

ಉಳ್ಳಾಲ : ಮಗಳ ಹುಟ್ಟಿದ ದಿನಕ್ಕೆ ಅದ್ದೂರಿ ಪಾರ್ಟಿ ಮಾಡುವ ಎಂದ ತಂದೆಯೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಮಗಳ ಹುಟ್ಟಿದ ಹಬ್ಬದ ಆಚರಣೆಯ ಬದಲು ತಂದೆಯ ತಿಥಿ ಕಾರ್ಯ ಮಾಡುವ ದೌರ್ಭಾಗ್ಯ ಈ ಕುಟುಂಬಕ್ಕೆ ಒದಗಿ ಬಂದಿದೆ. ತಂದೆಯೊಬ್ಬ ತನ್ನ ಹೆಂಡತಿ ಮೇಲಿನ ಕೋಪಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆಯೊಂದು ಕೊಲ್ಯ ಕಣೀರು ತೋಟದ ಕಣೀರುಬೀಡು ಎಂಬಲ್ಲಿ ನಡೆದಿದೆ.
ಕಣೀರು ತೋಟ ನಿವಾಸಿ ಪ್ರವೀಣ್ ಪೂಜಾರಿ ( 34) ಯಾನೆ ಪವನ್ ಆತ್ಮಹತ್ಯೆಗೈದ ದುರ್ದೈವಿ. ಪ್ರವೀಣ್ ಖಾಸಗಿ ಬಸ್ಸಿನಲ್ಲಿ ಚೆಕ್ಕರ್ ಆಗಿ ಕೆಲಸ ಮಾಡುತ್ತಿದ್ದು ನಿನ್ನೆ ಸಂಜೆ 6 ಗಂಟೆಗೆ ಮನೆಗೆ ಬಂದವರು ಕೋಣೆಯೊಳಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರವೀಣ್ ಅವರ ತಾಯಿ ಮನೆ ಹೊರಗಡೆ ಬೀಡಿ ಕಟ್ಟುತ್ತಿದ್ದರು. ಸಂಜೆ 7.30 ಗಂಟೆಗೆ ಪತ್ನಿ ಕೆಲಸದಿಂದ ಮರಳಿದಾಗ ಕೋಣೆಯೊಳಗಿನ ಪಕ್ಕಾಸಿಗೆ ಪ್ರವೀಣ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ದಾಂಪತ್ಯ ಕಲಹವೇ ಕಾರಣ ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಪ್ರವೀಣ್ ಪ್ರೀತಿಸಿ ಮದುವೆಯಾಗಿದ್ದು, ಐದು ವರ್ಷದ ಮುದ್ದಾಗ ಹೆಣ್ಮಗು ಇದೆ. ಮುಂದಿನ ವಾರ ಮಗುವಿನ ಹುಟ್ಟುಹಬ್ಬದ ದಿನದಂದೇ ತಂದೆಯ ತಿಥಿ ಕಾರ್ಯ ಮಾಡುವ ದೌರ್ಭಾಗ್ಯ ಬಂದಿದೆ.













