

ಪ್ರೀತಿಸುತ್ತಿದ್ದ ಯುವತಿಯನ್ನು ಬಚ್ಚಿಟ್ಟ ಯುವತಿಯ ಚಿಕ್ಕಮ್ಮನಿಗೆ ಅಶ್ಲೀಲ ವೀಡಿಯೋ ಸಹಿತ ಸಂದೇಶ ಕಳುಹಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸಂತೋಷ್ ಎಂದು ಗುರುತಿಸಲಾಗಿದೆ.
ಘಟನೆ ವಿವರ:ಆರೋಪಿ ಸಂತೋಷ್ ಯುವತಿಯೊರ್ವಳನ್ನು ಪ್ರೀತಿಸುತ್ತಿದ್ದ ವಿಚಾರ ಮನೆಯವರ ಗಮನಕ್ಕೆ ಬಂದಿತ್ತು.ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿ, ಆತನಿಂದ ಆಕೆಯನ್ನು ದೂರಮಾಡಲು ಯುವತಿಯ ಚಿಕ್ಕಮ್ಮನ ಮನೆಯಲ್ಲಿರಿಸಿದ್ದರು. ಆದರೆ ಯುವತಿ ಅಲ್ಲಿಯೂ ಆತನೊಂದಿಗೆ ಕದ್ದುಮುಚ್ಚಿ ಫೋನ್ ನಲ್ಲಿ ಮಾತನಾಡುವುದು ಗಮನಕ್ಕೆ ಬಂದಾಗ ಆಕೆಯ ಚಿಕ್ಕಮ್ಮ ಮೊಬೈಲ್ ತೆಗೆದುಕೊಂಡಿದ್ದಲ್ಲದೇ, ಸಿಮ್ ಕಾರ್ಡ್ ಕೂಡಾ ಎಸೆದಿದ್ದರು.
ಇದಾದ ಬಳಿಕ ಆರೋಪಿ ಯುವತಿಯನ್ನು ಬಚ್ಚಿಟ್ಟ ಯುವತಿಯ ಚಿಕ್ಕಮ್ಮನಿಗೆ ಕರೆಮಾಡಿ ಜಗಳವಾಡಿದ್ದು,ಈತನ ಕಿರಿಕಿರಿ ತಾಳಲಾರದೇ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದರು. ಇದರಿಂದ ಕೋಪಗೊಂಡ ಸಂತೋಷ್ ಬೇರೊಂದು ನಂಬರ್ ನಲ್ಲಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದು, ಅದಲ್ಲದೇ ಆತನದ್ದೇ ಅಶ್ಲೀಲ ವೀಡಿಯೋ ಕಳುಸಿದ್ದ. ಇದರಿಂದ ಮಾನಸಿಕವಾಗಿ ಹಿಂಸೆಗೊಳಗಾದ ಯುವತಿಯ ಚಿಕ್ಕಮ್ಮ ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸದ್ಯ ಆರೋಪಿಯ ಬಂಧನವಾಗಿದೆ.













