

ಮಂಗಳೂರು: ನಗರದ ಹೊರವಲಯದ ಕಣ್ಣೂರು ಬಳಿಯ ಮೈದಾನದಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಜನಾಧಿಕಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆರು ಮಂದಿ ಯುವಕರು ಜಿಲ್ಲಾ ಪೊಲೀಸರನ್ನು ನಾಯಿಗೆ ಹೋಲಿಸಿ ಬಗ್ಗೆ ಬಂದಂತೆ ದೂಷಿಸಿಕೊಂಡು ನಿಂದಿಸಿದಲ್ಲದೇ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿದ ಆರೋಪದಲ್ಲಿ ಕಂಕನಾಡಿ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಮೇ 27 ರಂದು ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ತಮ್ಮ ಪಕ್ಷದ ಬಾವುಟ ಹಿಡಿದು ಪಡೀಲ್ ಕಡೆಯಿಂದ ಸಂಚಾರ ನಿಯಮ ಉಲ್ಲಂಘಿಸಿ ಬಂದಿದ್ದ ಬೈಕ್ ಸವಾರರು ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸುತ್ತಾ ಬರುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಅಂದು ಅವಾಚ್ಯ ಶಬ್ದ ಬಳಸಿ ಘೋಷಣೆ ಕೂಗಿದ್ದಲ್ಲದೇ, ‘ ಪೋಡ ಪುಲ್ಲೆ ಪೊಲೀಸ್, ನಾಯಿಂಡೆ ಮೋನೆ ಪೊಲೀಸ್ ‘ ಎಂದೆಲ್ಲ ಅವಾಚ್ಯವಾಗಿ ನಿಂದಿಸುತ್ತಿರುವುದು ಕಂಡುಬಂದಿದೆ.
ಅದಲ್ಲದೇ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆಯೇ ವಾಹನ ಹತ್ತಿಸಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಸಿಬ್ಬಂದಿ ಪಕ್ಕಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದರು.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕರ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು, ಕೂಡಲೇ ಜಿಲ್ಲಾ ಪೊಲೀಸ್ ತಮ್ಮ ಕಾನೂನಿನ ರುಚಿ ತೋರಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿತ್ತು.
ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಉನ್ನತ ಪೊಲೀಸ್ ಅಧಿಕಾರಿಗಳು ಅಪರಿಚಿತ KTM ಬೈಕ್ ಸವಾರ ಹಾಗೂ ಸಹಸವಾರ, ಅಪರಿಚಿತ ಸ್ಕೂಟರ್ ಸವಾರ ಹಾಗೂ ಸಹಸವಾರ, ಕಾರು ಚಾಲಕ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ತನಿಖೆ ಮುಂದುವರಿದಿದೆ.













