

ಬೆಳ್ತಂಗಡಿ: ಎಂದಿನಂತೆ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಸವಾರನೋರ್ವ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರದಡಿಗೇ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ತಾಲೂಕಿನ ಚಾರ್ಮಾಡಿ ಪೇಟೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮೃತ ಯುವಕನನ್ನು ಚಾರ್ಮಾಡಿ ಮೇಗಿನ ಪೇಟೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ನಾಝಿರ್(25)ಎಂದು ಗುರುತಿಸಲಾಗಿದ್ದು,ಸಹಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಇನ್ನೊಂದು ಬೈಕಿನ ಸವಾರ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತ ಯುವಕನು ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ತನ್ನ ಗೆಳೆಯನೊಂದಿಗೆ ಮನೆಯತ್ತ ಹೊರಟಿದ್ದ. ಚಾರ್ಮಾಡಿ ಪೇಟೆ ದಾಟಿ ಮುಂದಕ್ಕೆ ಬರುವಾಗ ಕಲ್ಲಿನ ಲಾರಿಯೊಂದನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ.
ಘಟನೆಯಲ್ಲಿ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.













