Home ದಕ್ಷಿಣ ಕನ್ನಡ ಬಂಟ್ವಾಳದಲ್ಲಿ ಒಂದು ಆದರ್ಶ ದಂಪತಿ | ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ’...

ಬಂಟ್ವಾಳದಲ್ಲಿ ಒಂದು ಆದರ್ಶ ದಂಪತಿ | ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ’ ಎಂದು ಹೆತ್ತಮ್ಮನನ್ನೆ ಶೌಚಾಲಯದಲ್ಲಿ ದೂಕಿದರು!

Hindu neighbor gifts plot of land

Hindu neighbour gifts land to Muslim journalist

ಮಗ ಮತ್ತು ಸೊಸೆಯೊಂದಿಗೆ ವಾಸವಿರುವ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಹೀನಾಯವಾಗಿ ನೋಡಿಕೊಂಡಿದ್ದಲ್ಲದೇ, ಅನ್ನ ನೀರು ಕೊಡದೆ ಶೌಚಾಲಯದಲ್ಲಿ ಕೂಡಿ ಹಾಕಿ ಕನಿಷ್ಠ ಮಾನವೀಯತೆ ಮರೆತ ಸಂಗತಿ ಒಂದು ಬೆಳಕಿಗೆ ಬಂದಿದೆ.

ಈ  ನೈಜ ಘಟನೆಯೊಂದು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ಎಂಬಲ್ಲಿ ನಡೆದಿದ್ದು, ವಿಷಯ ಗಮನಕ್ಕೆ ಬರುತ್ತಿದ್ದಂತೆ ಹಿರಿಯ ನಾಗರಿಕ ಸಮಿತಿ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು,ಈ ಬಗ್ಗೆ ವೃದ್ಧೆ ನೀಡಿದ ದೂರನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮಗ-ಸೊಸೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ:ಸುಮಾರು 70ರ ಹರೆಯದ ವೃದ್ಧೆ ಗಿರಿಜಾ ಎಂಬವರು ಬೆಂಜನಪದವು ಬಳಿ ತನ್ನ ಮಗ ಹರಿರಾಂ ಹಾಗೂ ಪೂಜಾ ಎಂಬವರೊಂದಿಗೆ ವಾಸವಿದ್ದರು. ಕಳೆದ ಕೆಲ ದಿನಗಳ ಹಿಂದೆ ಮನೆಯ ಜಗುಲಿಯಲ್ಲಿ ಜಾರಿ ಬಿದ್ದಿದ್ದ ಗಿರಿಜಾ, ಆ ಬಳಿಕ ಎದ್ದು ನಡೆದಾಡಲು ಪರದಾಡುತ್ತಿದ್ದರು.ಹೆತ್ತ ತಾಯಿಯ ಕಷ್ಟಕ್ಕೆ ಮರುಗದ ಮಗ ಹರಿರಾಮ್ ತನ್ನ ಪತ್ನಿಯೊಂದಿಗೆ ಸೇರಿ ವೃದ್ಧೆಗೆ ಚಿಕಿತ್ಸೆ ಕೊಡಿಸದೆ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

ಅತ್ತ ಇಳಿ ಪ್ರಾಯದ ವೃದ್ಧೆ ಸೊಂಟಕ್ಕಾದ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಮರುಗಿದ್ದು,ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದಾಗ ಆರೈಕೆ ಮಾಡುವ ಜವಾಬ್ದಾರಿ ಹೊತ್ತ ಮಗ ಮತ್ತು ಸೊಸೆ ಇಬ್ಬರೂ ಸೇರಿ ವೃದ್ಧೆ ಗಿರಿಜಾರನ್ನು ಶೌಚಾಲಯದಲ್ಲಿ ಕೂಡಿಹಾಕಿದ್ದರು.

ಅಲ್ಲದೆ, ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿದ್ದುದಲ್ಲದೆ, ತುಳು ಭಾಷೆಯಲ್ಲಿ ‘ಪರಬು ಸೈಪುನಿಲ ಇಜ್ಜಿ’, ( ಮುದುಕಿ ಸಾಯೋದು ಕೂಡಾ ಇಲ್ಲ) ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ’ ( ಮುದುಕಿ, ನಿನಗೆ ಊಟ ಕೊಡಲ್ಲ, ಮಣ್ಣು ತಿಂದು ಸಾಯು)ಎಂದು ತುಳು ಭಾಷೆಯಲ್ಲಿ ಬೈಯುತ್ತಿದ್ದಾರೆ. ಒಂದೆರಡು ದಿನಗಳಿಂದ ಅನ್ನ ನೀರು ಕೊಡದೆ ಸತಾಯಿಸಿದ್ದು, ಇಳಿ ವಯಸ್ಸಿನ ವೃದ್ಧೆ ಶೌಚಾಲಯದ ಕೋಣೆಯೊಳಗೆ ಏಕಾಂಗಿಯಾಗಿ ರೋಧಿಸುತ್ತಿರುವ ಮಾಹಿತಿ ತಿಳಿದ ಹಿರಿಯ ನಾಗರಿಕ ಸಮಿತಿ ಕೂಡಲೇ ವೃದ್ಧೆಯ ರಕ್ಷಣೆಗೆ ಮುಂದಾಗಿದೆ. ಬಳಿಕ ಸ್ಥಳಕ್ಕೆ ತೆರಳಿ ಶೌಚಾಲಯದಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತ ಹೆತ್ತು ಹೊತ್ತು ಸಾಕಿದ ತಾಯಿಯನ್ನು ಕಡೆಗಣಿಸಿ, ಕೊಡಬಾರದ ಮಾನಸಿಕ ಹಿಂಸೆ ಕೊಟ್ಟ ಮಗ ಹಾಗೂ ಸೊಸೆಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 336,504 ಜೊತೆ 34 ಐಪಿಸಿ ಮತ್ತು ಕಲಂ 24 /2007 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುತ್ತು ಕೊಡುವಾಕೆ ಬಂದಾಗ, ತುತ್ತು ಕೊಟ್ಟಾಕೆಯನ್ನೇ ಮರೆತ ಮತಿಗೆಟ್ಟ ಮಗನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಎಲ್ಲರ ಬಾಯಿಂದಲೂ ಅವರಿಬ್ಬರ ವರ್ತನೆಗೆ ಹಿಡಿ ಶಾಪದ ನುಡಿಗಳು ಬರಲಾರಂಭಿಸಿದೆ.
ನಿಮ್ಮಲ್ಲಿ ಯಾರಾದರೂ ಅವರ ಊರಿನವರಿದ್ದರೆ, ಅವರಿಗೆ ಒಂದು ‘ ಮರ್ಯಾದೆಯ ‘ ವಾಗ್ದಂಡನೆ ವಿಧಿಸಿ.