

ಮಂಗಳೂರು:ನಗರದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜಾನುವಾರು ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಸುಮಾರು 95ಕೆಜಿ ದನದ ಮಾಂಸ ಸಹಿತ ಕೃತ್ಯಕ್ಕೆ ಬಳಸುತ್ತಿದ್ದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ಜುಲೈ 03ರಂದು ನಡೆದಿದೆ.
ಪೊಲೀಸರ ದಾಳಿಯ ವೇಳೆ ಸ್ಥಳದಿಂದ ಪರಾರಿಯಾದ ಆರೋಪಿಯನ್ನು ಬಾಷಿತ್ ಎಂದು ಗುರುತಿಸಲಾಗಿದ್ದು, ಈತ ಅರ್ಕುಳ ಕೋಟೆ ನಿವಾಸಿ ಎ.ಕೆ ಖಾಲಿದ್ ಎಂಬವರಿಗೆ ಸೇರಿದ ಶೆಡ್ ಒಂದರಲ್ಲಿ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾರಾಟ ನಡೆಸುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮುಂಜಾನೆ ವೇಳೆ ದಾಳಿ ನಡೆಸಿದ್ದು, ದಾಳಿಯ ವೇಳೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಸುಮಾರು 95ಕೆಜಿ ದನದ ಮಾಂಸ, ಕತ್ತಿ, ತೂಕದ ಯಂತ್ರ ಸಹಿತ ಕೆಲ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













