# ಬಂಟ್ವಾಳ: ನೀರು ಸರಬರಾಜು ಕಡಿತ ವಿಚಾರ-ತಲವಾರು, ರಾಡ್‌ನಿಂದ ದಾಳಿ-ಪ್ರಕರಣ ದಾಖಲು

- Link: https://hosakannada.com/crime/bantwal-case-filed-over-sword-and-rod-attack-on-water-supply-dispute/
- Published: 2026-09-22T11:31:57+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ: ಪಂಚಾಯಿತಿ ನೀರು ಸರಬರಾಜು ಕಡಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ದ್ವೇಷ ಹೊಂದಿದ್ದ ಮೂವರು
ವ್ಯಕ್ತಿಗಳು ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನ
ಮಾಡಿದ ಆರೋಪ ಕೇಳಿಬಂದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

ತೆಂಕಬೆಳ್ಳೂರು ಗ್ರಾಮದ ಧನುಪೂಜೆ ನಿವಾಸಿ ಪ್ರಶಾಮತ್‌ ಬೆಳ್ಚಾಡ್‌ (41) ಅವರು ನೀಡಿದ ದೂರಿನ ಆಧಾರದಲ್ಲಿ
ಪ್ರಕರಣ ದಾಖಲಾಗಿದ್ದು, ಪ್ರಶಾಂತ್‌, ರಾಮದಾಸ ಹಾಗೂ ಶಂಕರ ಎಂಬುವವರ ವಿರುದ್ಧ ಆರೋಪ ಮಾಡಲಾಗಿದೆ.

Advertisement

Advertisement

ತೆಂಕಬೆಳ್ಳೂರು ವಾರ್ಡ್‌ನಲ್ಲಿ ಪಂಚಾಯಿತಿ ನೀರು ಸರಬರಾಜು ಮಾಡುವ ಕೆಲಸವನ್ನು ದೂರುದಾರರಾದ ಪ್ರಶಾಂತ್‌
ಬೆಳ್ಚಾಡ್‌ ಅವರು ಮಾಡುತ್ತಿದ್ದು, ಕಮ್ಮಾಜಿ ಧನುಪೂಜೆ ನಾಗಶ್ರೀ ಮಿತ್ರ ಮಂಡಳಿಯವರು ಪಂಚಾಯಿತಿಯ ಅನುಮತಿ
ಪಡೆಯದೆ ಒಂದು ಇಂಚಿನ ಪೈಪ್‌ ಅಳವಡಿಸಿ ನೀರು ಸರಬರಾಜು ಮಾಡುವುದನ್ನು ಪಂಚಾಯಿತಿ ಗಮನಕ್ಕೆ ತಂದ ಕಾರಣ
ಪಿಡಿಒ ಆದೇಶದಂತೆ ನೀರು ಸರಬರಾಜು ಕಡಿತ ಮಾಡಲಾಗಿತ್ತು. ಹೀಗಾಗಿ ಮಿತ್ರಮಂಡಳಿಯ ಅಧ್ಯಕ್ಷ ರಾಮದಾಸ 
ಅವರು ದೂರುದಾರರ ಮೇಲೆ ದ್ವೇಷ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ಸೆ.20 ರಂದು ಆಟೋರಿಕ್ಷಾದಲ್ಲಿ ಕೆಮ್ಮಾಜಿಯ ಶ್ರೀಕಾವೇಶ್ವರ ಜನರಲ್‌ ಸ್ಟೋರ್‌ಗೆ ಪ್ರಶಾಂತ್‌ ಬೆಳ್ಚಾಡ್‌
ಬಂದಾಗ ಈ ವೇಳೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಪ್ರಶಾಂತ್‌ ಅವರನ್ನು ತಿಲಕ್‌ ಮತ್ತು
ಪ್ರೀತಂ ಖಾಸಗಿ ವಾಹನದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ
ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
