ ಅಂಗಾರ ಹಾಗೂ ದೇವಾಲಯದ ಆಡಳಿತ ಮಂಡಳಿಯಲ್ಲಿ ಅಂಗೀಕಾರಗೊಂಡ ಯೋಜನೆಯ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಆಗಮಿಸಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಮೊದಲ ಹಾಗೂ ಎರಡನೇ ಸುತ್ತಿನ ಮಾಸ್ಟರ್ ಪ್ಲಾನ್ ಕಾಮಗಾರಿ ಪೂರ್ಣಗೊಂಡಿದ್ದು,ಒಳಚರಂಡಿ, ವಿಶಾಲವಾದ ರಸ್ತೆ ಹಾಗೂ ವಸತಿ ಗೃಹಗಳು ಸೇರಿವೆ. ಮುಂದಿನ 300 ಕೋಟಿಯ ಯೋಜನೆಯಲ್ಲಿ ಕುಕ್ಕೆಯ ರಥಬೀದಿ ಕಾಶಿ ಕಾರಿಡಾರ್ ನಿಂದ ಕೂಡಿರಲಿದೆ.
ಕಾಶಿ ಕಾರಿಡಾರ್ ಹೇಗಿರಲಿದೆ-ಏನೇನಿರಲಿದೆ?
ಸುಮಾರು 300 ಕೋಟಿ ರೂ ಗಳ ಈ ಯೋಜನೆಯಲ್ಲಿ ಒಂದೇ ಬಾರಿಗೆ 1000 ಜನರ ಆಶ್ಲೇಷ ಬಲಿ ಸೇವೆಗೆ 4 ಆಶ್ಲೇಷ ಬಲಿ ಮಂಟಪ,ಸುಮಾರು ಒಂದು ಲಕ್ಷ ಮಂದಿಗೆ ಭೋಜನದ ವ್ಯವಸ್ಥೆಗೆ ನಾಲ್ಕು ಸುಸಜ್ಜಿತ ಭೋಜನ ಶಾಲೆಯ ಜೊತೆಗೆ, ಮಕ್ಕಳಿಗೆ, ಹಿರಿಯ ನಾಗರಿಕರಿಗೆ,ವಿಐಪಿ ಗಳಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಇರಲಿದೆ.
ಅದಲ್ಲದೇ ಸುಮಾರು 175 ಮೀ ಇರುವ ರಥಬೀದಿಯ ಉದ್ದಕ್ಕೂ ವಿಜಯನಗರ ಶೈಲಿಯ ಕಲ್ಲಿನ ಕೆತ್ತನೆಗಳು-ಕಂಬಗಳು, ತುಳುನಾಡು ಶೈಲಿಯ ಮರದ ಕೆತ್ತನೆ, ಮೈಸೂರು ಶೈಲಿಯ ಒಳಾಂಗಣ ಜೊತೆಗೆ ಲೈಬ್ರರಿ, ಮ್ಯೂಸಿಯಂ,ಪುಣ್ಯ ಕ್ಷೇತ್ರಗಳ ಮಾಹಿತಿ ಜೊತೆಗೆ ಪುರಾತನ ಪ್ರಾಚೀನ ಕಾಲದ ವೈಭವಗಳ ದೃಶ್ಯ ಮಾಹಿತಿ ನೀಡುವ ಗ್ಯಾಲರಿ ಇರಲಿದ್ದು ಮುಂದಿನ ಹಂತದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.













