# ಸೆ. 25 ರಿಂದ 27 ರವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಕೃಷಿ ಮತ್ತು ಆಹಾರ ಮೇಳ

- Link: https://hosakannada.com/news/agriculture-and-food-fair-at-surathkal-bunts-bhavan-from-september-25-to-27/
- Published: 2026-09-23T10:19:44+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ಸುರತ್ಕಲ್‌ನಲ್ಲಿ ಕೃಷಿ ಹಾಗೂ ಆಹಾರ ಮೇಳವನ್ನು ಸೆ.25ರಿಂದ
27ರವರೆಗೆ ಆಯೋಜಿಸಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್‌ ರಾಜ್‌ ಸೊರಕೆ ತಿಳಿಸಿದ್ದಾರೆ.

Sponsored

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಸುರತ್ಕಲ್ ನ ಲಯನ್ಸ್
ಕ್ಲಬ್ ಮತ್ತು ಬಂಟರ ಸಂಘ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ
ಸಾರ್ವಜನಿಕರಿಗೆ ಮೇಳ ವೀಕ್ಷಿಸಲು ಅವಕಾಶವಿದೆ ಎಂದರು.

Advertisement

Advertisement

ಕೃಷಿ ಕಾರ್ಯವನ್ನು ಸುಲಭಗೊಳಿಸುವ ವಿವಿಧ ಸಲಕರಣೆಗಳ ಪರಿಚಯ, ಅವುಗಳ ಬಳಕೆ ಹಾಗೂ ಲಭ್ಯತೆ ಕುರಿತು 
ಕೃಷಿಕರಿಗೆ ಮಾಹಿತಿ ನೀಡುವುದು ಮೇಳದ ಪ್ರಮುಖ ಉದ್ದೇಶ. ಕೃಷಿ ಸಲಕರಣೆಗಳ ಮಾಹಿತಿ ಮತ್ತು ಮಾರಾಟಕ್ಕೆ
ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೃಷಿಕರು ತಮ್ಮ ಅಗತ್ಯಕ್ಕೆ ತಕ್ಕ ಉಪಕರಣಗಳನ್ನು ನೇರವಾಗಿ ವೀಕ್ಷಿಸಿ,
ಅವುಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಮೇಳ ಸಹಕಾರಿಯಾಗಲಿದೆ. ಕೃಷಿ ಕ್ಷೇತ್ರಕ್ಕೆ ಪೂರಕವಾಗಿರುವ
ವಿವಿಧ ಸಲಕರಣೆಗಳ ಮಾರಾಟ ಮಳಿಗೆಗಳೂ ಮೇಳದಲ್ಲಿ ಇರಲಿವೆ ಎಂದು ಮಾಹಿತಿ ನೀಡಿದರು.

ಮನೆ ತೋಟ, ಕೈತೋಟ ಹಾಗ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವರಿಗೂ ಮೇಳ ಉಪಯುಕ್ತವಾಗಲಿದೆ.
ಸಸಿ ಬೆಳೆಸುವಿಕೆ, ತೋಟಗಾರಿಕೆ ಹಾಗೂ ಕೃಷಿ ಕಾರ್ಯಗಳಿಗೆ ಬೇಕಾಗುವ ಸಾಮಗ್ರಿಗಳ ಪರಿಚಯ ಮತ್ತು ಮಾರಾಟಕ್ಕೆ
ಅವಕಾಶವಿರುವುದರಿಂದ ನಗರ ಪ್ರದೇಶದ ತೋಟಗಾರಿಕೆ ಆಸಕ್ತರೂ ಮೇಳದ ಪ್ರಯೋಜನ ಪಡೆಯಬಹುದಾಗಿದೆ ಎಂದು ಭರತ್
ರಾಜ್ ಸೊರಕೆ ತಿಳಿಸಿದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ
ಕಟ್ಲ, ರೈತಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಮಳಲಿ ಮತ್ತಿತರರು ಇದ್ದರು.

Advertisement
