# ಅಡಕೆ, ಕರಿಮೆಣಸು ಮ್ಯಾನ್ಮಾರ್ ಗಡಿಯಿಂದ ಕಡಿಮೆ ಬೆಲೆಗೆ ಆಮದು | ಕ್ಯಾಂಪ್ಕೋದಿಂದ ಕೇಂದ್ರಕ್ಕೆ ತುರ್ತು ಮನವಿ!!!

- Link: https://hosakannada.com/news/arrecanut-import/
- Published: 2022-06-01T21:34:38+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು : ಮ್ಯಾನ್ಮಾರ್ ಗಡಿಯಲ್ಲಿನ ಐಸಿಪಿ, ಮೊರೇಹ್ (ಮಣಿಪುರ)ದಲ್ಲಿನ ಗೇಟ್ 1 ಮತ್ತು 2ನ್ನು ತೆರೆದು
ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಿದೆ. ಇತರ ವಸ್ತುಗಳ ಜತೆ ಸಾಂಬಾರು ವಸ್ತುಗಳ ಹೆಸರಿನಲ್ಲಿ
ಅಡಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ
ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್‌ಗೆ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆ ‘ಕ್ಯಾಂಪ್ಕೋ’
ಪತ್ರ ಬರೆದಿದೆ.

Sponsored

ದೇಶದ ಹಿತಾಸಕ್ತಿ ನೆಲೆಯಲ್ಲಿ ನೆರೆಯ ದೇಶಗಳ ಜತೆ ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸುವ ಸರ್ಕಾರದ
ಕ್ರಮ ಸ್ವಾಗತಾರ್ಹ. ಆದರೆ, ಈ ಗೇಟುಗಳಲ್ಲಿ ಇತರ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿದರೂ,
ಅಡಕೆ ಮತ್ತು ಕಾಳುಮೆಣಸು ಒಳ ಬರದಂತೆ ನಿರ್ಬಂಧಿಸಬೇಕು.

Advertisement

Advertisement

ರಾಷ್ಟ್ರೀಯ ಹಿತಾಸಕ್ತಿ ಮತ್ತು ಈಶಾನ್ಯ ರಾಜ್ಯಗಳ ಬೇಡಿಕೆಯಂತೆ ನೆರೆಯ ದೇಶಗಳ ಜತೆ ವ್ಯಾಪಾರ ವಹಿವಾಟಿಗೆ
ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ (ಬಿಎಂ ವಿಭಾಗ) ಮೇ 20ರಂದು ಹೊರಡಿಸಿರುವ
ಅಧಿಸೂಚನೆಯಡಿ ಮಣಿಪುರದ ಮೊರೇಜ್‌ನ ಐಸಿಪಿಯಲ್ಲಿನ ಗೇಟ್ ನಂ. 1 ಮತ್ತು 2ನ್ನು ತೆರೆಯಲು ಸೂಚಿಸಿದೆ.
2020ರಿಂದ ಈ ಗೇಟುಗಳನ್ನು ಬಂದ್ ಮಾಡಲಾಗಿತ್ತು. ಈ ಕ್ರಮದಿಂದ ಒಟ್ಟಾರೆ ವ್ಯಾಪಾರ ವಹಿವಾಟಿಗೆ ಉತ್ತೇಜನ
ಲಭಿಸಿದ್ದರೂ ಅಡಕೆ ಮತ್ತು ಕಾಳು ಮೆಣಸು ಕೂಡಾ ಈ ಮಾರ್ಗದಲ್ಲಿ ಒಳನುಸುಳಲು ಆರಂಭವಾಗಿರುವುದು ಸಮಸ್ಯೆಯಾಗಿದೆ.

ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ವಿದೇಶಾಂಗ ಸಚಿವರ ಗಮನ ಸೆಳೆದಿದೆ. 1973ರ ಜು.11ರಂದು ಬಹುರಾಜ್ಯ 
ಸಹಕಾರಿ ಸಂಸ್ಥೆಯಾಗಿ ಬೆಳೆಗಾರರಿಂದಲೇ ಬೆಳೆಗಾರರಿಗೋಸ್ಕರ ಹುಟ್ಟಿಕೊಂಡ ಕ್ಯಾಂಪ್ಕೋ ಪ್ರಸಕ್ತ 1,20,000
ರೈತ ಬೆಳೆಗಾರರನ್ನು ಹೊಂದಿದ್ದು, ಅಡಿಕೆ, ಕೊಕ್ಕೋ, ರಬ್ಬರ್, ಕಾಳುಮೆಣಸು ಬೆಳೆಗಾರರಿಗೆ ಬೆಂಬಲವಾಗಿ
ನಿಂತಿದೆ ಎಂಬುದನ್ನು ಕ್ಯಾಂಪ್ಕೋ ಮನವಿಯಲ್ಲಿ ತಿಳಿಸಿದೆ.

ಅಡಕೆ ಈ ಹಿಂದೆ ಸಿಲ್ದಾರ್, ಅಸ್ಸಾಂ, ಫಾಲಕಾಂತ, ಪಶ್ಚಿಮ ಬಂಗಾಳ ಮೂಲಕ ಬರ್ಮಾದಿಂದ ರಾಜಾರೋಷವಾಗಿ 
ಕಳ್ಳಮಾರ್ಗದಲ್ಲಿ ಗಡಿಯೊಳಗೆ ನುಸುಳುತ್ತಿತ್ತು. ಅಡಕೆ ಬೆಳೆಗಾರರಿಗೆ ಇದರಿಂದ ತೀವ್ರ ಸಂಕಷ್ಟ ಎದುರಾಗಿತ್ತು.
ಇದನ್ನು ಮನಗಂಡ ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ. 108ರಷ್ಟು ಹೇರುವ ಮೂಲಕ ಕಿಲೋವೊಂದರ ಮೇಲೆ
251 ರೂ. ವಿಧಿಸಿತ್ತು. ಇದರಿಂದಾಗಿ ಅಡಕೆ ಮಾರುಕಟ್ಟೆ ಸ್ಥಿರತೆ ಕಾಣುವಂತಾಗಿತ್ತು ಎಂಬ ಅಂಶವನ್ನೂ
ಕ್ಯಾಂಪೋ ಮನವಿಯಲ್ಲಿ ವಿದೇಶಾಂಗ ಸಚಿವರ ಗಮನಕ್ಕೆ ತಂದಿದೆ.

ಅಡಕೆ ಉತ್ಪಾದನಾ ವೆಚ್ಚ ಇತ್ತೀಚೆಗೆ ಗಣನೀಯವಾಗಿ ಏರಿಕೆಯಾಗಿದೆ. ಅಡಕೆ ಕಿಲೋಗೆ ಉತ್ಪಾದನಾ ವೆಚ್ಚ 
360 ರೂ.ಗೂ ಅಧಿಕವಾಗಿದೆ. ಹಾಗಾಗಿ ಈ ಗರಿಷ್ಠ ಮೊತ್ತವನ್ನು ಆಮದು ಮೇಲೆ ನಿಗದಿಪಡಿಸಿದರೆ ಹೊರದೇಶಗಳಿಂದ
ಅಡಕೆ ಆಮದಿಗೆ ಕಡಿವಾಣ ಬೀಳಬಹುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಹೇಳಿದ್ದಾರೆ

Advertisement
