# ಉ.ಕ: ಸಮುದ್ರದಲ್ಲಿ ಮುಳುಗಿ ಯುವತಿ ಸೇರಿ ಮೂವರು ಐಟಿ ಉದ್ಯೋಗಿಗಳ ಸಾವು

- Link: https://hosakannada.com/death/u-k-three-employees-including-a-young-woman-die-after-drowning-in-the-sea/
- Published: 2026-11-02T07:29:09+00:00
- Author: ಹೊಸಕನ್ನಡ ನ್ಯೂಸ್

ಉತ್ತರ ಕನ್ನಡ: ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳ ತಂಡದ ಪ್ರವಾಸವು ದುರಂತಮಯವಾಗಿ
ಅಂತ್ಯಗೊಂಡಿದೆ. ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರೀ ಅಲೆಗೆ ಸಿಲುಕಿ ಐವರು ಉದ್ಯೋಗಿಗಳು ಕೊಚ್ಚಿ
ಹೋಗಿದ್ದು, ಇದರಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಉಳಿದ ಇಬ್ಬರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಣೆ
ಮಾಡಿದ್ದಾರೆ.

Sponsored

ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್‌ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕೆಂದು
ಗೋಕರ್ಣಕ್ಕೆ ಬಂದಿತ್ತು. ದುಬ್ಬಣಶಶಿ ಬೀಚ್‌ನಲ್ಲಿರುವ ಕೋಜೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ
ತಂಡದ ಕೆಲವರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು. ಈ ವೇಳೆ ಅಲೆಯೊಂದು ಏಕಾಏಕಿ ಅಪ್ಪಳಿಸಿದ್ದು,
ಐವರು ಸಿಲುಕಿ ಕೊಚ್ಚಿ ಹೋಗಿದ್ದರು.

Advertisement

Advertisement

ಘಟನೆ ತಿಳಿಯುತ್ತಿದ್ದಂತೆ ರೆಸಾರ್ಟ್‌ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಐ ಮೀನುಗಾರರು ತಕ್ಷಣ ಕಾರ್ಯಾಚರಣೆ
ಮಾಡಿ ನಾಲ್ವರನ್ನು ದಡಕ್ಕೆ ಕರೆತಂದಿದ್ದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಜಾರ್ಖಂಡ್‌ ಮೂಲದ 22
ವರ್ಷದ ಶೋಭಾ ದಾಸ್‌ ಆಸ್ಪತ್ರೆಯಲ್ಲಿ ಮೃತಪಟ್ಟರು. ತಂಡದ ನಾಯಕ ಮಹಮ್ಮದ್‌ ಅಕ್ರಮ ಅವರನ್ನು ಹೆಚ್ಚಿನ
ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಸಾವಿಗೀಡಾದರು.

ಬೆಂಗಳೂರಿನ ಕಲ್ಯಾಣನಗರದ 24 ವರ್ಷದ ವಿಶ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ 
ನಡೆದಾಗ ಅವರ ಮೃತದೇಹ ಪತ್ತೆಯಾಗಿದೆ. ನಿಶಾಂತ್‌ ಮತ್ತು ಮಹಮ್ಮದ್‌ ಖಾಸಿಂ ಅವರನ್ನು ಜೀವರಕ್ಷಕ ಸಿಬ್ಬಂದಿ
ರಕ್ಷಣೆ ಮಾಡಿದ್ದು, ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಗೋಕರ್ಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕಾರವಾರ
ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.

Advertisement
