# ಸಂಬಳ ಪೂರ್ತಿ ಖರ್ಚು ಮಾಡ್ತಾಳೆ, ಅವಳ  ಬದ್ಲು ನಮ್ಮ ಅಕೌಂಟ್‌ಗೆ ಹಾಕಿ – ಆನ್‌ಲೈನ್ ಮೀಟಿಂಗ್‌ನಲ್ಲಿ ಮಗಳ ಬಾಸ್‌ಗೆ ಅಪ್ಪ ಮನವಿ

- Link: https://hosakannada.com/news/father-appeals-to-daughters-boss-in-online-meeting-hacking-her-account-spending-entire-salary/
- Published: 2026-08-24T19:32:45+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರಿನ ಕುಟುಂಬ ಒಂದರಲ್ಲಿ ಹಾಸ್ಯಸ್ಪದ ಘಟನೆಯೊಂದು ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಾರಿ
ವೈರಲಾಗುತ್ತಿದೆ. ಅದೇನೆಂದರೆ ಯುವತಿಯೊಬ್ಬಳ ಆಫೀಸ್ ಮೀಟಿಂಗ್ ಮಧ್ಯೆಯೇ ಆಕೆಯ ತಂದೆ ಏಕಾಏಕಿ ಪ್ರತ್ಯಕ್ಷವಾಗಿ,
ಆಕೆಯ ದುಂದುವೆಚ್ಚದ ಬಗ್ಗೆ ಸಹೋದ್ಯೋಗಿಗಳ ಎದುರೇ ಕ್ಲಾಸ್ ತಗೆದುಕೊಂಡಿರುವುದು ಎಲ್ಲರೂ ನಗೆಗಡದಲ್ಲಿ
ತೇಲುವಂತೆ ಮಾಡಿದೆ.

Sponsored

‘ಲೈಫ್ ಅಟ್ ಜೋರ್ಚಾ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಮೂವರು ಉದ್ಯೋಗಿಗಳು
ಗಂಭೀರವಾಗಿ ಆನ್ಲೈನ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಯುವತಿಯ ತಂದೆ ಕೋಣೆಯೊಳಗೆ ಬಂದು,
ತಡರಾತ್ರಿ ಆಕೆಗೆ ಡೆಲಿವರಿಯಾದ ಪಾರ್ಸೆಲ್ ನೋಡಿ ಸಿಡಿಮಿಡಿಗೊಳ್ಳುತ್ತಾರೆ. “ರಾತ್ರಿ ಹನ್ನೊಂದೂವರೆ
ಗಂಟೆಗೆ ನಿನ್ನ ಪಾರ್ಸೆಲ್‌ಗಳು ಮನೆಗೆ ಬರುತ್ತಿವೆಯಲ್ಲ, ಏನ್ ನಡೀತಿದೆ ಇಲ್ಲಿ?” ಎಂದು ಮಗಳನ್ನು 
ತರಾಟೆಗೆ ತೆಗೆದುಕೊಳ್ಳಲು ಆರಂಭಿಸುತ್ತಾರೆ.

Advertisement

Advertisement

ಆಕೆ ತಾನು ಆಫೀಸ್ ಮೀಟಿಂಗ್‌ನಲ್ಲಿದ್ದೇನೆ ಎಂದು ತಂದೆಗೆ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಾಳೆ.
ಆದರೆ ತಂದೆ ಮಾತ್ರ ಲೆಕ್ಕಿಸದೆ “ಯಾವ ಮೀಟಿಂಗ್ ಅದು, ನನಗೆ ತೋರಿಸು” ಎಂದು ಲ್ಯಾಪ್‌ಟಾಪ್ ಪರದೆಯತ್ತ
ಮುಖ ಮಾಡುತ್ತಾರೆ. ನಂತರ ಮಗಳ ಖರ್ಚಿನ ಅಭ್ಯಾಸದ ಬಗ್ಗೆ ಆಕೆಯ ಸಹೋದ್ಯೋಗಿಗಳ ಎದುರೇ ದೂರು ಹೇಳಲು 
ಶುರು ಮಾಡುತ್ತಾರೆ. “ಇವಳಿಗೆ ಸ್ವಲ್ಪ ಬುದ್ಧಿ ಹೇಳಿ, ಬರುವ ಪೂರ್ತಿ ಸಂಬಳವನ್ನು ಖರ್ಚು ಮಾಡುತ್ತಾಳೆ,
ಒಂದು ಪೈಸೆ ಕೂಡ ಉಳಿತಾಯ ಮಾಡುವುದಿಲ್ಲ” ಎಂದು ಆಕೆಯ ತಂದೆ ಬಹಿರಂಗವಾಗಿಯೇ ಅಳಲು ತೋಡಿಕೊಳ್ಳುತ್ತಾರೆ.

ಇಷ್ಟಕ್ಕೇ ನಿಲ್ಲಿಸದ ಅವರು, ಮುಂದಿನ ತಿಂಗಳಿಂದ ಮಗಳ ಸಂಬಳವನ್ನು ಆಕೆಯ ಖಾತೆಗೆ ಹಾಕುವ ಬದಲು ತಮ್ಮ
ಖಾತೆಗೆ ಜಮೆ ಮಾಡುವಂತೆ ಆಕೆಯ ಮೇಲಾಧಿಕಾರಿಗೆ ತಮಾಷೆಯಾಗಿ ಮನವಿ ಮಾಡುತ್ತಾರೆ. ಹಾಗೆ ಮಾಡಿದರೆ ತಾವಾದರೂ
ಆ ಹಣವನ್ನು ಸೂಕ್ತವಾಗಿ ಹೂಡಿಕೆ ಮಾಡಿ ಉಳಿಸುವುದಾಗಿ ಹೇಳುತ್ತಾರೆ. ಜೊತೆಗೆ ಸಭೆಯಲ್ಲಿದ್ದ ಇತರ ಸಹೋದ್ಯೋಗಿಗಳನ್ನು
ಉದ್ದೇಶಿಸಿ, ನೀವುಗಳಾದರೂ ಹಣವನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದೀರಾ ಅಥವಾ ಹೀಗೆಯೇ ಪೋಲು ಮಾಡುತ್ತಿದ್ದೀರಾ
ಎಂದು ವಿಚಾರಿಸಿ ಆಶ್ಚರ್ಯ ಮೂಡಿಸುತ್ತಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ 22 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು,
ನೆಟ್ಟಿಗರಿಂದ ಹಾಸ್ಯಸ್ಪಂದನೆ ವ್ಯಕ್ತವಾಗಿದೆ.

Advertisement
